September 16, 2026
Wednesday, September 16, 2026
spot_img

ಬೆಳಗಾವಿಯಲ್ಲಿ ‘ಮಕ್ಕಳ ಸಾಹಿತ್ಯ ಸಂಭ್ರಮ’: 15 ಸಾವಿರ ವಿದ್ಯಾರ್ಥಿಗಳ ನಿರೀಕ್ಷೆ; ಅಡಿವೇಶ ಇಟಗಿ

ಹೊಸದಿಗಂತ ವರದಿ ಬೆಳಗಾವಿ:

ಮಕ್ಕಳಲ್ಲಿ ಸಾಹಿತ್ಯ, ಸಂಸ್ಕೃತಿ ಹಾಗೂ ಸಾಮಾಜಿಕ ಅರಿವು ಬೆಳೆಸುವ ಉದ್ದೇಶದಿಂದ ಬೆಳಗಾವಿ ನಗರದಲ್ಲಿ ಮೂರು ದಿನಗಳ ಮಕ್ಕಳ ಸಾಹಿತ್ಯ ಸಮ್ಮೇಳನ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಅಡಿವೇಶ ಇಟಗಿ ತಿಳಿಸಿದರು.

ಬುಧವಾರ ನಗರದ ಸರ್ಕಿಟ್ ಹೌಸ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿಯ ವಾತಾವರಣ ಹಾಗೂ ಲಭ್ಯವಿರುವ ಮೂಲಸೌಕರ್ಯ ಸೇರಿದಂತೆ ಕಾರ್ಯಕ್ರಮ ಆಯೋಜನೆಗೆ ಅಗತ್ಯವಿರುವ ಎಲ್ಲ ರೀತಿಯ ಅನುಕೂಲತೆಗಳಿರುವುದರಿಂದ ನಗರವನ್ನು ಸಮ್ಮೇಳನದ ಸ್ಥಳವಾಗಿ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.

ಅಕ್ಟೋಬರ್ ಅಥವಾ ನವೆಂಬರ್ ಕೊನೆಯ ವಾರದಲ್ಲಿ ನಗರದ ಸಿಪಿಎಡ್ ಮೈದಾನದಲ್ಲಿ ಮೂರು ದಿನಗಳ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ. ಸಮ್ಮೇಳನದ ಅಂಗವಾಗಿ ವಿವಿಧ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.

ಇದನ್ನೂ ಓದಿ:

ಮೂರು ದಿನಗಳ ಕಾರ್ಯಕ್ರಮದಲ್ಲಿ ಪ್ರತಿದಿನ ರಾಜ್ಯದ ವಿವಿಧ ಭಾಗಗಳಿಂದ ಸುಮಾರು 10ರಿಂದ 15 ಸಾವಿರ ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆಯಿದೆ. ಮಕ್ಕಳೊಂದಿಗೆ ಪಾಲಕರು ಹೇಗೆ ನಡೆದುಕೊಳ್ಳಬೇಕು, ಮಕ್ಕಳಿಗೆ ಮೊಬೈಲ್ ಬಳಕೆ ಅಗತ್ಯವೇ ಅಥವಾ ಅದರ ಬಳಕೆಯನ್ನು ಹೇಗೆ ನಿಯಂತ್ರಿಸಬೇಕು ಎಂಬುದರ ಕುರಿತು ಕೂಡ ಕಾರ್ಯಕ್ರಮದಲ್ಲಿ ಅರಿವು ಮೂಡಿಸಲಾಗುವುದು ಎಂದು ಅಡಿವೇಶ ಇಟಗಿ ತಿಳಿಸಿದರು.

ತಾವು ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷರಾದ ಬಳಿಕ ಮಕ್ಕಳ ಸುರಕ್ಷತೆ ಹಾಗೂ ಹಕ್ಕುಗಳ ವಿಚಾರದಲ್ಲಿ ಹಲವು ಕ್ರಮಗಳನ್ನು ಕೈಗೊಂಡಿದ್ದು, ಬಾಲ್ಯವಿವಾಹ ಮತ್ತು ಪೋಕ್ಸೋ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಾನೂನು ಕ್ರಮ ಕೈಗೊಳ್ಳುವಲ್ಲಿ ಕೆಲಸ ಮಾಡಿರುವುದಾಗಿ ತಿಳಿಸಿದರು.

ಕಲಬುರಗಿಯಲ್ಲಿ ಪ್ರಾರಂಭಿಸಲಾದ ‘ಅಕ್ಕಪಡೆ’ ಕಾರ್ಯಕ್ರಮವನ್ನು ಇದೀಗ ರಾಜ್ಯದಾದ್ಯಂತ ವಿಸ್ತರಿಸಲಾಗುತ್ತಿದೆ. ಮಕ್ಕಳ ಸುರಕ್ಷತೆ ಹಾಗೂ ಅವರ ಹಕ್ಕುಗಳ ಕುರಿತು ಜಾಗೃತಿ ಮೂಡಿಸುವುದು ಇದರ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.

ಈ ವೇಳೆ ವಿರೂಪಾಕ್ಷಗೌಡ ಪಾಟೀಲ, ಹೆಗ್ಗಡೆ, ಮೇಘನಾ ಹಿರೇಮಠ, ರೇಣುಕಾ ಎಚ್. ಪುತ್ರಣ ಅಧಿಕಾರಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !