September 13, 2026
Sunday, September 13, 2026
spot_img

9/11 ದಾಳಿಯ 25 ವರ್ಷಗಳ ಬಳಿಕ ಅಫ್ಘಾನಿಸ್ತಾನದಲ್ಲಿ ಮತ್ತೆ ಅಲ್‌ಖೈದಾ ಸಕ್ರಿಯ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಗತ್ತನ್ನೇ ಬೆಚ್ಚಿಬೀಳಿಸಿದ ಅಮೆರಿಕ ಮೇಲಿನ 9/11 ಭಯೋತ್ಪಾದಕ ದಾಳಿಗೆ 25 ವರ್ಷ ಪೂರ್ಣಗೊಂಡಿರುವ ಬೆನ್ನಿಗೇ ಈಗ ಅಫ್ಘಾನಿಸ್ತಾನದಲ್ಲಿ ಅಲ್‌ಖೈದಾ ಮತ್ತೆ ತನ್ನ ನೆಲೆ ಬಲಪಡಿಸಿಕೊಳ್ಳುತ್ತಿರುವ ಆತಂಕ ಅನುಮಾನ ಸೃಷ್ಟಿಯಾಗಿದೆ.

ಅಲ್‌ಖೈದಾ ಹಾಗೂ ಅದರ ಜೊತೆ ಸಂಪರ್ಕ ಹೊಂದಿರುವ ಇತರ ಉಗ್ರ ಸಂಘಟನೆಗಳು ಕಳೆದ ಮೂರು ವರ್ಷಗಳಲ್ಲಿ ಅಫ್ಘಾನಿಸ್ತಾನದಲ್ಲಿ ಕನಿಷ್ಠ ಎಂಟು ತರಬೇತಿ ಕೇಂದ್ರಗಳನ್ನು ಸ್ಥಾಪಿಸಿದೆ ಎಂದು ಅಮೆರಿಕ ಹಾಗೂ ಪಾಶ್ಚಿಮಾತ್ಯ ರಾಷ್ಟ್ರಗಳ ಗುಪ್ತಚರ ಅಧಿಕಾರಿಗಳು ಹೇಳಿದ್ದಾರೆ. ಜೊತೆಗೆ ವಿಶ್ವಸಂಸ್ಥೆಯ ವರದಿಗಳನ್ನು ಆಧರಿಸಿದ ತನಿಖೆಗಳೂ ಇದನ್ನು ಬೊಟ್ಟುಮಾಡಿವೆ. ತಾಲಿಬಾನ್ ಮತ್ತೆ ಅಧಿಕಾರಕ್ಕೆ ಬಂದ ಬಳಿಕ ಉಂಟಾದ ಪರಿಸ್ಥಿತಿಯನ್ನು ಈ ಸಂಘಟನೆಗಳು ಸಮರ್ಥವಾಗಿ ಬಳಸಿಕೊಳ್ಳುತ್ತಿವೆ ಎಂಬ ಆರೋಪವೂ ಕೇಳಿಬಂದಿದೆ.

ಅಲ್‌ಖೈದಾದ ಚಟುವಟಿಕೆಗಳು ಮಾತ್ರವಲ್ಲದೆ, ಅದರ ಪ್ರಮುಖ ಪ್ರತಿಸ್ಪರ್ಧಿಯಾಗಿರುವ ಇಸ್ಲಾಮಿಕ್ ಸ್ಟೇಟ್‌ನ ಅಂಗಸಂಘಟನೆಗಳೂ ಅಫ್ಘಾನಿಸ್ತಾನದಲ್ಲಿ ತರಬೇತಿ ಚಟುವಟಿಕೆ ವಿಸ್ತರಿಸಿರುವ ಅನುಮಾನ ದಟ್ಟವಾಗಿದೆ. ದೇಶದ 34 ಪ್ರಾಂತ್ಯಗಳ ಪೈಕಿ ಕನಿಷ್ಠ 14 ಪ್ರಾಂತ್ಯಗಳಲ್ಲಿ ವಿವಿಧ ಉಗ್ರ ಸಂಘಟನೆಗಳ ಪ್ರಭಾವ ಅಥವಾ ಚಟುವಟಿಕೆ ಕಂಡುಬಂದಿರುವುದಾಗಿ ಗುಪ್ತಚರ ವರದಿಗಳು ತಿಳಿಸಿವೆ.

9/11ಕ್ಕೂ ಮುನ್ನ ಇದ್ದಂತೆಯೇ ಮತ್ತೆ ತರಬೇತಿ ಕೇಂದ್ರಗಳು?

2001ರ ಸೆಪ್ಟೆಂಬರ್ 11ರಂದು ಅಲ್‌ಖೈದಾ ಉಗ್ರರು ಅಮೆರಿಕದ ಮೇಲೆ ಭೀಕರ ದಾಳಿ ನಡೆಸಿದ್ದರು. ನಾಲ್ಕು ಪ್ರಯಾಣಿಕ ವಿಮಾನಗಳನ್ನು ಅಪಹರಿಸಲಾಗಿದ್ದು, ಅವುಗಳಲ್ಲಿ ಎರಡು ವಿಮಾನಗಳು ನ್ಯೂಯಾರ್ಕ್‌ನ ವರ್ಲ್ಡ್ ಟ್ರೇಡ್ ಸೆಂಟರ್‌ನ ಅವಳಿ ಗೋಪುರಗಳಿಗೆ ಅಪ್ಪಳಿಸಿದ್ದವು. ಮತ್ತೊಂದು ವಿಮಾನ ಪೆಂಟಗನ್‌ಗೆ ಅಪ್ಪಳಿಸಿತ್ತು. ನಾಲ್ಕನೇ ವಿಮಾನ ಪ್ರಯಾಣಿಕರು ಪ್ರತಿರೋಧಿಸಿದ ಬಳಿಕ ಪೆನ್ಸಿಲ್ವೇನಿಯಾದಲ್ಲಿ ಪತನಗೊಂಡಿತ್ತು. ದಾಳಿಯಲ್ಲಿ ಸುಮಾರು 3,000 ಮಂದಿ ಮೃತಪಟ್ಟಿದ್ದರು.

ಆ ದಾಳಿಯ ಹಿನ್ನೆಲೆಯಲ್ಲಿ ಅಮೆರಿಕ ಅಫ್ಘಾನಿಸ್ತಾನದಲ್ಲಿ ಸೇನಾ ಕಾರ್ಯಾಚರಣೆ ಆರಂಭಿಸಿತು. ಅಲ್‌ಖೈದಾದ ಪ್ರಮುಖ ನೆಲೆಗಳು ನಾಶವಾದವು. ನಂತರ 2011ರಲ್ಲಿ ಒಸಾಮಾ ಬಿನ್ ಲಾಡೆನ್ ಪಾಕಿಸ್ತಾನದ ಅಬ್ಬೊಟ್ಟಾಬಾದ್‌ನಲ್ಲಿ ಅಮೆರಿಕ ಹೊಡೆದುರುಳಿಸಿತ್ತು. 2022ರಲ್ಲಿ ಅಲ್‌ಖೈದಾದ ಮತ್ತೊಬ್ಬ ಪ್ರಮುಖ ನಾಯಕ ಅಯ್ಮನ್ ಅಲ್-ಜವಾಹಿರಿ ಕೂಡ ಕಾಬೂಲ್‌ನಲ್ಲಿ ಅಮೆರಿಕದ ಡ್ರೋನ್ ದಾಳಿಯಲ್ಲಿ ಮೃತಪಟ್ಟಿದ್ದ. ಆದರೆ ಸಂಘಟನೆ ಸಂಪೂರ್ಣವಾಗಿ ನಾಶವಾಗಿಲ್ಲ. ನಾಯಕತ್ವ, ಕಾರ್ಯವಿಧಾನ ಬದಲಿಸಿಕೊಂಡು ಹಲವು ದೇಶಗಳಲ್ಲಿ ತನ್ನ ಸಂಪರ್ಕ ಜಾಲ ಮುಂದುವರಿಸಿದೆ ಎಂದು ಭದ್ರತಾ ತಜ್ಞರು ಎಚ್ಚರಿಸಿದ್ದಾರೆ.

ಈಗ AI ಕೂಡ ಹೊಸ ಸವಾಲು?

ಅಲ್‌ಖೈದಾ ಸೇರಿದಂತೆ ಉಗ್ರ ಸಂಘಟನೆಗಳು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿರುವ ಬಗ್ಗೆ ಭದ್ರತಾ ಸಂಸ್ಥೆಗಳು ಕಳವಳ ವ್ಯಕ್ತಪಡಿಸುತ್ತಿವೆ. ವಿಶೇಷವಾಗಿ ಕೃತಕ ಬುದ್ಧಿಮತ್ತೆ (AI) ಮತ್ತು ಆನ್‌ಲೈನ್ ವೇದಿಕೆಗಳು ಭಯೋತ್ಪಾದಕ ಪ್ರಚಾರ, ನೇಮಕಾತಿ ಮತ್ತು ಸಂವಹನಕ್ಕೆ ದುರುಪಯೋಗವಾಗುವ ಸಾಧ್ಯತೆ ಹೆಚ್ಚಿದೆ.

ಇತ್ತೀಚಿನ ಭದ್ರತಾ ವಿಶ್ಲೇಷಣೆಗಳ ಪ್ರಕಾರ, AI ಬಳಕೆಯಿಂದ ಉಗ್ರ ಸಂಘಟನೆಗಳು ಪ್ರಚಾರ ಸಾಮಗ್ರಿಗಳನ್ನು ವೇಗವಾಗಿ ಸಿದ್ಧಪಡಿಸುವುದು, ವಿವಿಧ ಭಾಷೆಗಳಲ್ಲಿ ವಿಷಯ ಹರಡುವುದು ಮತ್ತು ಆನ್‌ಲೈನ್ ಮೂಲಕ ಹೊಸ ಬೆಂಬಲಿಗರನ್ನು ತಲುಪುವುದು ಸುಲಭವಾಗುತ್ತಿದೆ. AIಯ ದುರುಪಯೋಗವನ್ನು ತಡೆಯುವುದು ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಹೊಸ ಸವಾಲಾಗಿ ಪರಿಣಮಿಸಿದೆ.

25 ವರ್ಷಗಳ ಹಿಂದೆ 9/11 ದಾಳಿಗೆ ಅಫ್ಘಾನಿಸ್ತಾನ ಪ್ರಮುಖ ನೆಲೆಯಾಗಿತ್ತು. ಇದೀಗ ಮತ್ತೆ ಅದೇ ದೇಶದಲ್ಲಿ ಉಗ್ರ ಸಂಘಟನೆಗಳ ತರಬೇತಿ ಕೇಂದ್ರಗಳು ಮತ್ತು ಜಾಲಗಳು ವಿಸ್ತರಿಸುತ್ತಿವೆ ಎಂಬ ವರದಿಗಳು ಹೊರಬರುತ್ತಿರುವುದು ಜಾಗತಿಕ ಭದ್ರತಾ ಸಂಸ್ಥೆಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !