September 14, 2026
Monday, September 14, 2026
spot_img

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆ: ಬಿಗಿ ಭದ್ರತೆಯಲ್ಲಿ ಮತ ಎಣಿಕೆ ಆರಂಭ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜಸ್ಥಾನದಲ್ಲಿ ತೀವ್ರ ಕುತೂಹಲ ಕೆರಳಿಸಿರುವ 2026ರ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಯು ಸೋಮವಾರಬೆಳಿಗ್ಗೆಯಿಂದಲೇ ಅತ್ಯಂತ ಬಿಗಿ ಪೊಲೀಸ್ ಭದ್ರತೆಯಲ್ಲಿ ಆರಂಭಗೊಂಡಿದೆ. ಆರಂಭಿಕ ಹಂತದಲ್ಲಿ ಆಡಳಿತಾರೂಢ ಬಿಜೆಪಿ ಕೆಲವು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೂ, ವಿರೋಧ ಪಕ್ಷವಾದ ಕಾಂಗ್ರೆಸ್ ಧೀಮಂತ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದೆ.

ಕಾಂಗ್ರೆಸ್ 60ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ?

ರಾಜಸ್ಥಾನ ವಿಧಾನಸಭೆಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ಮುಖ್ಯ ಸಚೇತಕ ರಫೀಕ್ ಖಾನ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, “ಸದ್ಯಕ್ಕೆ ಪ್ರಕಟವಾಗಿರುವ ಆರಂಭಿಕ ಫಲಿತಾಂಶಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿರುವುದು ನಿಜ. ಆದರೆ ಕಾಂಗ್ರೆಸ್ ಭದ್ರಕೋಟೆಯಾಗಿರುವ ವಾರ್ಡ್‌ಗಳ ಎಣಿಕೆ ಕಾರ್ಯ ಇನ್ನೂ ಬಾಕಿ ಇದೆ. ಜೈಪುರದ ಆದರ್ಶ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗಿಂತ ಕಾಂಗ್ರೆಸ್ 2 ರಿಂದ 3 ಸ್ಥಾನಗಳನ್ನು ಹೆಚ್ಚು ಗೆಲ್ಲಲಿದೆ. ಕೃಷ್ಣಪೋಲ್ ಮತ್ತು ಹವಾಮಹಲ್ ಭಾಗಗಳಲ್ಲೂ ಇದೇ ಟ್ರೆಂಡ್ ಇದ್ದು, ಅಂತಿಮವಾಗಿ ನಮ್ಮ ಪಕ್ಷ 60ಕ್ಕೂ ಅಧಿಕ ವಾರ್ಡ್ ಸ್ಥಾನಗಳನ್ನು ತನ್ನದಾಗಿಸಿಕೊಳ್ಳಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಅಜ್ಮೀರ್‌ನ ಕಾಂಗ್ರೆಸ್ ಅಭ್ಯರ್ಥಿ ನೋರತ್ ಗುರ್ಜರ್ ಕೂಡ, ಜನಸಾಮಾನ್ಯರು ಬದಲಾವಣೆ ಬಯಸಿದ್ದು ಈ ಬಾರಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಹೇಳಿದ್ದಾರೆ.

ಜೋಧ್‌ಪುರ ಮತ್ತು ಅಜ್ಮೀರ್‌ನಲ್ಲಿ ಕಟ್ಟುನಿಟ್ಟಿನ ನಿಯಮ

ಜೋಧ್‌ಪುರದ 100 ವಾರ್ಡ್‌ಗಳ 729 ಮತಗಟ್ಟೆಗಳ ಇವಿಎಂ ಮತ ಎಣಿಕೆ ಕಾರ್ಯ ಬೆಳಿಗ್ಗೆ 8 ಗಂಟೆಯಿಂದಲೇ ಆರಂಭವಾಗಿದೆ. ಅಜ್ಮೀರ್ ಜಿಲ್ಲಾಧಿಕಾರಿ ಲೋಕ್ ಬಂಧು ಅವರ ಪ್ರಕಾರ, ಮತ ಎಣಿಕೆಗಾಗಿ 6 ಪ್ರತ್ಯೇಕ ಹಾಲ್‌ಗಳನ್ನು ಸಿದ್ಧಪಡಿಸಲಾಗಿದ್ದು, ಮೊಬೈಲ್ ಫೋನ್‌ಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಶಾಂತಿ ಸುವ್ಯವಸ್ಥೆ ಕಾಪಾಡಲು ಸೆಕ್ಷನ್ 163 ಜಾರಿಗೊಳಿಸಲಾಗಿದ್ದು, ಹಾಗೂ ಯಾವುದೇ ರೀತಿಯ ವಿಜಯೋತ್ಸವದ ಮೆರವಣಿಗೆಗಳನ್ನು ನಿಷೇಧಿಸಲಾಗಿದೆ.

ಇದನ್ನೂ ಓದಿ:

ತಿಲಾವಾಲಾದಲ್ಲಿ ಮರುಮತದಾನ

ಸೆಪ್ಟೆಂಬರ್ 11 ರಂದು ನಡೆದ ಎರಡನೇ ಹಂತದ ಮತದಾನದ ವೇಳೆ, ಸಾಂಗಾನೇರ್‌ನ ತಿಲಾವಾಲಾ ಮತಗಟ್ಟೆಯೊಂದರಲ್ಲಿ ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಆಗಿದ್ದ 110 ಜನರು ಮತ ಚಲಾಯಿಸಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗವು ಇಂದು ಅಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಿಗ್ಗೆ 7 ರಿಂದ ಸಂಜೆ 6 ರವರೆಗೆ ಮರುಮತದಾನಕ್ಕೆ ಆದೇಶಿಸಿದೆ.

ರಾಜಸ್ಥಾನದ ಒಟ್ಟು 309 ನಗರ ಸ್ಥಳೀಯ ಸಂಸ್ಥೆಗಳ ಎರಡೂ ಹಂತದ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಶೇ. 70.01 ರಷ್ಟು ದಾಖಲೆಯ ಮತದಾನವಾಗಿತ್ತು. ಇಂದಿನ ಫಲಿತಾಂಶದ ನಂತರ ಸೆಪ್ಟೆಂಬರ್ 21 ರಂದು ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರ ಹಾಗೂ ಸೆಪ್ಟೆಂಬರ್ 22 ರಂದು ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !