September 14, 2026
Monday, September 14, 2026
spot_img

ಗುರುಗ್ರಾಮದಲ್ಲಿ ರೋಡ್ ರೇಜ್ ಕೇಸ್: ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದ ಕಾರು, ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಹರಿಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಭಾನುವಾರ ನಡೆದ ಹಿಟ್ ಆ್ಯಂಡ್ ರನ್ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಆಕ್ರೋಶಕ್ಕೆ ಕಾರಣವಾಗಿದೆ. ಸುರಕ್ಷಿತ ಅಂತರ ಕಾಯ್ದುಕೊಳ್ಳುವಂತೆ ಹೇಳಿದ್ದಕ್ಕೆ ಸಿಟ್ಟಿಗೆದ್ದ ಕಾರು ಚಾಲಕನೊಬ್ಬ, ಮಹಿಳಾ ಬೈಕರ್ ಒಬ್ಬರನ್ನು ಬೆನ್ನಟ್ಟಿ ಹೋಗಿ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ತೀವ್ರತೆಗೆ ಯುವತಿ ರಸ್ತೆಯ ಮೇಲೆ ಉರುಳಿಬಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ.

ಕಿರುಕುಳ ನೀಡಿ ಕಾರಿನಿಂದ ಡಿಕ್ಕಿ

ಸಂತ್ರಸ್ತ ಮಹಿಳೆಯನ್ನು ಸಿಯಾ ಎಂದು ಗುರುತಿಸಲಾಗಿದೆ. ಅವರು ತಮ್ಮ ಸೂಪರ್‌ಬೈಕ್‌ನಲ್ಲಿ ಸ್ನೇಹಿತರೊಂದಿಗೆ ಸಂಡೇ ರೈಡ್ ಹೋಗಿದ್ದಾಗ ಬಿಳಿ ಬಣ್ಣದ ಸೆಡಾನ್ ಕಾರೊಂದು ಅವರ ಬೆನ್ನಟ್ಟಿದೆ. ಕಾರಿನಲ್ಲಿದ್ದವರು ಮದ್ಯಪಾನ ಮಾಡಿರುವಂತೆ ಕಂಡುಬಂದಿದ್ದು, ಅಪಾಯಕಾರಿಯಾಗಿ ಡ್ರೈವ್ ಮಾಡುತ್ತಾ ಸಿಯಾ ಅವರಿಗೆ ಬೈಕ್ ನಿಲ್ಲಿಸುವಂತೆ ಸನ್ನೆ ಮಾಡಿದ್ದಾರೆ. ಇದರಿಂದ ಸಿಯಾ ಅವರು ಕಾರಿನಿಂದ ಸುರಕ್ಷಿತ ಅಂತರ ಕಾಯ್ದುಕೊಳ್ಳಲು ವೇಗವಾಗಿ ಮುಂದೆ ಸಾಗಿದ್ದಾರೆ. ಈ ವೇಳೆ ಸಿಯಾ ಅವರ ಸ್ನೇಹಿತರೊಬ್ಬರು ಕಾರು ತಡೆಯಲು ತಮ್ಮ ಬೈಕನ್ನು ಮಧ್ಯದಲ್ಲಿ ತಂದು ರಕ್ಷಣೆ ನೀಡಲು ಯತ್ನಿಸಿದ್ದಾರೆ. ಆದರೆ, ಕಾರು ಚಾಲಕ ಏಕಾಏಕಿ ಸಿಯಾ ಅವರ ಬೈಕಿಗೆ ಬಲವಾಗಿ ಡಿಕ್ಕಿ ಹೊಡೆದಿದ್ದಾನೆ. ಬೈಕ್ ರಸ್ತೆಯುದ್ದಕ್ಕೂ ಉಜ್ಜಿಕೊಂಡು ಕಿಡಿ ಕಾರುತ್ತಾ ಸಾಗುವ ಮತ್ತು ಸಿಯಾ ರಸ್ತೆಗೆ ಬೀಳುವ ದೃಶ್ಯ ಅವರದ್ದೇ ಆಕ್ಷನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಪರಾರಿಯಾದ ಚಾಲಕ

ಅಪಘಾತದ ನಂತರ ಸ್ನೇಹಿತನೊಬ್ಬ ತನ್ನ ಹೆಲ್ಮೆಟ್ ಕ್ಯಾಮೆರಾ ಆನ್ ಮಾಡಿಕೊಂಡು ಕಾರನ್ನು ಬೆನ್ನಟ್ಟಿದ್ದಾನೆ. ಟ್ರಾಫಿಕ್ ಸಿಗ್ನಲ್‌ನಲ್ಲಿ ಕಾರು ನಿಂತಾಗ ಚಾಲಕನನ್ನು ತರಾಟೆಗೆ ತೆಗೆದುಕೊಳ್ಳಲು ಯತ್ನಿಸಿದರೂ, ಆತ ಸಿಗ್ನಲ್ ಜಂಪ್ ಮಾಡಿ ಕಾರನ್ನು ಅತಿ ವೇಗವಾಗಿ ಚಲಾಯಿಸಿಕೊಂಡು ಪರಾರಿಯಾಗಿದ್ದಾನೆ. ಸದ್ಯ ಸಿಯಾ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಯೋಧನಿಗೆ ಸೇರಿದ ಕಾರು

ವಿಡಿಯೋ ವೈರಲ್ ಆದ ಬೆನ್ನಲ್ಲೇ ತನಿಖೆ ನಡೆಸಿದಾಗ, ಅಪಘಾತ ಎಸಗಿದ ಕಾರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧನೊಬ್ಬನಿಗೆ ಸೇರಿದ್ದು ಎಂದು ತಿಳಿದುಬಂದಿದೆ. ಮಾಧ್ಯಮಗಳೊಂದಿಗೆ ಫೋನ್‌ನಲ್ಲಿ ಮಾತನಾಡಿದ ಕಾರಿನ ಮಾಲೀಕ, ನಾನು ಸದ್ಯ ಊರಿನಲ್ಲಿಲ್ಲ, ದೇಶದ ಗಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ನನ್ನ ಸ್ನೇಹಿತನೊಬ್ಬ ಎರಡು ದಿನಗಳಿಗಾಗಿ ನನ್ನ ಕಾರನ್ನು ಪಡೆದುಕೊಂಡಿದ್ದ. ಆತ ಅದನ್ನು ಮತ್ತೊಬ್ಬನಿಗೆ ನೀಡಿದ್ದು, ಆ ವ್ಯಕ್ತಿಯೇ ಅಪಘಾತದ ವೇಳೆ ಕಾರು ಚಲಾಯಿಸುತ್ತಿದ್ದ. ಸದ್ಯ ಆ ಆರೋಪಿ ಮತ್ತು ಕಾರು ಎಲ್ಲಿವೆ ಎಂದು ನಮಗೂ ಗೊತ್ತಿಲ್ಲ ತಿಳಿಸಿದ್ದಾರೆ.

ಇದನ್ನೂ ಓದಿ:

ಸ್ವಯಂಪ್ರೇರಿತ ಕೇಸ್ ದಾಖಲು

ಇಷ್ಟೆಲ್ಲಾ ನಡೆದರೂ ಸಂತ್ರಸ್ತ ಯುವತಿಯ ಕಡೆಯಿಂದ ಯಾವುದೇ ಅಧಿಕೃತ ದೂರು ದಾಖಲಾಗಿರಲಿಲ್ಲ. ಆದರೂ ಘಟನೆಯ ತೀವ್ರತೆಯನ್ನು ಪರಿಗಣಿಸಿದ ಗುರುಗ್ರಾಮ ಪೊಲೀಸರು ಸ್ವಯಂಪ್ರೇರಿತವಾಗಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಸದ್ಯ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ತಲೆಮರೆಸಿಕೊಂಡಿರುವ ಕಾರು ಚಾಲಕನಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ. ಜತೆಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಗಾಯಾಳು ಸಿಯಾ ಅವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !