ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲಪಡಿಸೋ ನಿಟ್ಟಿನಲ್ಲಿ ಎಐಸಿಸಿ ಹಲವು ರಾಜ್ಯಗಳ ಉಸ್ತುವಾರಿ ಹೊಣೆಗಾರಿಕೆಗಳನ್ನು ಮರುಹಂಚಿಕೆ ಮಾಡಿದೆ.
ಜತೆಗೆ ಪಕ್ಷದ ಸಂಘಟನಾ ಕಾರ್ಯತಂತ್ರದ ಕುರಿತು ಚರ್ಚಿಸಲು ರಾಹುಲ್ ಗಾಂಧಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಮಂಗಳವಾರ ನವದೆಹಲಿಯ 10 ಜನಪಥ್ನಲ್ಲಿ ಎಐಸಿಸಿ ಕಾರ್ಯದರ್ಶಿಗಳ ಸಭೆ ನಡೆಸಿದರು.
ಕಾರ್ಯದರ್ಶಿಗಳನ್ನು ಹಂತ ಹಂತವಾಗಿ ಸಭೆಗೆ ಆಹ್ವಾನಿಸಲಾಗಿದ್ದು, ರಾಜ್ಯಗಳಲ್ಲಿನ ಪಕ್ಷದ ಸಂಘಟನೆ, ತಳಮಟ್ಟದ ಚಟುವಟಿಕೆ ಹಾಗೂ ಮುಂದಿನ ಕಾರ್ಯತಂತ್ರಗಳ ಕುರಿತು ಚರ್ಚೆ ನಡೆಸಲಾಗಿದೆ. ಇದಕ್ಕೂ ಮುನ್ನ ಎಐಸಿಸಿ ಪ್ರಮುಖ ಪದಾಧಿಕಾರಿಗಳ ಹೊಸ ನೇಮಕಾತಿ ಮತ್ತು ಹೊಣೆಗಾರಿಕೆಗಳ ಮರುಹಂಚಿಕೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಘೋಷಿಸಿತ್ತು.
ಇದನ್ನೂ ಓದಿ:
ಹೊಸ ಬದಲಾವಣೆ ಏನು?
ಹೊಸ ಬದಲಾವಣೆಯಲ್ಲಿ ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಅವರನ್ನು ಪಂಜಾಬ್ನ ಎಐಸಿಸಿ ಪ್ರಧಾನ ಕಾರ್ಯದರ್ಶಿ ಉಸ್ತುವಾರಿಯಾಗಿ ನೇಮಿಸಲಾಗಿದೆ. ರಣದೀಪ್ ಸಿಂಗ್ ಸುರ್ಜೇವಾಲಾ ಅವರಿಗೆ ಗುಜರಾತ್ನ ಉಸ್ತುವಾರಿ ನೀಡಲಾಗಿದ್ದು, ಕರ್ನಾಟಕದ ಪ್ರಧಾನ ಕಾರ್ಯದರ್ಶಿ ಉಸ್ತುವಾರಿ ಜವಾಬ್ದಾರಿಯನ್ನೂ ಹೆಚ್ಚುವರಿಯಾಗಿ ಮುಂದುವರಿಸಲಾಗಿದೆ.
ಛತ್ತೀಸ್ಗಢದ ಉಸ್ತುವಾರಿಯನ್ನು ಸುಖದೇವ್ ಭಗತ್, ಮಹಾರಾಷ್ಟ್ರದ ಉಸ್ತುವಾರಿಯನ್ನು ಡಾ. ಸಿರಿವೆಲ್ಲ ಪ್ರಸಾದ್ ಹಾಗೂ ಆಂಧ್ರಪ್ರದೇಶದ ಹೊಣೆಯನ್ನು ಪಿ.ವಿ. ಮೋಹನ್ ಅವರಿಗೆ ನೀಡಲಾಗಿದೆ. ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರನ್ನು ಅಸ್ಸಾಂನ ಪ್ರಧಾನ ಕಾರ್ಯದರ್ಶಿ ಉಸ್ತುವಾರಿಯಾಗಿ ನೇಮಿಸಲಾಗಿದೆ.
ಇದೇ ವೇಳೆ ಸಂಜಯ್ ದತ್ ಅವರಿಗೆ ಹರಿಯಾಣದ ಉಸ್ತುವಾರಿ ಜವಾಬ್ದಾರಿ ನೀಡಲಾಗಿದೆ. ಎಐಸಿಸಿ ಕಾರ್ಯದರ್ಶಿ ಹಾಗೂ ಒಬಿಸಿ ನಾಯಕ ಬಿ.ವಿ. ಶ್ರೀನಿವಾಸ್ ಅವರನ್ನು ಕಾಂಗ್ರೆಸ್ ಸೇವಾದಳದ ಮುಖ್ಯ ಸಂಘಟಕರಾಗಿ ನೇಮಿಸಲಾಗಿದೆ.



