September 17, 2026
Thursday, September 17, 2026
spot_img

ನಮ್ಮ ರಾಜ್ಯದ ಪಾಲಿನ 15 ಟಿಎಂಸಿ ನೀರನ್ನ ನಿಯಮಿತ‌ ಹರಿಸುವಂತೆ ಮಹಾರಾಷ್ಟ್ರ ಸಿ.ಎಂ ಜತೆ ಚರ್ಚೆ: ಡಿ.ಕೆ.ಶಿವಕುಮಾರ್

ಹೊಸದಿಗಂತ ವರದಿ ಕಲಬುರಗಿ:

ಬಚಾವತ್ ಆಯೋಗದ ತೀರ್ಪಿನ ಪ್ರಕಾರ ಭೀಮಾ ಸಬ್ ಬೇಸಿನ್‌ನಲ್ಲಿ ರಾಜ್ಯಕ್ಕೆ ಹಂಚಿಕೆಯಾದ 15 ಟಿ.ಎಂ.ಸಿ. ನೀರು ಮಹಾರಾಷ್ಟ್ರದಿಂದ ನಿಯಮಿತವಾಗಿ ಹರಿಸದ ಕಾರಣ ಕಲಬುರಗಿ, ಯಾದಗಿರಿ, ರಾಯಚೂರು ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದು, ರಾಜ್ಯದ ಪಾಲಿನ 15 ಟಿ.ಎಂ.ಸಿ. ನೀರು ಸಕಾಲದಲ್ಲಿ ಬಿಡುಗಡೆ ಮಾಡುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಜತೆ ಚರ್ಚಿಸುವುದಾಗಿ ಮುಖ್ಯಮಂತ್ರಿ ಡಿ‌.ಕೆ.ಶಿವಕುಮಾರ್ ತಿಳಿಸಿದರು.

ನಗರದ ಐವಾನ್-ಎ-ಶಾಹಿ ಅತಿಥಿಗೃಹದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನ ಉದ್ದೇಶಿಸಿ ಮಾತನಾಡಿದ ಅವರು, ಭೀಮಾ ನದಿಗೆ ರಾಜ್ಯದ ಪಾಲಿನ ನೀರು ನಿಯಮಿತವಾಗಿ ಹಂಚಿಕೆಯಾಗುತ್ತಿಲ್ಲ ಎಂಬ ಮಾಹಿತಿ ಇದ್ದು, ಈಗಾಗಲೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಸಭೆ ನಡೆಸಿದ್ದಾರೆ. ಶಾಸಕ ಎಂ.ವೈ.ಪಾಟೀಲ ಅವರು ನನ್ನ ಗಮನಕ್ಕೆ ತಂದಿದ್ದಾರೆ. ಜಲಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಗಳಿಂದ ವರದಿ ಪಡೆದು ಮಹಾರಾಷ್ಟ್ರ ಸಿ‌ಎಂ ಅವರೊಂದಿಗೆ ಮಾತನಾಡುವೆ ಎಂದರು.

ಇದನ್ನೂ ಓದಿ:

ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಲಬುರಗಿ ಕೋಟೆ, ಶ್ರೀ ಶರಣಬಸವೇಶ್ವರ ದೇವಸ್ಥಾನ, ಬುದ್ದ‌ ವಿಹಾರ, ಸನ್ನತ್ತಿ, ದೇವಲ ಗಾಣಗಾಪೂರ, ಬೀದರ ಕೋಟೆ, ಬಸವಕಲ್ಯಾಣ, ಹಂಪಿ, ಕನಕಗಿರಿ ಹೀಗೆ ಅನೇಕ ಪ್ರಾಚೀನ, ಐತಿಹಾಸಿಕ ಸ್ಮಾರಕಗಳು ಹಾಗೂ ಪ್ರವಾಸಿಗರನ್ನು ಆಕರ್ಷಿಸುವ ಪ್ರವಾಸಿ ತಾಣಗಳಿದ್ದು, ಪ್ರದೇಶದ ಪ್ರವಾಸೋದ್ಯಮ ಉತ್ತೇಜನ ನೀಡಲು ಹೆಚ್ಚಿನ ಒತ್ತು ನೀಡಲಾಗುವುದು. ಕೆ.ಕೆ.ಆರ್.ಡಿ‌.ಬಿ‌ ಮಂಡಳಿ ಮೂಲಕ ಪ್ರವಾಸಿ ಕ್ಷೇತ್ರದಲ್ಲಿ ಮೂಲಸೌಕರ್ಯ ಕಲ್ಪಿಸಲಾಗುವುದು ಎಂದರು.

ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಸಂಸದ ರಾಧಾಕೃಷ್ಣ ದೊಡ್ಡಮನಿ, ಶಾಸಕರಾದ‌ ಎಂ.ವೈ.ಪಾಟೀಲ, ಅಲ್ಲಮಪ್ರಭು ಪಾಟೀಲ, ಜಗದೇವ ಗುತ್ತೇದಾರ, ತಿಪ್ಪಣ್ಣಪ್ಪ ಕಮಕನೂರ, ಡಿ.ಸಿ. ಇಕ್ರಂ ಶರೀಫ್ ಇದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !