September 20, 2026
Sunday, September 20, 2026
spot_img

ಬರ ಘೋಷಣೆಗೆ ಅ.10ರ ವರೆಗೆ ಗಡುವು, ‘ಇಲ್ಲವಾದ್ರೆ ರಾಜೀನಾಮೆ ಕೊಡ್ತೇನೆ’: ಎಚ್. ಕೆ. ಪಾಟೀಲ್ ಎಚ್ಚರಿಕೆ

ಹೊಸದಿಗಂತ ವರದಿ ಗದಗ:

ಗದಗ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸದಿದ್ದರೆ ಅ. 10ರಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ರೈತರ ಪರವಾಗಿ ಹೋರಾಟ ನಡೆಸುವುದಾಗಿ ಹಿರಿಯ ಶಾಸಕ ಎಚ್. ಕೆ. ಪಾಟೀಲ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ತಾಲೂಕಿನ ಮುಳಗುಂದ ಪಟ್ಟಣದಲ್ಲಿ ರೈತ ಸಂಘ ಹಾಗೂ ವಿವಿಧ ಸಂಘಟನೆಗಳು ಗದಗ ತಾಲೂಕನ್ನು ಬರಪೀಡಿತವೆಂದು ಘೋಷಿಸದಿರುವುದನ್ನು ವಿರೋಧಿಸಿ ಕರೆ ನೀಡಿದ್ದ ಬಂದ್‌ಗೆ ಭೇಟಿ ನೀಡಿ ರೈತರನ್ನು ಉದ್ದೇಶಿಸಿ ಮಾತನಾಡಿದರು.

ಗದಗ ತಾಲೂಕು ಸೇರಿದಂತೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಈ ವರ್ಷ ತೀವ್ರ ಬರ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮುಖ್ಯಮಂತ್ರಿ ಅವರು ಸ್ವತಃ ಗದಗ ಜಿಲ್ಲೆಗೆ ಭೇಟಿ ನೀಡಿ ಕದಾಂಪೂರದಿಂದ ಕುರ್ತಕೋಟಿವರೆಗೆ ಬರ ಪರಿಸ್ಥಿತಿಯನ್ನು ಪರಿಶೀಲಿಸಿದ್ದರೂ, ಗದಗ ತಾಲೂಕನ್ನು ಬರಪೀಡಿತ ಪ್ರದೇಶಗಳ ಪಟ್ಟಿಯಿಂದ ಹೊರಗಿಟ್ಟಿರುವುದು ಅಚ್ಚರಿ ಹಾಗೂ ನೋವಿನ ಸಂಗತಿಯಾಗಿದೆ. ಜಿಲ್ಲೆಯಲ್ಲಿನ ಬರ ಪರಿಸ್ಥಿತಿಯ ವಾಸ್ತವ ಚಿತ್ರಣವನ್ನು ಸರ್ಕಾರದ ಗಮನಕ್ಕೆ ತರಲಾಗಿದೆ ಎಂದರು.

ಇದನ್ನೂ ಓದಿ:

ಅಧಿಕಾರಿಗಳು ನೀಡಿರುವ ಅವೈಜ್ಞಾನಿಕ ವರದಿಯ ಆಧಾರದ ಮೇಲೆ ತಾಲೂಕನ್ನು ಬರಪೀಡಿತ ಪಟ್ಟಿಯಿಂದ ಕೈಬಿಡಲಾಗಿದೆ. ಮುಖ್ಯಮಂತ್ರಿ ಅವರೇ ಪರಿಸ್ಥಿತಿಯನ್ನು ಪರಿಶೀಲಿಸಿದ ಬಳಿಕವೂ ವಾಸ್ತವ ಸ್ಥಿತಿಗೆ ವಿರುದ್ಧವಾದ ವರದಿಯನ್ನು ಪರಿಗಣಿಸಿರುವುದು ಸರಿಯಲ್ಲ. ರೈತರ ಜಮೀನುಗಳಿಗೆ ತೆರಳಿ ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

“ಬರುವ ವಿಧಾನಮಂಡಲ ಅಧಿವೇಶನದಲ್ಲಿ ತಾಲೂಕನ್ನು ಬರಪೀಡಿತವೆಂದು ಘೋಷಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುತ್ತೇನೆ. ಅದಕ್ಕೂ ಸರ್ಕಾರ ಸ್ಪಂದಿಸದಿದ್ದರೆ ಅ.10ರಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ರೈತರೊಂದಿಗೆ ನಿಲ್ಲುತ್ತೇನೆ” ಎಂದು ಅವರು ಹೇಳಿದರು.

ಸರ್ಕಾರ ಹಾಗೂ ಆಡಳಿತ ವ್ಯವಸ್ಥೆ ರೈತರ ಸಂಕಷ್ಟದ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು. ಮಳೆ ಕೊರತೆಯಿಂದ ಬೆಳೆಗಳು ಒಣಗಿದ್ದು, ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ರೈತರ ನೆರವಿಗೆ ಧಾವಿಸಬೇಕು. ಇಲ್ಲದಿದ್ದರೆ ರೈತರೊಂದಿಗೆ ಸೇರಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ತಾಲೂಕಿನ ಬರ ಪರಿಸ್ಥಿತಿಯನ್ನು ಪರಿಗಣಿಸಿ ಕೂಡಲೇ ಬರಪೀಡಿತ ತಾಲೂಕು ಎಂದು ಘೋಷಿಸಿ ರೈತರಿಗೆ ಅಗತ್ಯ ಪರಿಹಾರ ಹಾಗೂ ನೆರವು ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !