September 12, 2026
Saturday, September 12, 2026
spot_img

‘ಉಗ್ರವಾದಕ್ಕೆ ಯಾವುದೇ ನೆಪ ಸಮರ್ಥನೆ ಅಲ್ಲ’: ಪಹಲ್ಗಾಮ್ ದಾಳಿಗೆ BRICS ಖಂಡನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಉಗ್ರರ ದಾಳಿಯನ್ನು BRICS ರಾಷ್ಟ್ರಗಳ ನಾಯಕರು ಮತ್ತೊಮ್ಮೆ ಖಂಡಿಸಿದ್ದು, ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆಯ ನಿಲುವನ್ನು ಪುನರುಚ್ಚರಿಸಿದ್ದಾರೆ.

ನವದೆಹಲಿಯಲ್ಲಿ ನಡೆಯುತ್ತಿರುವ 18ನೇ BRICS ಶೃಂಗಸಭೆಯ ಅಂಗವಾಗಿ ಅಂಗೀಕರಿಸಲಾದ 140 ಅಂಶಗಳ ನ್ಯೂ ಡೆಲ್ಲಿ ಘೋಷಣೆಯಲ್ಲಿ ಪಹಲ್ಗಾಮ್ ದಾಳಿಯ ಉಲ್ಲೇಖ ಮಾಡಲಾಗಿದೆ.

ಪಹಲ್ಗಾಮ್‌ನ ದಾಳಿ ಖಂಡಿಸಿದ BRICS ನಾಯಕರು

2025ರ ಏಪ್ರಿಲ್ 22ರಂದು ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ನಡೆದ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದರು. ಪ್ರವಾಸಿಗರು ಸೇರಿದಂತೆ 25 ಮಂದಿ ಹಾಗೂ ಸ್ಥಳೀಯ ಕುದುರೆ ಸವಾರರೊಬ್ಬರು ದಾಳಿಯಲ್ಲಿ ಸಾವನ್ನಪ್ಪಿದ್ದರು. ಹಲವು ಮಂದಿ ಗಾಯಗೊಂಡಿದ್ದರು. ಭಾರತದ ಮೇಲೆ ನಡೆದ ಈ ಭೀಕರ ದಾಳಿಯನ್ನು BRICS ನಾಯಕರು ಖಂಡಿಸಿದ್ದಾರೆ.

ಇದನ್ನೂ ಓದಿ:

ಯಾವುದೇ ಉದ್ದೇಶ, ಕಾರಣ ಅಥವಾ ಯಾರೇ ಕೃತ್ಯ ಎಸಗಿದ್ದರೂ ಭಯೋತ್ಪಾದನೆಯ ಎಲ್ಲ ಕೃತ್ಯಗಳು ಅಪರಾಧ ಮತ್ತು ಸಮರ್ಥಿಸಲಾಗದವು ಎಂದು ಘೋಷಣೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗುವವರು ಹಾಗೂ ಅವರಿಗೆ ಬೆಂಬಲ ನೀಡುವವರನ್ನು ಸಂಬಂಧಿತ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕಾನೂನುಗಳ ಅನ್ವಯ ಹೊಣೆಗಾರರನ್ನಾಗಿ ಮಾಡಿ ನ್ಯಾಯದ ಮುಂದೆ ತರಬೇಕು ಎಂದು BRICS ರಾಷ್ಟ್ರಗಳು ಕರೆ ನೀಡಿವೆ.

ವಿಶ್ವಸಂಸ್ಥೆಯಿಂದ ಗುರುತಿಸಲ್ಪಟ್ಟ ಉಗ್ರರು ಮತ್ತು ಭಯೋತ್ಪಾದಕ ಸಂಘಟನೆಗಳ ವಿರುದ್ಧ ಒಗ್ಗಟ್ಟಿನ ಕ್ರಮ ಕೈಗೊಳ್ಳುವಂತೆಯೂ ಒತ್ತಾಯಿಸಲಾಗಿದೆ.

‘ದ್ವಿಮಾನದಂಡ’ಗಳಿಗೆ ಅವಕಾಶ ಇಲ್ಲ

ಗಡಿಯಾಚೆ ಉಗ್ರರ ಸಂಚಾರ, ಭಯೋತ್ಪಾದನೆಗೆ ಹಣಕಾಸು ನೆರವು ಹಾಗೂ ಉಗ್ರರಿಗೆ ಸುರಕ್ಷಿತ ತಾಣ ಒದಗಿಸುವ ವ್ಯವಸ್ಥೆಗಳ ವಿರುದ್ಧ ಸಮನ್ವಯದಿಂದ ಕಾರ್ಯನಿರ್ವಹಿಸುವ ಅಗತ್ಯವನ್ನೂ ಘೋಷಣೆ ಒತ್ತಿಹೇಳಿದೆ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ‘ದ್ವಿಮಾನದಂಡ’ಗಳಿಗೆ ಅವಕಾಶ ಇರಬಾರದು ಎಂದು BRICS ನಾಯಕರು ಹೇಳಿದ್ದಾರೆ.

ಯುವಜನರಲ್ಲಿ ಉಗ್ರವಾದ ಮತ್ತು ತೀವ್ರಗಾಮಿತ್ವ ಹರಡುವುದನ್ನು ತಡೆಯಲು ಸದಸ್ಯ ರಾಷ್ಟ್ರಗಳ ನಡುವೆ ಉತ್ತಮ ಅಭ್ಯಾಸಗಳು ಹಾಗೂ ಮಾಹಿತಿಯನ್ನು ಹಂಚಿಕೊಳ್ಳುವ ಮೂಲಕ ಸಹಕಾರ ಹೆಚ್ಚಿಸಬೇಕು ಎಂದು ಕರೆ ನೀಡಲಾಗಿದೆ.

2025ರ ಜುಲೈನಲ್ಲಿ ರಿಯೊ ಡಿ ಜನೈರೊದಲ್ಲಿ ನಡೆದ BRICS ಶೃಂಗಸಭೆಯಲ್ಲೂ ಪಹಲ್ಗಾಮ್ ದಾಳಿಯನ್ನು ಖಂಡಿಸಲಾಗಿತ್ತು. ಇದೀಗ ನ್ಯೂ ಡೆಲ್ಲಿ ಘೋಷಣೆಯಲ್ಲೂ ದಾಳಿಗೆ ಖಂಡನೆ ವ್ಯಕ್ತಪಡಿಸಿರುವುದು ಭಯೋತ್ಪಾದನೆ ವಿರುದ್ಧ BRICS‌ನ ಒಗ್ಗಟ್ಟಿನ ನಿಲುವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !