September 16, 2026
Wednesday, September 16, 2026
spot_img

ಕನ್ನಡದ ಅಭಿನಯ ದಿಗ್ಗಜ ಅನಂತ್ ನಾಗ್‌ಗೆ ‘ದಾದಾಸಾಹೇಬ್ ಫಾಲ್ಕೆ’ ಗೌರವ: ಸೆ.22ರಂದು ಪ್ರಶಸ್ತಿ ಪ್ರದಾನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡ ಚಿತ್ರರಂಗದಲ್ಲಿ ಐದು ದಶಕಗಳಿಗೂ ಹೆಚ್ಚು ಕಾಲ ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದೆ ಉಳಿದುಕೊಂಡ ಹಿರಿಯ ನಟ ಅನಂತ್ ನಾಗ್ ಅವರ ಕಲಾ ಪಯಣಕ್ಕೆ ಇದೀಗ ದೇಶದ ಪ್ರತಿಷ್ಠಿತ ಸಿನಿಮಾ ಗೌರವವೊಂದು ಒಲಿದುಬಂದಿದೆ.

ಭಾರತೀಯ ಚಿತ್ರರಂಗಕ್ಕೆ ಅವರು ನೀಡಿರುವ ಸುದೀರ್ಘ ಕೊಡುಗೆಯನ್ನು ಪರಿಗಣಿಸಿ, 2024ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಅನಂತ್ ನಾಗ್ ಅವರನ್ನು ಆಯ್ಕೆ ಮಾಡಲಾಗಿದೆ.

ಸೆಪ್ಟೆಂಬರ್ 22ರಂದು ಪ್ರಶಸ್ತಿ ಪ್ರದಾನ

ಸೆಪ್ಟೆಂಬರ್ 22ರಂದು ಗುಜರಾತ್‌ನ ಏಕತಾ ನಗರ, ಕೆವಾಡಿಯಾದಲ್ಲಿ ನಡೆಯಲಿರುವ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅನಂತ್ ನಾಗ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

1948ರ ಸೆಪ್ಟೆಂಬರ್ 4ರಂದು ಜನಿಸಿದ ಅನಂತ್ ನಾಗ್, ಕನ್ನಡ ಚಿತ್ರರಂಗದ ಅತ್ಯಂತ ಪರಿಚಿತ ನಟರಲ್ಲಿ ಒಬ್ಬರು. ಐದು ದಶಕಗಳಿಗೂ ಹೆಚ್ಚು ಕಾಲದ ಸಿನಿ ಪಯಣದಲ್ಲಿ ಅವರು 300ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದು, ಇದರಲ್ಲಿ 250ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಿವೆ. ಕನ್ನಡದ ಜತೆಗೆ ಹಿಂದಿ, ತೆಲುಗು, ತಮಿಳು, ಮರಾಠಿ, ಮಲಯಾಳಂ ಹಾಗೂ ಇಂಗ್ಲಿಷ್ ಭಾಷೆಯ ಚಿತ್ರಗಳಲ್ಲೂ ನಟಿಸಿದ್ದಾರೆ.

ಇದನ್ನೂ ಓದಿ:

ಅವರ ಕಲಾ ಸೇವೆಗೆ ಈಗಾಗಲೇ ಐದು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಸಂದಿವೆ. 2025ರಲ್ಲಿ ಭಾರತ ಸರ್ಕಾರವು ಅವರಿಗೆ ಪದ್ಮಭೂಷಣ ಗೌರವವನ್ನೂ ನೀಡಿತ್ತು.

ಪ್ರಧಾನಿಯಿಂದ ಶ್ಲಾಘನೆ

ಪ್ರಧಾನಿ ನರೇಂದ್ರ ಮೋದಿ ಅವರು ಅನಂತ್ ನಾಗ್ ಅವರಿಗೆ ಅಭಿನಂದನೆ ಸಲ್ಲಿಸಿ, ಅವರ ವೈವಿಧ್ಯಮಯ ಅಭಿನಯ ಮತ್ತು ಕನ್ನಡ ಸೇರಿದಂತೆ ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಶ್ಲಾಘಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !