ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶೀಯ ರಕ್ಷಣಾ ಉತ್ಪಾದನೆಗೆ ಮತ್ತೊಂದು ಮಹತ್ವದ ಹೆಜ್ಜೆಯಾಗಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಭಾರತೀಯ ವಾಯುಪಡೆ ಹಾಗೂ ಪವನ್ ಹನ್ಸ್ ಸಂಸ್ಥೆಗೆ ಹಲವು ಅತ್ಯಾಧುನಿಕ ವಿಮಾನ ಮತ್ತು ಹೆಲಿಕಾಪ್ಟರ್ಗಳನ್ನು ಹಸ್ತಾಂತರಿಸಿದೆ.
ಶುಕ್ರವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆಯಿತು.
HAL ಫೈನಲ್ ಆಪರೇಷನಲ್ ಕ್ಲಿಯರೆನ್ಸ್ (FOC) ಸಂರಚನೆಯ ಎರಡು LCA ತೇಜಸ್ ಟ್ವಿನ್-ಸೀಟರ್ ತರಬೇತಿ ವಿಮಾನಗಳನ್ನು ಭಾರತೀಯ ವಾಯುಪಡೆಗೆ ಹಸ್ತಾಂತರಿಸಿದೆ. ಇದರೊಂದಿಗೆ FOC ಒಪ್ಪಂದದಡಿ ಟ್ವಿನ್-ಸೀಟರ್ ತೇಜಸ್ಗಳ ವಿತರಣೆ ಪೂರ್ಣಗೊಂಡಿದೆ. ತರಬೇತಿಗಾಗಿ ವಿನ್ಯಾಸಗೊಂಡಿರುವ ಈ ವಿಮಾನ ಅಗತ್ಯವಿದ್ದಾಗ ಯುದ್ಧ ಕಾರ್ಯಾಚರಣೆಯಲ್ಲೂ ಬಳಸಬಹುದಾಗಿದೆ.
ತೇಜಸ್ ತರಬೇತಿ ವಿಮಾನದಲ್ಲಿ ಕ್ವಾಡ್ರುಪ್ಲೆಕ್ಸ್ ಫ್ಲೈ-ಬೈ-ವೈರ್ ವ್ಯವಸ್ಥೆ, ಡಿಜಿಟಲ್ ಅವಿಯಾನಿಕ್ಸ್, ಗ್ಲಾಸ್ ಕಾಕ್ಪಿಟ್, ಆಧುನಿಕ ನಿಯಂತ್ರಣ ತಂತ್ರಜ್ಞಾನ ಮತ್ತು ಸಂಯುಕ್ತ ವಸ್ತುಗಳಿಂದ ನಿರ್ಮಿಸಲಾದ ಏರ್ಫ್ರೇಮ್ ಸೇರಿದಂತೆ ಹಲವು ತಂತ್ರಜ್ಞಾನಗಳನ್ನು ಅಳವಡಿಸಲಾಗಿದೆ.
‘ಅಂಕುರ್’ ಹೆಸರಿನಲ್ಲಿ HTT-40 ಎಂಟ್ರಿ
ಭಾರತೀಯ ವಾಯುಪಡೆಯ ಮೂಲ ಪೈಲಟ್ ತರಬೇತಿಗೆ ಬಳಸುವ HTT-40 ವಿಮಾನದ ಮೊದಲ ಘಟಕವನ್ನೂ HAL ಹಸ್ತಾಂತರಿಸಿದೆ. ಈ ವಿಮಾನಕ್ಕೆ ಅಧಿಕೃತವಾಗಿ ‘ಅಂಕುರ್’ ಎಂಬ ಹೆಸರನ್ನು ಇಡಲಾಗಿದೆ. ಮೂಲಭೂತ ತರಬೇತಿ, ಏರೋಬ್ಯಾಟಿಕ್ಸ್, ಇನ್ಸ್ಟ್ರುಮೆಂಟ್ ಫ್ಲೈಯಿಂಗ್, ನ್ಯಾವಿಗೇಷನ್, ರಾತ್ರಿ ಹಾರಾಟ ಹಾಗೂ ಫಾರ್ಮೇಶನ್ ಫ್ಲೈಯಿಂಗ್ಗಾಗಿ ಇದನ್ನು ಬಳಸಬಹುದು.
1,100 SHP ಟರ್ಬೋಪ್ರಾಪ್ ಎಂಜಿನ್ ಹೊಂದಿರುವ ಅಂಕುರ್ ಗರಿಷ್ಠ 300 ನಾಟ್ ವೇಗದಲ್ಲಿ ಹಾರಬಲ್ಲದು. ಸುಮಾರು 1,000 ಕಿ.ಮೀ. ವ್ಯಾಪ್ತಿ ಹಾಗೂ ಮೂರು ಗಂಟೆಗಳವರೆಗೆ ಹಾರಾಟ ಸಾಮರ್ಥ್ಯ ಹೊಂದಿದೆ.
ಇದನ್ನೂ ಓದಿ:
ಪವನ್ ಹನ್ಸ್ಗೆ ನಾಲ್ಕು Dhruv-NG
ಇದೇ ಕಾರ್ಯಕ್ರಮದಲ್ಲಿ ನಾಲ್ಕು Dhruv Next Generation (Dhruv-NG) ಹೆಲಿಕಾಪ್ಟರ್ಗಳನ್ನು ಪವನ್ ಹನ್ಸ್ ಲಿಮಿಟೆಡ್ಗೆ ಹಸ್ತಾಂತರಿಸಲಾಯಿತು. 5.5 ಟನ್ ವರ್ಗದ ಈ ಲಘು, ಟ್ವಿನ್-ಎಂಜಿನ್ ಹೆಲಿಕಾಪ್ಟರ್ಗಳನ್ನು ನಾಗರಿಕ ವಿಮಾನಯಾನ ಕ್ಷೇತ್ರದ ವಿವಿಧ ಅಗತ್ಯಗಳಿಗೆ ಬಳಸುವಂತೆ ಅಭಿವೃದ್ಧಿಪಡಿಸಲಾಗಿದೆ. ಪ್ರಯಾಣಿಕರ ಸಾಗಣೆ, ಏರ್ ಆಂಬುಲೆನ್ಸ್, ವಿಪತ್ತು ನಿರ್ವಹಣೆ, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಹಾಗೂ ಆಫ್ಶೋರ್ ಕಾರ್ಯಗಳಿಗೆ ಇದನ್ನು ಬಳಸಬಹುದಾಗಿದೆ.
ಮುಂದಿನ ಗುರಿ Mk1A ಟ್ವಿನ್-ಸೀಟರ್
HAL ಮುಂದಿನ ಹಂತದಲ್ಲಿ LCA-Mk1A ಟ್ವಿನ್-ಸೀಟರ್ಗಳ ಅಭಿವೃದ್ಧಿ ಮತ್ತು ವಿತರಣೆಯತ್ತ ಗಮನ ಹರಿಸಿದೆ. AESA ರಡಾರ್, ಎಲೆಕ್ಟ್ರಾನಿಕ್ ವಾರ್ಫೇರ್ ವ್ಯವಸ್ಥೆ, ಸುಧಾರಿತ ಅವಿಯಾನಿಕ್ಸ್ ಹಾಗೂ ಹೆಚ್ಚುವರಿ ಶಸ್ತ್ರಾಸ್ತ್ರ ಸಾಮರ್ಥ್ಯಗಳಂತಹ ವೈಶಿಷ್ಟ್ಯಗಳನ್ನು ಈ ಆವೃತ್ತಿಯಲ್ಲಿ ಅಳವಡಿಸುವ ಉದ್ದೇಶವಿದೆ.
ತೇಜಸ್ ತರಬೇತಿ ವಿಮಾನ, ‘ಅಂಕುರ್’ HTT-40 ಮತ್ತು Dhruv-NG ಹಸ್ತಾಂತರದೊಂದಿಗೆ ದೇಶೀಯ ವಿಮಾನ ಮತ್ತು ಹೆಲಿಕಾಪ್ಟರ್ ಉತ್ಪಾದನಾ ಸಾಮರ್ಥ್ಯಕ್ಕೆ ಮತ್ತೊಂದು ಹಂತದ ಸೇರ್ಪಡೆಯಾಗಿದೆ.



