September 13, 2026
Sunday, September 13, 2026
spot_img

ಪ್ರಧಾನಿ ಮೋದಿ ಔತಣಕೂಟದಿಂದ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ದೂರ ಉಳಿದಿದ್ದು ಏಕೆ? ಅಸಲಿ ಕಾರಣವೇನು ಗೊತ್ತಾ?‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ನವದೆಹಲಿಯಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಯ ಮೊದಲ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ಆಯೋಜಿಸಿದ್ದ ವಿಶೇಷ ಔತಣಕೂಟಕ್ಕೆ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಸೇರಿದಂತೆ ಇಬ್ಬರು ಪ್ರಮುಖ ನಾಯಕರು ಗೈರಾಗಿದ್ದಾರೆ. ಅಬುಧಾಬಿಯ ಯುವರಾಜ ಶೇಖ್ ಖಲೀದ್ ಬಿನ್ ಮೊಹಮ್ಮದ್ ಕೂಡ ಈ ಔತಣಕೂಟದಿಂದ ದೂರ ಉಳಿದಿದ್ದರು ಎಂದು ತಿಳಿದು ಬಂದಿದೆ.

ಶನಿವಾರ ಮಧ್ಯಾಹ್ನವಷ್ಟೇ ನವದೆಹಲಿಗೆ ಬಂದಿಳಿದ ಚೀನಾ ಅಧ್ಯಕ್ಷರು, ಸುದೀರ್ಘ ವಿಮಾನ ಪ್ರಯಾಣದ ನಂತರ ತಕ್ಷಣವೇ ಬ್ರಿಕ್ಸ್ ಶೃಂಗಸಭೆಯ ಅಧಿಕೃತ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಅಷ್ಟೇ ಅಲ್ಲದೆ, ಪ್ರಧಾನಿ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆಯನ್ನೂ ನಡೆಸಿದ್ದರು. ಉಭಯ ನಾಯಕರಿಗೆ ರಾಜತಾಂತ್ರಿಕ ಚಟುವಟಿಕೆಗಳಿಂದಾಗಿ ಇಡೀ ದಿನ ಬಿಡುವಿಲ್ಲದಂತಾಗಿತ್ತು. ಭಿನ್ನ ದೇಶಗಳ ಸಮಯದ ವ್ಯತ್ಯಾಸ ಹಾಗೂ ದೀರ್ಘ ಪ್ರಯಾಣದಿಂದಾಗಿ ಜಿನ್‌ಪಿಂಗ್ ತೀವ್ರವಾಗಿ ದಣಿದಿದ್ದರಿಂದ, ವಿಶ್ರಾಂತಿ ಪಡೆಯಲು ಹೋಟೆಲ್‌ಗೆ ಮರಳಿದರು. ಇದೇ ಕಾರಣಕ್ಕೆ ಅವರು ರಾತ್ರಿಯ ಭೋಜನಕೂಟಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ.

ಭಾರತ್ ಮಂಟಪದಲ್ಲಿ ಕಳೆಗಟ್ಟಿದ ಡಿನ್ನರ್

ಕೇಂದ್ರ ದೆಹಲಿಯ ಭವ್ಯ ‘ಭಾರತ್ ಮಂಟಪ’ದಲ್ಲಿ ನಡೆದ ಈ ಔತಣಕೂಟಕ್ಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೇರಿದಂತೆ ಬ್ರಿಕ್ಸ್ ಒಕ್ಕೂಟದ ಇತರ ಎಲ್ಲಾ ದೇಶಗಳ ನಾಯಕರು ಭಾಗವಹಿಸಿದ್ದರು. ಇವರೊಂದಿಗೆ ಕೇಂದ್ರ ಸಚಿವರು ಹಾಗೂ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಆಗಮಿಸಿ ಔತಣಕೂಟದ ಸಂಭ್ರಮವನ್ನು ಹೆಚ್ಚಿಸಿದರು.

ಇದನ್ನೂ ಓದಿ:

ಮೋದಿ-ಜಿನ್‌ಪಿಂಗ್ ಮಾತುಕತೆಯ ಹೈಲೈಟ್ಸ್

ಇದಕ್ಕೂ ಮುನ್ನ ನಡೆದ ದ್ವಿಪಕ್ಷೀಯ ಸಭೆಯಲ್ಲಿ ಮೋದಿ ಹಾಗೂ ಜಿನ್‌ಪಿಂಗ್ ಅವರು ಭಾರತ-ಚೀನಾ ಬಾಂಧವ್ಯದ ಪ್ರಗತಿಯನ್ನು ಪರಿಶೀಲಿಸಿದರು. ಎರಡು ದೇಶಗಳ ನಡುವಿನ ಭಿನ್ನಾಭಿಪ್ರಾಯಗಳು ಯಾವುದೇ ಕಾರಣಕ್ಕೂ ವಿವಾದಗಳಾಗಿ ಬದಲಾಗಬಾರದು ಎಂದು ಉಭಯ ನಾಯಕರು ಒಮ್ಮತದ ನಿಲುವು ತಳೆದಿದ್ದಾರೆ. ಪರಸ್ಪರ ಗೌರವ, ಪರಸ್ಪರ ಸೂಕ್ಷ್ಮತೆ ಹಾಗೂ ಪರಸ್ಪರ ಹಿತಾಸಕ್ತಿಗಳೆಂಬ ಮೂರು ಸೂತ್ರಗಳ ಆಧಾರದ ಮೇಲೆ ಸಂಬಂಧವನ್ನು ಗಟ್ಟಿಗೊಳಿಸಬೇಕು ಎಂದು ಪ್ರಧಾನಿ ಮೋದಿ ಒತ್ತಿಹೇಳಿದ್ದಾರೆ. ಎರಡು ದಿನಗಳ ಈ ಬ್ರಿಕ್ಸ್ ಶೃಂಗಸಭೆಯು ಇಂದು ಮುಕ್ತಾಯಗೊಳ್ಳಲಿದ್ದು, ಮೋದಿ ಇಂದು ಮತ್ತೆ ಏಳು ದೇಶಗಳ ನಾಯಕರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !