October 8, 2026
Thursday, October 8, 2026

ಭಾರತದಲ್ಲಿವೆ ‘Made in Pakistan’, ಹೆವಿ ಮೆಟಲ್‌ ಹೊಂದಿರುವ ಫೇಸ್‌ ಕ್ರೀಂ: ದೇಶಾದ್ಯಂತ ಅಲರ್ಟ್‌ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಭಾರತದಲ್ಲಿ ಮೇಡ್‌ ಇನ್‌ ಪಾಕಿಸ್ತಾನ ಲೇಬಲ್‌ ಇರುವ, ಹೆವಿ ಮೆಟಲ್‌ಗಳಿಂದ ತುಂಬಿರುವ ಎರಡು ಫೇಸ್‌ ಕ್ರೀಂಗಳು ಮಾರಾಟವಾಗುತ್ತಿದ್ದು, ಇದರ ವಿರುದ್ಧ ಭಾರತದ ಔಷಧ ನಿಯಂತ್ರಕ ಸಂಸ್ಥೆಯು ಸಾರ್ವಜನಿಕ ಆರೋಗ್ಯ ಎಚ್ಚರಿಕೆಯನ್ನು ನೀಡಿದೆ.

ʼಗೋರಿ ಬ್ಯೂಟಿ ಕ್ರೀಂʼ ಹಾಗೂ ʼಚಾಂದನಿ ವೈಟ್ನಿಂಗ್‌ ಕ್ರೀಂʼ ಎನ್ನುವ ಹೆಸರಿನ ಈ ಎರಡು ಸೌಂದರ್ಯವರ್ಧಕಗಳ ಮಾರಾಟ ಹಾಗೂ ವಿತರಣೆಯಾಗುತ್ತಿದೆ. ಇದೆರಡೂ ಪಾಕಿಸ್ತಾನದಲ್ಲಿ ತಯಾರಾದ ಕ್ರೀಂಗಳಾಗಿವೆ. ಇದರಲ್ಲಿರುವ ಹೆವಿ ಮೆಟಲ್‌ಗಳು ಆರೋಗ್ಯಕ್ಕೆ ಹಾನಿಯನ್ನು ಉಂಟು ಮಾಡುತ್ತವೆ. ಈ ಕ್ರೀಂಗಳ ವಿರುದ್ಧ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ ಎಚ್ಚರಿಕೆಯನ್ನು ನೀಡಿದೆ.

ಕ್ರೀಂಗಳ ಫೋಟೊ ಹಂಚಿಕೊಂಡಿರುವ ಭಾರತದ ಡ್ರಗ್ಸ್‌ ಕಂಟ್ರೋಲರ್‌ ಜನರಲ್‌, ಇವು ಅನಧಿಕೃತವಾಗಿವೆ. ಇರಬೇಕಾದ್ದಕ್ಕಿಂತ ಹೆಚ್ಚು ಲೋಹದ ಅಂಶವನ್ನು ಒಳಗೊಂಡಿದೆ. ಇದನ್ನು ನಿತ್ಯ ಹಚ್ಚುವ ಮಹಿಳೆಯರಿಗೆ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಈ ಎರಡು ಕ್ರೀಂಗಳನ್ನು ಭಾರತದಲ್ಲಿ ಮಾರಾಟ ಮಾಡೋದಕ್ಕೆ ಪರ್ಮಿಷನ್‌ ಇಲ್ಲ. ಗ್ರಾಹಕರು ಬಳಸುವ ಸೌಂದರ್ಯವರ್ಧಕ ಉತ್ಪನ್ನಗಳು ಸಾರ್ವಜನಿಕರಿಗೆ ಸುರಕ್ಷಿತವಾಗಿರಬೇಕು. ಇವುಗಳ ಉತ್ಪಾದನೆ ಮತ್ತು ಆಮದನ್ನು ‘ಡ್ರಗ್ಸ್ ಅಂಡ್ ಕಾಸ್ಮೆಟಿಕ್ಸ್ ಆಕ್ಟ್, 1940’ ಮತ್ತು ‘ಕಾಸ್ಮೆಟಿಕ್ಸ್ ರೂಲ್ಸ್, 2020’ ರ ಅಡಿಯಲ್ಲಿ ನಿಯಂತ್ರಿಸಲಾಗುತ್ತದೆ.

ಈ ಉತ್ಪನ್ನಗಳು ಕಣ್ಣಿಗೆ ಬಿದ್ದಲ್ಲಿ ಮಾಹಿತಿ ನೀಡಬೇಕು. ಯಾರೂ ಇದನ್ನು ಖರೀದಿ ಮಾಡಬಾರದು, ಒಂದು ವೇಳೆ ಖರೀದಿ ಮಾಡಿದ್ದಾದಲ್ಲಿ ಬಳಕೆ ಮಾಡಬಾರದು ಎಂದು ಮಾಹಿತಿ ನೀಡಲಾಗಿದೆ. ಉತ್ಪನ್ನದ ಲೇಬಲ್‌ನಲ್ಲಿ ಯಾವುದೇ ಉಲ್ಲಂಘನೆ ಕಂಡುಬಂದಲ್ಲಿ, ಭಾರತದಲ್ಲಿ ತಯಾರಾದ ಉತ್ಪನ್ನಗಳ ಬಗ್ಗೆ ಸಂಬಂಧಪಟ್ಟ ರಾಜ್ಯ ಡ್ರಗ್ಸ್ ಕಂಟ್ರೋಲರ್‌ಗೆ ಮತ್ತು ಆಮದು ಮಾಡಿಕೊಂಡ ಸೌಂದರ್ಯವರ್ಧಕ ಉತ್ಪನ್ನಗಳ ಬಗ್ಗೆ DCGI ಗೆ ವರದಿ ಮಾಡುವಂತೆಯೂ ಗ್ರಾಹಕರಿಗೆ ಸೂಚಿಸಲಾಗಿದೆ.

Must Read