ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ನವದೆಹಲಿಯಲ್ಲಿ ಜಾಗತಿಕ ಗಮನ ಸೆಳೆದಿರುವ ಎರಡು ದಿನಗಳ ಬ್ರಿಕ್ಸ್ ಶೃಂಗಸಭೆಯು ಇಂದು (ಭಾನುವಾರ) ಅಂತಿಮ ಹಂತಕ್ಕೆ ತಲುಪಿದೆ. ಎರಡನೇ ದಿನದ ಮುಕ್ತ ಅಧಿವೇಶನದಲ್ಲಿ ಪಾಲ್ಗೊಳ್ಳಲು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಭಾರತ್ ಮಂಟಪಕ್ಕೆ ಆಗಮಿಸಿದ್ದು, ಇಂದು ಜಾಗತಿಕ ನಾಯಕರೊಂದಿಗೆ ಒಟ್ಟು 7 ಮಹತ್ವದ ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಲಿದ್ದಾರೆ.
ಇಂದಿನ ಹೈ-ಪ್ರೊಫೈಲ್ ಸಭೆಗಳ ಪಟ್ಟಿ
ಏಷ್ಯಾ ಮತ್ತು ಆಫ್ರಿಕಾ ರಾಷ್ಟ್ರಗಳೊಂದಿಗೆ ಭಾರತದ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಇಂದು ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ, ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ, ಕಝಾಕಿಸ್ತಾನ್ ಅಧ್ಯಕ್ಷ ಕಾಸಿಮ್-ಜೋಮಾರ್ಟ್ ಟೋಕಾಯೆವ್, ಫಿಲಿಪೈನ್ಸ್ ಅಧ್ಯಕ್ಷ ಫರ್ಡಿನೆಂಡ್ ಆರ್ ಮಾರ್ಕೋಸ್ ಜೂನಿಯರ್, ಬುರುಂಡಿ ಅಧ್ಯಕ್ಷ ಎವಾರಿಸ್ಟ್ ನ್ದಾಯಿಶಿಮಿಯೆ, ಉಗಾಂಡದ ಉಪಾಧ್ಯಕ್ಷೆ ಜೆಸ್ಸಿಕಾ ಅಲುಪೋ, ನೈಜೀರಿಯಾದ ಉಪಾಧ್ಯಕ್ಷ ಕಾಶಿಮ್ ಶೆಟ್ಟಿಮಾ ಅವರುಗಳೊಂದಿಗೆ ಪ್ರತ್ಯೇಕ ಸಭೆಗಳನ್ನು ನಡೆಸಲಿದ್ದಾರೆ.
ವಿಶೇಷವಾಗಿ ದಕ್ಷಿಣ ಆಫ್ರಿಕಾದ ಅಧ್ಯಕ್ಷ ರಾಮಫೋಸಾ ಅವರೊಂದಿಗಿನ ಭೇಟಿ ಭಾರಿ ಮಹತ್ವ ಪಡೆದಿದೆ. ಜಾಗತಿಕ ಆರ್ಥಿಕ ಬದಲಾವಣೆಗಳು ಮತ್ತು ತಂತ್ರಜ್ಞಾನದ ಬೆಳವಣಿಗೆಯ ನಡುವೆ ‘ಗ್ಲೋಬಲ್ ಸೌತ್’ ಬಲಿಷ್ಠ ಆರ್ಥಿಕ ಭವಿಷ್ಯವನ್ನು ನಿರ್ಮಿಸಲು ಇದು ದೊಡ್ಡ ಅವಕಾಶ ಎಂದು ರಾಮಫೋಸಾ ಬಣ್ಣಿಸಿದ್ದಾರೆ.
ಏನಿದು ‘ಹೊಸ ದೆಹಲಿ ಘೋಷಣೆ’?
ಶೃಂಗಸಭೆಯ ಮೊದಲ ದಿನವಾದ ಶನಿವಾರದಂದು ಬ್ರಿಕ್ಸ್ ನಾಯಕರು ಒಮ್ಮತದಿಂದ ‘ಹೊಸ ದೆಹಲಿ ಘೋಷಣೆ’ಯನ್ನು ಅಂಗೀಕರಿಸಿದ್ದಾರೆ. ಈ ಕುರಿತು ಮಾತನಾಡಿದ ಪ್ರಧಾನಿ ಮೋದಿ, ಈ ಘೋಷಣೆಯು ಬ್ರಿಕ್ಸ್ ಒಕ್ಕೂಟದ ವಿಶಾಲ ವ್ಯಾಪ್ತಿ ಮತ್ತು ಬಲವಾದ ಉದ್ದೇಶವನ್ನು ಪ್ರತಿಬಿಂಬಿಸುತ್ತದೆ. ಇದು ಆವಿಷ್ಕಾರ, ಸುಸ್ಥಿರತೆ ಹಾಗೂ ಜನರ ನಡುವಿನ ಬಾಂಧವ್ಯವನ್ನು ಹೆಚ್ಚಿಸಲಿದೆ ಎಂದಿದ್ದಾರೆ.
ಇದನ್ನೂ ಓದಿ:
ಜಾಗತಿಕ ಯುದ್ಧ, ನಿರ್ಬಂಧಗಳ ಕುರಿತು ಕಟ್ಟುನಿಟ್ಟಿನ ನಿಲುವು
ಈ ದೆಹಲಿ ಘೋಷಣೆಯಲ್ಲಿ ವಿಶ್ವ ನಾಯಕರು ಕೆಲವು ಪ್ರಮುಖ ಜಾಗತಿಕ ಸವಾಲುಗಳ ಬಗ್ಗೆ ಧ್ವನಿ ಎತ್ತಿದ್ದಾರೆ. ಇಸ್ರೇಲ್-ಪ್ಯಾಲೆಸ್ಟೈನ್ ಸಂಘರ್ಷದ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ಬ್ರಿಕ್ಸ್, ತಕ್ಷಣವೇ ಗಜಾದಲ್ಲಿ ಮಾನವೀಯ ನೆರವು ನೀಡಲು ಇಸ್ರೇಲ್ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು ಮತ್ತು ಎರಡು ಪ್ರತ್ಯೇಕ ರಾಷ್ಟ್ರಗಳ ಶಾಶ್ವತ ಪರಿಹಾರಕ್ಕೆ ಬೆಂಬಲ ನೀಡಬೇಕು ಎಂದು ಕರೆ ನೀಡಿದೆ.
ಕೆಲವು ದೇಶಗಳು ಏಕಪಕ್ಷೀಯವಾಗಿ ಹೇರುತ್ತಿರುವ ಆರ್ಥಿಕ ನಿರ್ಬಂಧಗಳು ಮತ್ತು ಪರಿಸರ ಸ್ನೇಹಿಯ ಹೆಸರಿನಲ್ಲಿ ವ್ಯಾಪಾರಕ್ಕೆ ಅಡ್ಡಿಪಡಿಸುತ್ತಿರುವ ರಕ್ಷಣಾತ್ಮಕ ನೀತಿಗಳು ಜಾಗತಿಕ ಪೂರೈಕೆ ಸರಪಳಿಯನ್ನು ಹಾನಿ ಮಾಡುತ್ತಿವೆ ಎಂದು ಕಳವಳ ವ್ಯಕ್ತಪಡಿಸಲಾಗಿದೆ.



