ಹೊಸದಿಗಂತ ಡಿಜಿಟಲ್ ಡೆಸ್ಕ್:
ವ್ಯಕ್ತಿಯಿಂದ ವ್ಯಾಪಾರಿಗೆ ನಡೆಯುವ ವಹಿವಾಟುಗಳಲ್ಲಿ 2,000 ರೂ.ಗಿಂತ ಹೆಚ್ಚಿನ UPI ಪಾವತಿಗಳ ಮೇಲೆ ಶೇ.0.4ರಷ್ಟು ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ವಿಧಿಸುವ ಕೇಂದ್ರದ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಲಾಗಿದೆ.
ಅರ್ಜಿ ಸಲ್ಲಿಸಿರುವ ವಕೀಲ ಅಂಜನ್ ದತ್ತಾ, ಶುಲ್ಕ ಜಾರಿಗೂ ಮುನ್ನ ಸಮರ್ಪಕ ಶಾಸನಬದ್ಧ ರಕ್ಷಣೆ, ಪಾರದರ್ಶಕತೆ ಹಾಗೂ ಸಾರ್ವಜನಿಕ ಸಮಾಲೋಚನೆ ನಡೆದಿಲ್ಲ ಎಂದು ವಾದಿಸಿದ್ದಾರೆ.
ಇದನ್ನೂ ಓದಿ:
75 ಸಾವಿರಕ್ಕಿಂತ ಹೆಚ್ಚಿನ ವಹಿವಾಟಿಗೆ ಇಷ್ಟೊಂದು MDR
ಹೊಸ MDR ವ್ಯವಸ್ಥೆ ಅಕ್ಟೋಬರ್ 15ರಿಂದ ಜಾರಿಗೆ ಬರಲಿದ್ದು, 2,000ಕ್ಕಿಂತ ಹೆಚ್ಚಿನ ನಿರ್ದಿಷ್ಟ P2M (ವ್ಯಕ್ತಿಯಿಂದ ವ್ಯಾಪಾರಿಗೆ ವಹಿವಾಟು) UPI ವಹಿವಾಟುಗಳಿಗೆ ಶೇ.0.4ರಷ್ಟು ಶುಲ್ಕ ಅನ್ವಯವಾಗಲಿದೆ. 2,000ವರೆಗಿನ ವಹಿವಾಟುಗಳಿಗೆ MDR ಇರುವುದಿಲ್ಲ. 75,000 ಅಥವಾ ಅದಕ್ಕಿಂತ ಹೆಚ್ಚಿನ ವಹಿವಾಟಿಗೆ MDR ಗರಿಷ್ಠ 300ಕ್ಕೆ ಸೀಮಿತವಾಗಿರಲಿದೆ.
ಸೆಪ್ಟೆಂಬರ್ 14ರಂದು ಹೊರಡಿಸಲಾದ ಕೇಂದ್ರದ ಅಧಿಸೂಚನೆ ಹಾಗೂ ಸೆಪ್ಟೆಂಬರ್ 15ರಂದು ಪ್ರಕಟಿಸಲಾದ MDR ನಿಯಮವನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ. ಈ ಶುಲ್ಕ ವ್ಯವಸ್ಥೆಯ ಜಾರಿಗೆ ಸಂಬಂಧಿಸಿದಂತೆ ಅಗತ್ಯ ದಾಖಲೆಗಳು, ವೆಚ್ಚದ ಅಧ್ಯಯನ ಮತ್ತು ಸುರಕ್ಷತಾ ಕ್ರಮಗಳನ್ನು ಸಾರ್ವಜನಿಕಗೊಳಿಸಿಲ್ಲ ಎಂಬುದು ಅರ್ಜಿದಾರರ ಪ್ರಮುಖ ವಾದವಾಗಿದೆ.



