ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಕ್ಸ್ ಆಫೀಸ್‌ನಲ್ಲಿ ಈಗ ಎಲ್ಲೇ ನೋಡಿದ್ರೂ ‘ಮಂಡಾಡಿ’ ಹವಾ ಜೋರಾಗಿದೆ. ಹಾಸ್ಯ ನಟನಾಗಿ ಎಲ್ಲರನ್ನೂ ನಗಿಸ್ತಿದ್ದ ಸೂರಿ, ಈಗ ಸೀರಿಯಸ್ ಹೀರೋ ಆಗಿ ಥಿಯೇಟರ್‌ಗೆ ಬಂದು ಬಾಕ್ಸ್ ಆಫೀಸ್ ಅನ್ನೇ ಅಲ್ಲಾಡಿಸ್ತಿದ್ದಾರೆ. ರಿಲೀಸ್ ಆದ ಮೊದಲ ವಿಕೆಂಡ್‌ನಲ್ಲೇ ಭರ್ಜರಿ ಕಲೆಕ್ಷನ್ ಮಾಡಿದ್ದ ಈ ಸ್ಪೋರ್ಟ್ಸ್ ಆಕ್ಷನ್ ಸಿನಿಮಾ, ವೀಕ್‌ಡೇಸ್‌ನಲ್ಲೂ ತನ್ನ ಅಬ್ಬರ ಕಮ್ಮಿ ಮಾಡಿಲ್ಲ. ಸೋಮವಾರ, ಮಂಗಳವಾರ ಬಂತು ಅಂದ್ರೆ ಸಾಕು ಥಿಯೇಟರ್‌ಗಳು ಖಾಲಿ ಹೊಡೆಯುತ್ತವೆ, ಆದ್ರೆ ಈ ‘ಮಂಡಾಡಿ’ ಚಿತ್ರ ಮಂಗಳವಾರ ಒಂದೇ ದಿನ ಬರೋಬ್ಬರಿ 6 ಕೋಟಿ ರೂಪಾಯಿ ಬಾಚಿಕೊಂಡಿದೆ.
ಚಿತ್ರಕ್ಕೆ ಸಿಕ್ಕಿರೋ ಪಾಸಿಟಿವ್ ಟಾಕ್‌ನಿಂದಾಗಿ, ಬರಿ ಆರೇ ದಿನದಲ್ಲಿ ಇಂಡಿಯನ್ ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 57 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸ್‌ನಲ್ಲಿ ಸೌಂಡ್ ಮಾಡ್ತಿದೆ. ಜನರ ಬಾಯಲ್ಲಿ ಒಳ್ಳೆ ಮಾತು ಕೇಳಿಬರ್ತಿರೋದ್ರಿಂದ, ಈ ಸಿನಿಮಾ ಈಗಲೇ ಸೂಪರ್ ಹಿಟ್ ಲಿಸ್ಟ್‌ಗೆ ಸೇರಿಕೊಂಡಿದೆ. ಬರುವ ದಿನಗಳಲ್ಲೂ ಈ ದೋಣಿ ಓಟ ಹೀಗೆಯೇ ಮುಂದುವರಿಯೋ ಮುನ್ಸೂಚನೆ ಸಿಗ್ತಿದೆ.
ಈ ಸಿನಿಮಾದ ಕಥೆ ನಡೆಯೋದು ಕರಾವಳಿ ಹಳ್ಳಿಯೊಂದರಲ್ಲಿ. ನಾಯಕ ಮುತ್ತುಕಾಳಿ ಒಂದು ಕಾಲದಲ್ಲಿ ದೋಣಿ ರೇಸಿಂಗ್‌ನಲ್ಲಿ ಚಾಂಪಿಯನ್. ಆದರೆ ಯಾವುದೋ ಹಳೆ ದ್ವೇಷಕ್ಕೆ ಬೇಸತ್ತು ಹಳ್ಳಿ ಬಿಟ್ಟು ಚೆನ್ನೈಗೆ ಬಂದು, ಲೈಫ್ ಗಾರ್ಡ್ ಆಗಿ ಇರ್ತಾನೆ. ಆದರೆ ಹಳ್ಳಿಯಲ್ಲಿ ಮಾರಿ ಅನ್ನೋ ಯುವ ರೇಸರ್‌ಗೆ ಮುತ್ತುಕಾಳಿ ಹಳೆ ವೈರಿ ‘ಸಟ್ಟಪುಲಿ’ ಕಡೆಯಿಂದ ದೊಡ್ಡ ತೊಂದರೆ ಎದುರಾಗುತ್ತೆ.
ಆಗ ಸಟ್ಟಪುಲಿಯ ‘ಸುನಾಮಿ ರೈಡರ್ಸ್’ ತಂಡವನ್ನು ಸೋಲಿಸಲು, ಮುತ್ತುಕಾಳಿಯನ್ನು ಹುಡುಕಿಕೊಂಡು ಚೆನ್ನೈಗೆ ಬರ್ತಾನೆ ಮಾರಿ. ಕೊನೆಗೆ ಹಳ್ಳಿಯ ಹುಡುಗರನ್ನೇ ಸೇರಿಸಿ ಒಂದು ಲೋಕಲ್ ಟೀಮ್ ರೆಡಿ ಮಾಡಿ, ದೋಣಿ ರೇಸ್ ಅಲ್ಲಿ ಗೆಲ್ಲೋಕೆ ಮುತ್ತುಕಾಳಿ ಹೇಗೆ ಕಣಕ್ಕಿಳಿತಾನೆ? ಹಳೆ ದ್ವೇಷಗಳನ್ನು ಮರೆತು, ತನ್ನ ಗೆಲುವಿನ ಹಸುವನ್ನು ಮತ್ತೆ ಹೇಗೆ ಕಂಡುಕೊಳ್ತಾನೆ ಅನ್ನೋದೇ ಈ ಚಿತ್ರದ ರೋಮಾಂಚನಕಾರಿ ಕಥೆ.
ಮತಿಮಾರನ್ ಪಳಗೇಂಧಿ ನಿರ್ದೇಶನದ ಈ ಸಿನಿಮಾದಲ್ಲಿ ಸೂರಿ ಮತ್ತು ಸುಹಾಸ್ ನಟನೆಗೆ ಜನ ಫುಲ್ ಫಿದಾ ಆಗಿದ್ದಾರೆ. ಸತ್ಯರಾಜ್, ಮಹಿಮಾ ನಂಬಿಯಾರ್, ಕೆ.ಆರ್. ಹಸನ್ ಹಾಗೂ ಬಾಲ ಶರವಣನ್ ಅವರಂಥ ಘಟಾನುಘಟಿ ಕಲಾವಿದರ ಅಭಿನಯ ಸಿನಿಮಾಗೆ ದೊಡ್ಡ ಶಕ್ತಿ ತಂದಿದೆ.



