ಎಸ್. ರುದ್ರೇಶ್ವರ
ಹೊಸ ದಿಗಂತ ವರದಿ ರಾಮನಗರ
ಇತ್ತೀಚಿನ ದಿನಗಳಲ್ಲಿ ಚಿರತೆಗಳ ಸಂತತಿ ವೃದ್ಧಿಯಾಗುತ್ತಿರುವ ಹಿನ್ನೆಲೆಯಲ್ಲಿ ಸಾಕು ಪ್ರಾಣಿಗಳು, ಮಾನವರ ಮೇಲಿನ ದಾಳಿ ಪ್ರಕರಣಗಳು ಕೂಡಾ ಹೆಚ್ಚಾಗುತ್ತಿವೆ. ಗ್ರಾಮೀಣ ಪ್ರದೇಶಗಳಿಗೆ ಸೀಮಿತವಾಗಿದ್ದ ಚಿರತೆಗಳು ಇದೀಗ ಸದ್ದಿಲ್ಲದೆ ಪಟ್ಟಣಗಳತ್ತಲೂ ಹೆಜ್ಜೆ ಹಾಕುತ್ತಿರುವುದು ಹೊಸ ಆತಂಕಕ್ಕೆ ಕಾರಣವಾಗಿದೆ.
ಗ್ರಾಮೀಣ ಪ್ರದೇಶಗಳ ಸಣ್ಣಪುಟ್ಟ ಗುಡ್ಡಗಳ ಪೊದೆಗಳಲ್ಲಿವಾಸ್ತವ್ಯ ಹೂಡಿರುವ ಚಿರತೆಗಳು ಆಹಾರಕ್ಕಾಗಿ ಸಾಕು ಪ್ರಾಣಿಗಳನ್ನು ಗುರಿಯಾಗಿಸಿಕೊಳ್ಳುತ್ತಿವೆ. ಆಹಾರ ಅರಸಿ ಬರುವ ಚಿರತೆಗಳು ತೋಟ-ತುಡಿಕೆಗಳ ಪೊದೆಗಳಲ್ಲಿ ಅಡಗಿಕೊಳ್ಳುತ್ತಿದ್ದು, ಜಮೀನು ಮತ್ತು ತೋಟಗಳಲ್ಲಿ ಮೇಯುವ ಮೇಕೆ, ಕುರಿ, ಹಸುಕರುಗಳ ಮೇಲೆ ಹಾಡಹಗಲೇ ದಾಳಿ ನಡೆಸಿರುವ ಉದಾಹರಣೆಗಳಿವೆ. ಕತ್ತಲಾಗುತ್ತಿದ್ದಂತೆ ಗ್ರಾಮಗಳತ್ತ ಬಂದು ಜಾನುವಾರುಗಳನ್ನು ಹೊತ್ತೊಯ್ಯುವುದು ಈಗ ಸಾಮಾನ್ಯವಾಗುತ್ತಿದೆ.
ಇದರ ನಡುವೆ ಚಿರತೆಗಳ ದಾಳಿ ದ್ವಿಚಕ್ರ ವಾಹನ ಸವಾರರ ಮೇಲೂ ಆರಂಭವಾಗಿರುವುದು ಮತ್ತಷ್ಟು ಆತಂಕ ಮೂಡಿಸಿದೆ. ರಾತ್ರಿ ವೇಳೆ ರಸ್ತೆಯಲ್ಲಿ ಸಂಚರಿಸುವ ಬೈಕ್ ಸವಾರರ ಮೇಲೆ ಚಿರತೆಗಳು ಹಠಾತ್ ದಾಳಿ ನಡೆಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ.
ಇತ್ತೀಚೆಗೆ ಲಿಂಗೇಗೌಡನದೊಡ್ಡಿ ಬಳಿ ರಾಮನಗರ-ಮಂಚನಬೆಲೆ ರಸ್ತೆಯಲ್ಲಿ ರಾತ್ರಿ ಸುಮಾರು 9.15ರ ವೇಳೆಗೆ ಚಿರತೆಯೊಂದು ಬೈಕ್ ಸವಾರರ ಮೇಲೆ ದಾಳಿ ನಡೆಸಿದ್ದು, ಹಿಂಬದಿಯಲ್ಲಿ ಕುಳಿತಿದ್ದ ರೈತ ಬೋರೆಗೌಡ ಎಂಬುವರು ತೀವ್ರವಾಗಿ ಗಾಯಗೊಂಡಿದ್ದಾರೆ.

ರಾತ್ರಿ ಸ್ನೇಹಿತರೊಂದಿಗೆ ದ್ವಿಚಕ್ರ ವಾಹನದಲ್ಲಿ ಮಂಚನಬೆಲೆ-ರಾಮನಗರ ರಸ್ತೆಯಲ್ಲಿ ತಮ್ಮ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ದಿಢೀರ್ ಪ್ರತ್ಯಕ್ಷವಾದ ಚಿರತೆ, ಬೈಕ್ನ ಹಿಂಬದಿಯಲ್ಲಿ ಕುಳಿತಿದ್ದ ಬೋರೆಗೌಡ ಅವರ ಬಲಗಾಲನ್ನು ಕಚ್ಚಿದೆ. ಅಲ್ಲದೆ ಉಗುರಿನಿಂದ ಕಾಲನ್ನು ಸೀಳಿದೆ. ಚಿರತೆ ಬಲವಾಗಿ ಎಳೆದರೂ ಬೈಕ್ನಿಂದ ಕೆಳಗೆ ಬೀಳದೆ ಸವಾರರು ಮಿಂಚಿನ ವೇಗದಲ್ಲಿ ವಾಹನ ಚಲಾಯಿಸಿದ್ದರಿಂದ ಸ್ವಲ್ಪದರಲ್ಲೇ ಚಿರತೆ ಬಾಯಿಂದ ತಪ್ಪಿಸಿಕೊಂಡಿದ್ದಾರೆ.
ಚಿರತೆ ಹಿಂಬದಿಯಿಂದ ಕೆಲದೂರ ಬೈಕ್ ಅನ್ನು ಅಟ್ಟಿಸಿಕೊಂಡು ಬಂದರೂ ಸವಾರರು ಅದರ ಬಾಯಿಗೆ ಸಿಗದೆ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಚಿರತೆ ದಾಳಿಯಿಂದ ಬೋರೆಗೌಡ ಅವರ ಕಾಲಿಗೆ ತೀವ್ರ ಗಾಯವಾಗಿದ್ದು, ತಕ್ಷಣ ಅವರನ್ನು ಬಿಡದಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ರಾಮನಗರ-ಮಂಚನಬೆಲೆ ಮುಖ್ಯರಸ್ತೆ ಅರ್ಕಾವತಿ ನದಿ ತೀರದ ಮೂಲಕ ಹಾದುಹೋಗುತ್ತದೆ. ದಾರಿಯುದ್ದಕ್ಕೂ ಹತ್ತಾರು ಗ್ರಾಮಗಳಿದ್ದು, ರಾತ್ರಿ ವೇಳೆ ಸ್ಥಳೀಯರು ವಿವಿಧ ಕಾರಣಗಳಿಗೆ ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವುದು ಸಾಮಾನ್ಯ. ಆದರೆ ಇದೀಗ ಚಿರತೆಗಳು ವಾಹನ ಸವಾರರ ಮೇಲೆಯೂ ದಾಳಿ ನಡೆಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇತ್ತೀಚೆಗೆ ರಾಮನಗರ-ಮಾಗಡಿ ರಸ್ತೆಯಲ್ಲಿಯೂ ಮಹಿಳೆಯೊಬ್ಬರ ಮೇಲೆ ಚಿರತೆ ದಾಳಿ ನಡೆಸಿತ್ತು. ಸಂಜೆ ಸುಮಾರು 7 ಗಂಟೆಯ ವೇಳೆಗೆ ಮಹಿಳೆ ತಮ್ಮ ಮಕ್ಕಳನ್ನು ಟ್ಯೂಷನ್ನಿಂದ ಕರೆತರಲು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಚಿರತೆ ದಾಳಿ ನಡೆಸಿತ್ತು. ಅದೇ ವೇಳೆ ಹಿಂಬದಿಯಿಂದ ಮತ್ತೊಂದು ವಾಹನ ಬಂದಿದ್ದು, ಅದರ ಲೈಟ್ ಬೆಳಕಿಗೆ ಚಿರತೆ ಪರಾರಿಯಾಗಿತ್ತು. ಮಹಿಳೆ ಹೆಲ್ಮೆಟ್ ಧರಿಸಿದ್ದರಿಂದ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದರು.
ಬೈಕ್ ಸವಾರರ ಮೇಲಿನ ದಾಳಿ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಇನ್ನು ಕಷ್ಟಕಾಲದಲ್ಲಿ ನೆರವಿಗೆ ಬರಲೆಂದು ಜೋಪಾನದಿಂದ ಸಾಕುವ ಜಾನುವಾರುಗಳೂ ಚಿರತೆಗಳ ಬಾಯಿಗೆ ಸಿಲುಕುತ್ತಿವೆ. ಇದರಿಂದ ರೈತರಿಗೆ ಭಾರಿ ಪ್ರಮಾಣದ ನಷ್ಟ ಉಂಟಾಗುತ್ತಿದೆ. ಕಲ್ಲುಗೋಪಹಳ್ಳಿ, ತಮ್ಮಣ್ಣನದೊಡ್ಡಿ ಸುತ್ತಮುತ್ತಲ ಪ್ರದೇಶಗಳಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ. ಮುತ್ತುರಾಯಸ್ವಾಮಿ ದೇಗುಲದ ಆಸುಪಾಸಿನಲ್ಲಿ ಚಿರತೆಗಳು ಹಗಲಿನಲ್ಲಿಯೇ ಕಾಣಿಸಿಕೊಳ್ಳುತ್ತಿವೆ.
ಆಹಾರ ಹುಡುಕುತ್ತಾ ಬರುವ ಚಿರತೆಗಳು ಬೀದಿನಾಯಿ ಸೇರಿದಂತೆ ಸಿಕ್ಕ ಯಾವುದೇ ಸಾಕುಪ್ರಾಣಿಯನ್ನೂ ಬಿಡುತ್ತಿಲ್ಲ ಎನ್ನಲಾಗಿದೆ. ಹುಲ್ತಾರ್ ಅರಣ್ಯ ಪ್ರದೇಶದ ಸುತ್ತಮುತ್ತಲ ಗ್ರಾಮಗಳಲ್ಲಿ ಬೀದಿನಾಯಿಗಳ ಸಂಖ್ಯೆಯೂ ಕಡಿಮೆಯಾಗಿದೆ. ಬೀದಿನಾಯಿಗಳ ಬೇಟೆಗೆ ರುಚಿ ಹಿಡಿದಿರುವ ಚಿರತೆಗಳು ಮತ್ತೆ ಮತ್ತೆ ಗ್ರಾಮಗಳಿಗೆ ಬರುತ್ತಿರುವುದರಿಂದ ನಾಯಿಗಳು ಊರನ್ನೇ ತೊರೆದಿವೆ ಎಂದು ಸ್ಥಳೀಯರು ಹೇಳುತ್ತಾರೆ.
ಸ್ಥಳೀಯರ ಪ್ರಕಾರ, ಚಿರತೆಗಳು ಪ್ರತಿ ಆರು ತಿಂಗಳಿಗೊಮ್ಮೆ ಕನಿಷ್ಠ ಎರಡರಿಂದ ಮೂರು ಮರಿಗಳಿಗೆ ಜನ್ಮ ನೀಡುತ್ತವೆ. ಒಂದು ಹೆಣ್ಣು ಚಿರತೆ ಪ್ರತಿವರ್ಷ ಕನಿಷ್ಠ 5ರಿಂದ 6 ಮರಿಗಳನ್ನು ಪ್ರಕೃತಿಯ ಮಡಿಲಿಗೆ ಸೇರಿಸುತ್ತಿದೆ. ಹೀಗಾಗಿ ಚಿರತೆಗಳ ಸಂತತಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಸಣ್ಣ ಪೊದೆಗಳಲ್ಲಿ ಅಡಗಿಕೊಳ್ಳುವ ಚಿರತೆಗಳು ರಾತ್ರಿ ಮಾತ್ರವಲ್ಲದೆ ಹಗಲಿನಲ್ಲಿಯೂ ಜನರು ಮತ್ತು ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿರುವ ಪ್ರಕರಣಗಳು ಕಂಡುಬರುತ್ತಿವೆ. ಸಾಕುಪ್ರಾಣಿಗಳ ರಕ್ತದ ರುಚಿ ಕಂಡಿರುವ ಚಿರತೆಗಳು ಗ್ರಾಮದ ಸಮೀಪವೇ ಆಶ್ರಯ ಪಡೆಯುತ್ತಿದ್ದು, ಮನೆಯ ಹಿತ್ತಲು ಹಾಗೂ ಹೊಲಗಳಲ್ಲಿ ಅಡಗಿಕೊಂಡು ಆಗಾಗ್ಗೆ ಕಾಣಿಸಿಕೊಳ್ಳುತ್ತಿರುವುದು ಜನರಲ್ಲಿ ಭಯ ಹುಟ್ಟಿಸಿದೆ.
ಚಿರತೆಗಳು ನಿರಂತರವಾಗಿ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕತ್ತಲಾಗುತ್ತಿದ್ದಂತೆ ಮಹಿಳೆಯರು, ಮಕ್ಕಳು ಸೇರಿದಂತೆ ಯಾರೂ ಮನೆಯಿಂದ ಹೊರಬರದಷ್ಟು ಭೀತಿ ಉಂಟಾಗಿದೆ. ಮನೆಗಳ ಮುಂದೆ ಜಾನುವಾರು, ಮೇಕೆ, ಕುರಿಗಳನ್ನು ಕಟ್ಟಿಹಾಕಲು ಕೂಡ ಜನರು ಭಯಪಡುವಂತಾಗಿದೆ.
ಗ್ರಾಮದಲ್ಲಿ ರಾಜಾರೋಷವಾಗಿ ಓಡಾಡುತ್ತಾ ಆತಂಕ ಸೃಷ್ಟಿಸಿರುವ ಚಿರತೆಗಳು ಸಾಕಷ್ಟು ಬೀದಿನಾಯಿಗಳನ್ನು ಹೊತ್ತೊಯ್ದಿವೆ. ನಮ್ಮ ಗ್ರಾಮದಲ್ಲಿ ಈಗ ನಾಯಿಗಳೇ ಇಲ್ಲ. ಕಾಂಪೌಂಡ್ ಹಾರಿ ಬರುವ ಚಿರತೆಗಳು ಸಾಕುನಾಯಿಗಳನ್ನೂ ಬಿಡುತ್ತಿಲ್ಲ ಎಂದು ಕಲ್ಲುಗೋಪಹಳ್ಳಿ ನಿವಾಸಿ ಚಂದ್ರು ತಿಳಿಸಿದ್ದಾರೆ.
ಇದನ್ನೂ ಓದಿ:
ಅರಣ್ಯ ಇಲಾಖೆ ಕ್ರಮ
ಚಿರತೆ ದಾಳಿಗೆ ಒಳಗಾದ ವ್ಯಕ್ತಿಗೆ ಇ-ಪರಿಹಾರ ಕೊಡಿಸಲಾಗುವುದು. ಚಿರತೆ ಸೆರೆಗೆ ಎರಡು ಕಡೆ ಬೋನುಗಳನ್ನು ಇರಿಸಲಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.
ಚಿರತೆಗಳ ಸಂತತಿ ವೃದ್ಧಿಯಾಗಿರುವ ಹಿನ್ನೆಲೆಯಲ್ಲಿ ಆಹಾರ ಹುಡುಕುತ್ತಾ ಬರುವ ಚಿರತೆಗಳು ರಾತ್ರಿ ವೇಳೆ ರಸ್ತೆಯಲ್ಲಿ ಸಂಚರಿಸುವ ವಾಹನಗಳನ್ನು ಪ್ರಾಣಿಗಳ ಚಲನೆಯಂತೆ ಕಾಣುವ ಸಾಧ್ಯತೆ ಇದೆ. ಈ ಕಾರಣದಿಂದ ಕೆಲವು ಸಂದರ್ಭಗಳಲ್ಲಿ ವಾಹನ ಸವಾರರ ಮೇಲೆ ದಾಳಿ ನಡೆಯುತ್ತದೆ ಎಂದು ಡಿಎಫ್ಒ ರಾಮಕೃಷ್ಣಯ್ಯ ತಿಳಿಸಿದ್ದಾರೆ.
ಚಿರತೆಗಳು ಮನುಷ್ಯರು ಇರುವ ಪ್ರದೇಶವನ್ನು ಹುಡುಕಿಕೊಂಡು ಬರುವುದಿಲ್ಲ. ವನ್ಯಪ್ರಾಣಿಗಳಿರುವ ಪ್ರದೇಶಗಳಿಗೆ ಮನುಷ್ಯರು ಹೋಗಬಾರದು. ಕಾಡಂಚಿನ ಪ್ರದೇಶಗಳಲ್ಲಿ ದ್ವಿಚಕ್ರ ವಾಹನ ಸವಾರರು ರಾತ್ರಿ ವೇಳೆ ಎಚ್ಚರಿಕೆಯಿಂದ ಸಂಚರಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.



