ಹೊಸದಿಗಂತ ಡಿಜಿಟಲ್ ಡೆಸ್ಕ್:
2,000 ರೂ ಗಿಂತ ಹೆಚ್ಚಿನ ನಿರ್ದಿಷ್ಟ UPI ಮರ್ಚೆಂಟ್ ವಹಿವಾಟುಗಳಿಗೆ ಶೇ.0.4ರಷ್ಟು ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ವಿಧಿಸುವ ಕೇಂದ್ರದ ಹೊಸ ವ್ಯವಸ್ಥೆ ಇದೀಗ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ. ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಈ ನಿರ್ಧಾರವನ್ನು ತಕ್ಷಣ ಹಿಂಪಡೆಯುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಭಾರತೀಯರ ಮೇಲೆ ಆರ್ಥಿಕ ಹೊರೆ
ಬುಧವಾರ ‘ಎಕ್ಸ್’ನಲ್ಲಿ ವಿಡಿಯೋ ಸಂದೇಶ ಹಂಚಿಕೊಂಡ ರಾಹುಲ್ ಗಾಂಧಿ, ಹೊಸ UPI ಶುಲ್ಕ ವ್ಯವಸ್ಥೆಯನ್ನು ಟೀಕಿಸಿ, ಪ್ರಧಾನಿ ನರೇಂದ್ರ ಮೋದಿ ಅವರು ಈ ನಿರ್ಧಾರವನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು. UPI ಮೇಲಿನ ಶುಲ್ಕದಿಂದ ಭಾರತೀಯರ ಮೇಲೆ ಆರ್ಥಿಕ ಹೊರೆ ಬೀಳಲಿದೆ ಎಂದು ಅವರು ಆರೋಪಿಸಿದರು.
ಇದನ್ನೂ ಓದಿ:
ದೊಡ್ಡ ಪ್ರಮಾಣದ ಹಣ ಅಮೆರಿಕಕ್ಕೆ ಹೋಗಲಿದೆ
ಅಮೆರಿಕದ ಒತ್ತಡಕ್ಕೆ ಕೇಂದ್ರ ಸರ್ಕಾರ ಮಣಿದಿದೆ ಎಂಬ ಆರೋಪವನ್ನೂ ರಾಹುಲ್ ಗಾಂಧಿ ಮಾಡಿದ್ದು, ಹೊಸ UPI ನೀತಿಯಿಂದ ದೊಡ್ಡ ಪ್ರಮಾಣದ ಹಣ ಅಮೆರಿಕಕ್ಕೆ ಹೋಗಲಿದೆ ಎಂದು ಅವರು ಪ್ರತಿಪಾದಿಸಿದರು. ಈ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ವಿದೇಶಿ ಒತ್ತಡದ ಆರೋಪವನ್ನು ತಳ್ಳಿಹಾಕಿದ್ದು, UPI ವ್ಯವಸ್ಥೆಯ ದೀರ್ಘಕಾಲೀನ ಆರ್ಥಿಕ ಸುಸ್ಥಿರತೆಗಾಗಿ ಹೊಸ MDR ಚೌಕಟ್ಟನ್ನು ಜಾರಿಗೆ ತರಲಾಗುತ್ತಿದೆ ಎಂದು ಹೇಳಿದೆ.
ಹೊಸ ವ್ಯವಸ್ಥೆಯ ಪ್ರಕಾರ ಅಕ್ಟೋಬರ್ 15ರಿಂದ 2,000 ರೂ ಗಿಂತ ಹೆಚ್ಚಿನ ಮೊತ್ತ ವ್ಯಕ್ತಿಯಿಂದ ವ್ಯಾಪಾರಿಗೆ ಮಾಡುವ (P2M) UPI ವಹಿವಾಟುಗಳಿಗೆ ಶೇ.0.4ರಷ್ಟು MDR ವಿಧಿಸಲಾಗುತ್ತದೆ. 75,000 ಅಥವಾ ಅದಕ್ಕಿಂತ ಹೆಚ್ಚಿನ ವಹಿವಾಟುಗಳಿಗೆ MDR ಗರಿಷ್ಠ 300 ರೂ.ಗೆ ಸೀಮಿತವಾಗಿದೆ.
MDR ಅನ್ನು ನೇರವಾಗಿ ಗ್ರಾಹಕರಿಂದ ವಸೂಲಿ ಮಾಡುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಬ್ಯಾಂಕ್ಗಳು ಮತ್ತು ಪಾವತಿ ವ್ಯವಸ್ಥೆಯ ಭಾಗಿಯಾಗಿರುವ ಸಂಸ್ಥೆಗಳು ಈ ಶುಲ್ಕವನ್ನು ಗ್ರಾಹಕರಿಗೆ ಪ್ರತ್ಯೇಕ ಶುಲ್ಕವಾಗಿ ವರ್ಗಾಯಿಸದಂತೆ ಸೂಚಿಸಲಾಗಿದೆ.



