ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದು, ಜಾಗತಿಕ ನಾಯಕರಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಈ ಪೈಕಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಪ್ರಧಾನಿ ಮೋದಿಯವರಿಗೆ ವಿಶೇಷ ಸಂದೇಶ ಕಳುಹಿಸುವ ಮೂಲಕ ಜನ್ಮದಿನದ ಶುಭಾಶಯ ಕೋರಿದ್ದಾರೆ. ಭಾರತದಲ್ಲಿರುವ ರಷ್ಯಾ ರಾಯಭಾರ ಕಚೇರಿಯು ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಈ ಸಂದೇಶವನ್ನು ಹಂಚಿಕೊಂಡಿದೆ.
ಜಾಗತಿಕ ಮಟ್ಟದಲ್ಲಿ ಮೋದಿಗೆ ಅಪಾರ ಗೌರವ: ಪುಟಿನ್
ಪ್ರಧಾನಿ ಮೋದಿಯವರ ನಾಯಕತ್ವವನ್ನು ಕೊಂಡಾಡಿರುವ ವ್ಲಾಡಿಮಿರ್ ಪುಟಿನ್, ʼನಿಮ್ಮ ದೇಶದ ಜನತೆ ನಿಮ್ಮ ಮೇಲೆ ಇಟ್ಟಿರುವ ಅಪಾರ ಗೌರವ ಮತ್ತು ಜಾಗತಿಕ ಮಟ್ಟದಲ್ಲಿ ನೀವು ಹೊಂದಿರುವ ಉತ್ತಮ ಅಧಿಕಾರ ನಿಜಕ್ಕೂ ಹೆಮ್ಮೆಯ ವಿಷಯ. ಭಾರತ ಮತ್ತು ರಷ್ಯಾ ನಡುವಿನ ವಿಶೇಷ ಹಾಗೂ ಸೌಹಾರ್ದಯುತ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸುವಲ್ಲಿ ನಿಮ್ಮ ವೈಯಕ್ತಿಕ ಕೊಡುಗೆಯನ್ನು ಎಷ್ಟು ಶ್ಲಾಘಿಸಿದರೂ ಸಾಲದುʼ ಎಂದು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
ದೆಹಲಿ ಭೇಟಿಯ ಆತಿಥ್ಯಕ್ಕೆ ಧನ್ಯವಾದ
ಕಳೆದ ವಾರವಷ್ಟೇ ನವದೆಹಲಿಯಲ್ಲಿ ನಡೆದ 18ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ಪುಟಿನ್ ಭಾರತಕ್ಕೆ ಭೇಟಿ ನೀಡಿದ್ದರು. ಈ ಭೇಟಿಯ ಸಂದರ್ಭದಲ್ಲಿ ತಮಗೆ ಮತ್ತು ರಷ್ಯಾ ನಿಯೋಗಕ್ಕೆ ನೀಡಲಾದ ಆತ್ಮೀಯ ಸ್ವಾಗತ ಹಾಗೂ ರಾಜಾತಿಥ್ಯಕ್ಕೆ ಪುಟಿನ್ ಧನ್ಯವಾದ ತಿಳಿಸಿದ್ದಾರೆ. ಪ್ರಧಾನಿ ಮೋದಿಯವರೊಂದಿಗಿನ ಮಾತುಕತೆಗಳು ಯಾವಾಗಲೂ ಮುಕ್ತ ಮತ್ತು ಸ್ಪಷ್ಟವಾಗಿರುತ್ತವೆ ಎಂದು ಅವರು ಬಣ್ಣಿಸಿದ್ದಾರೆ.
ಮುಂದುವರಿಯಲಿರುವ ದ್ವಿಪಕ್ಷೀಯ ಸಹಕಾರ
ನಿಮ್ಮೊಂದಿಗೆ ಮಾತನಾಡುವಾಗ ನನಗೆ ನಿಜವಾದ ಸಂತೋಷ ಸಿಗುತ್ತದೆ. ನಮ್ಮ ಚರ್ಚೆಗಳು ನಿಮ್ಮ ಅಸಾಧಾರಣ ರಾಜಕೀಯ ಬುದ್ಧಿವಂತಿಕೆ ಮತ್ತು ದೂರದೃಷ್ಟಿಯನ್ನು ಮತ್ತೊಮ್ಮೆ ಸಾಬೀತುಪಡಿಸಿವೆ. ನಮ್ಮ ಉಭಯ ರಾಷ್ಟ್ರಗಳ ಹಿತದೃಷ್ಟಿಯಿಂದ ಮುಂಬರುವ ದಿನಗಳಲ್ಲೂ ದ್ವಿಪಕ್ಷೀಯ ಮತ್ತು ಅಂತಾರಾಷ್ಟ್ರೀಯ ವಿಷಯಗಳ ಕುರಿತು ಭಾರತದೊಂದಿಗೆ ನಮ್ಮ ರಚನಾತ್ಮಕ ಸಹಕಾರವನ್ನು ಮುಂದುವರಿಸಲಿದ್ದೇವೆ ಎಂದು ಪುಟಿನ್ ಭರವಸೆ ನೀಡಿದ್ದಾರೆ.
ಇದನ್ನೂ ಓದಿ:
ಇತ್ತೀಚೆಗಷ್ಟೇ ಸೆ. 12-13 ರಂದು ವದೆಹಲಿಯ ಭಾರತ ಮಂಟಪದಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಉಭಯ ನಾಯಕರು ಭಾಗವಹಿಸಿದ್ದರು. ಈ ವೇಳೆ ಪಶ್ಚಿಮ ಏಷ್ಯಾ ಮತ್ತು ಕಪ್ಪು ಸಮುದ್ರದ ಸಂಘರ್ಷಗಳ ಕುರಿತು ಇಬ್ಬರೂ ನಾಯಕರು ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು. ಶೃಂಗಸಭೆಯ ಬಳಿಕ ಮೋದಿ ಮತ್ತು ಪುಟಿನ್ ಜತೆಯಾಗಿ ‘ಇನ್ನೋಪ್ರೊಮ್’ ಪ್ರದರ್ಶನಕ್ಕೂ ಭೇಟಿ ನೀಡಿದ್ದರು. ಇದಕ್ಕೂ ಮುನ್ನ, ಆಗಸ್ಟ್ 31 ರಂದು ಕಿರ್ಗಿಸ್ತಾನ್‌ನಲ್ಲಿ ನಡೆದ ಎಸ್‌ಸಿಒ ಶೃಂಗಸಭೆಯ ಸಂದರ್ಭದಲ್ಲೂ ಈ ಇಬ್ಬರು ಜಾಗತಿಕ ನಾಯಕರು ವಿಶ್ವ ಅಲೆಮಾರಿ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಜತೆಯಾಗಿ ಪಾಲ್ಗೊಂಡಿದ್ದರು.



