September 13, 2026
Sunday, September 13, 2026
spot_img

ರಾಜ್ಯದಲ್ಲಿ ಭರ್ಜರಿ ಕಾರ್ಯಾಚರಣೆ: ಸಿಎಂ ಡಿ.ಕೆ.ಶಿವಕುಮಾರ್ ಆದೇಶದ ಬೆನ್ನಲ್ಲೇ 800 ಬಾಲಕಾರ್ಮಿಕರ ರಕ್ಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜ್ಯದಲ್ಲಿ ಬಾಲಕಾರ್ಮಿಕ ಪದ್ಧತಿಯನ್ನು ಬುಡಸಮೇತ ಕಿತ್ತೊಗೆಯಲು ಕರ್ನಾಟಕ ಸರ್ಕಾರ ಮತ್ತು ಖಾಕಿ ಪಡೆ ಭರ್ಜರಿ ಕಾರ್ಯಾಚರಣೆಗೆ ಇಳಿದಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕಟ್ಟುನಿಟ್ಟಿನ ನಿರ್ದೇಶನದ ಮೇರೆಗೆ ರಾಜ್ಯ ಪೊಲೀಸರು ಹಮ್ಮಿಕೊಂಡಿದ್ದ ವಿಶೇಷ ತಪಾಸಣಾ ಕಾರ್ಯಾಚರಣೆಯಲ್ಲಿ ಬರೋಬ್ಬರಿ 800 ಬಾಲಕಾರ್ಮಿಕರನ್ನು ರಕ್ಷಿಸಲಾಗಿದೆ.

ಸೆ. 12ರವರೆಗೆ ನಡೆದ ಈ ಬೃಹತ್ ಆಪರೇಷನ್‌ನಲ್ಲಿ ರಾಜ್ಯದ ಒಟ್ಟು 962 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬರುವ ಹೋಟೆಲ್‌ಗಳು, ಗ್ಯಾರೇಜ್‌ಗಳು ಹಾಗೂ ಕಾರ್ಖಾನೆಗಳು ಸೇರಿದಂತೆ ಒಟ್ಟು 16,951 ಅನುಮಾನಾಸ್ಪದ ಸ್ಥಳಗಳ ಮೇಲೆ ದಾಳಿ ನಡೆಸಿ ತಪಾಸಣೆ ನಡೆಸಲಾಗಿದೆ.

ಬೆಂಗಳೂರಲ್ಲೇ ಅತಿ ಹೆಚ್ಚು ಮಕ್ಕಳ ರಕ್ಷಣೆ


ರಾಜಧಾನಿ ಬೆಂಗಳೂರು ನಗರದಲ್ಲಿ ಬಾಲಕಾರ್ಮಿಕರ ಸಂಖ್ಯೆ ಹೆಚ್ಚಿರುವುದು ಈ ಕಾರ್ಯಾಚರಣೆಯಲ್ಲಿ ಬಹಿರಂಗವಾಗಿದೆ. ಬೆಂಗಳೂರಿನ 5,897 ಸ್ಥಳಗಳ ಮೇಲೆ ದಾಳಿ ನಡೆಸಿ ಅತಿ ಹೆಚ್ಚು ಅಂದರೆ 503 ಮಕ್ಕಳನ್ನು ರಕ್ಷಿಸಲಾಗಿದೆ. ಉಳಿದಂತೆ ವಿಜಯಪುರದ 1,156 ಸ್ಥಳಗಳಿಂದ 72 ಮಕ್ಕಳು, ತುಮಕೂರಿನ 660 ಸ್ಥಳಗಳಿಂದ 33 ಮಕ್ಕಳು ಹಾಗೂ ಬೆಳಗಾವಿಯ 592 ಸ್ಥಳಗಳಿಂದ 12 ಮಕ್ಕಳನ್ನು ಬಾಲಕಾರ್ಮಿಕ ಮುಕ್ತಗೊಳಿಸಲಾಗಿದೆ.

ಇದನ್ನೂ ಓದಿ:

ನಿಯಮ ಉಲ್ಲಂಘಿಸಿದವರ ವಿರುದ್ಧ ಕೇಸ್

ರಕ್ಷಣೆ ಮಾಡಲಾದ ಎಲ್ಲಾ ಮಕ್ಕಳನ್ನು ತಕ್ಷಣವೇ ಮಕ್ಕಳ ಕಲ್ಯಾಣ ಸಮಿತಿಗಳಿಗೆ (CWC) ಹಾಗೂ ಅವರ ಪೋಷಕರಿಗೆ ಸುರಕ್ಷಿತವಾಗಿ ಹಸ್ತಾಂತರಿಸಲಾಗಿದೆ. ಮಕ್ಕಳನ್ನು ದುಡಿಸಿಕೊಂಡು ನಿಯಮ ಉಲ್ಲಂಘನೆ ಮಾಡಿದ ಮಾಲೀಕರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದ್ದು, ವಿಜಯಪುರದಲ್ಲಿ 3 ಮತ್ತು ಕೊಡಗಿನಲ್ಲಿ 2 ಪ್ರಕರಣಗಳನ್ನು ದಾಖಲಿಸಲಾಗಿದೆ. ಇನ್ನುಳಿದ ಜಿಲ್ಲೆಗಳಲ್ಲೂ ಉಲ್ಲಂಘನೆದಾರರಿಗೆ ಕಾನೂನು ನೋಟಿಸ್ ಜಾರಿ ಮಾಡಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !