ಬೆಳಗ್ಗೆ ಏನ್ ಟಿಫಿನ್ ಮಾಡೋದು ಎಂಬ ಚಿಂತೆನಾ? ಈ ಸಬ್ಬಕ್ಕಿ ದೋಸೆ ಒಮ್ಮೆ ಮಾಡಿ ನೋಡಿ:
ಸಬ್ಬಕ್ಕಿ
ದೋಸೆ ಅಕ್ಕಿ
ಗಟ್ಟಿ ಮೊಸರು
ಅವಲಕ್ಕಿ
ಮೆಂತ್ಯ ಕಾಳು
ಉಪ್ಪು
ಅಡುಗೆ ಎಣ್ಣೆ
ಮೊದಲಿಗೆ ಒಂದು ಪಾತ್ರೆಯಲ್ಲಿ ಅಕ್ಕಿ, ಸಬ್ಬಕ್ಕಿ ಮತ್ತು ಮೆಂತ್ಯ ಕಾಳನ್ನು ಚೆನ್ನಾಗಿ ತೊಳೆದು, ನೀರು ಹಾಕಿ ಕನಿಷ್ಠ 4 ರಿಂದ 5 ಗಂಟೆ ನೆನೆಯಲು ಬಿಡಿ. ರುಬ್ಬುವ 10 ನಿಮಿಷ ಮುಂಚೆ ಅವಲಕ್ಕಿಯನ್ನು ತೊಳೆದು ನೀರಲ್ಲಿ ನೆನೆಸಿಟ್ಟುಕೊಳ್ಳಿ. ನೆನೆಸಿದ ಅಕ್ಕಿ, ಸಬ್ಬಕ್ಕಿ, ಮೆಂತ್ಯ ಮತ್ತು ಅವಲಕ್ಕಿಯನ್ನು ಮಿಕ್ಸಿ ಜಾರ್ಗೆ ಹಾಕಿ. ಅದಕ್ಕೆ ಅರ್ಧ ಕಪ್ ಗಟ್ಟಿ ಮೊಸರು ಸೇರಿಸಿ ನಯವಾಗಿ ರುಬ್ಬಿಕೊಳ್ಳಿ. ರುಬ್ಬಿದ ಹಿಟ್ಟನ್ನು ಒಂದು ಪಾತ್ರೆಗೆ ಹಾಕಿ, ಮುಚ್ಚಳ ಮುಚ್ಚಿ ಇಡೀ ರಾತ್ರಿ ಹುಳಿ ಬರಲು ಬಿಡಿ. ಬೆಳಿಗ್ಗೆ ನೋಡಿದ್ರೆ ಹಿಟ್ಟು ಚೆನ್ನಾಗಿ ಉಬ್ಬಿ ಬಂದಿರುತ್ತೆ. ಈಗ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಸ್ವಲ್ಪ ನೀರು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಮಿಕ್ಸ್ ಮಾಡಿಕೊಳ್ಳಿ.
ಈಗ ಹಂಚು ಬಿಸಿ ಮಾಡಿ, ಒಂದು ಸೌಟು ಹಿಟ್ಟು ಹಾಕಿ ನಿಧಾನವಾಗಿ ಹರಡಿ. ಮೇಲೆ ಸ್ವಲ್ಪ ಎಣ್ಣೆ ಹಾಕಿ, ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ಬೇಯಿಸಿ. ಎರಡೂ ಕಡೆ ಬೇಯಿಸುವ ಅಗತ್ಯವಿಲ್ಲ, ಒಂದು ಕಡೆ ಬೆಂದರೇನೆ ಸಾಕು.
ಈಗ ಬಿಸಿಬಿಸಿಯಾದ ಸಾಫ್ಟ್ ಸಬ್ಬಕ್ಕಿ ದೋಸೆ ರೆಡಿ! ಇದರ ಜೊತೆ ಖಾರ ಖಾರವಾದ ಕಾಯಿ ಚಟ್ನಿ ಅಥವಾ ಆಲೂಗಡ್ಡೆ ಪಲ್ಯ ಸಖತ್ ಕಾಂಬಿನೇಷನ್.



