September 20, 2026
Sunday, September 20, 2026
spot_img

ಆದಿತ್ಯ ಠಾಕ್ರೆ ವಿರುದ್ಧ ತಿರುಗಿಬಿದ್ದ ದಿಶಾ ಸಾಲ್ಯಾನ್ ತಂದೆ: ಲೀಗಲ್ ನೋಟಿಸ್ ಜಾರಿ, ಕ್ಷಮೆಯಾಚನೆಗೆ ಆಗ್ರಹ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

 ನಟ ಸುಶಾಂತ್ ಸಿಂಗ್ ರಾಜ್‌ಪುತ್ ಅವರ ಮ್ಯಾನೇಜರ್ ಆಗಿದ್ದ ದಿಶಾ ಸಾಲ್ಯಾನ್ ಅವರ ನಿಗೂಢ ಸಾವಿನ ಪ್ರಕರಣ ಈಗ ಮಹತ್ತರ ತಿರುವು ಪಡೆದುಕೊಂಡಿದೆ. ದಿಶಾ ತಂದೆ ಸತೀಶ್ ಸಾಲ್ಯಾನ್ ಮತ್ತು ಅವರ ವಕೀಲ ನಿಲೇಶ್ ಓಜಾ ಅವರು ಶಿವಸೇನಾ ನಾಯಕ ಆದಿತ್ಯ ಠಾಕ್ರೆ ವಿರುದ್ಧ ಸಿಡಿದೆದ್ದಿದ್ದಾರೆ. ತಮಗೆ ಬೆದರಿಕೆ ಹಾಕಿದ ಆರೋಪ ಹಾಗೂ ಮಾನಹಾನಿ ಮಾಡಿರುವುದಕ್ಕೆ ಪ್ರತಿಯಾಗಿ ಆದಿತ್ಯ ಠಾಕ್ರೆಗೆ ಬಹಿರಂಗವಾಗಿ ಕ್ಷಮೆ ಕೇಳುವಂತೆ ಮತ್ತು 500 ಕೋಟಿ ಪರಿಹಾರ ನೀಡುವಂತೆ ಆಗ್ರಹಿಸಿ ಅವರ ಮನೆ ಬಾಗಿಲಿಗೇ ತೆರಳಿ ಲೀಗಲ್ ನೋಟಿಸ್ ಜಾರಿ ಮಾಡಿದ್ದಾರೆ.

ನ್ಯಾಯಾಲಯದಲ್ಲಿ ವಕಾಲತ್ತು ನಡೆಸದಂತೆ ಬೆದರಿಕೆ?

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ವಕೀಲ ನಿಲೇಶ್ ಓಜಾ, ನಮ್ಮ ಜೂನಿಯರ್ ವಕೀಲರೊಬ್ಬರು ಈಗಷ್ಟೇ ಆದಿತ್ಯ ಠಾಕ್ರೆ ನಿವಾಸಕ್ಕೆ ಹೋಗಿ ನೋಟಿಸ್ ನೀಡಿದ್ದಾರೆ. ನಾವು ವಕೀಲ ವೃತ್ತಿ ಮಾಡದಂತೆ ನಮಗೆ ಬೆದರಿಕೆ ಹಾಕಲಾಗಿತ್ತು. ಸಂವಿಧಾನದ ಮುಂದೆ ಎಲ್ಲರೂ ಸಮಾನರು ಎಂಬುದನ್ನು ನೆನಪಿಸಲು ಮತ್ತು ಸಾಮಾನ್ಯ ಜನರ ಶಕ್ತಿ ಏನು ಎಂಬುದನ್ನು ತೋರಿಸಲು ನಾವೇ ಖುದ್ದಾಗಿ ಅವರ ಮನೆಗೆ ಹೋಗಿದ್ದೇವೆ. ಅವರು ಎಷ್ಟು ಜನ ಗೂಂಡಾಗಳನ್ನಾದರೂ ತರಲಿ, ನಾವು ಹೆದರಲ್ಲ ಎಂದು ಗುಡುಗಿದ್ದಾರೆ.

ಆದಿತ್ಯ ಠಾಕ್ರೆ ಕೊಟ್ಟ ಉತ್ತರವೇನು?

ಈ ಎಲ್ಲಾ ಆರೋಪಗಳನ್ನು ತಳ್ಳಿಹಾಕಿರುವ ಆದಿತ್ಯ ಠಾಕ್ರೆ ಅವರು ಎಕ್ಸ್ ಖಾತೆಯಲ್ಲಿ ಸುದೀರ್ಘ ಪೋಸ್ಟ್ ಹಾಕಿದ್ದಾರೆ. ಸತ್ಯ ಏನೆಂಬುದನ್ನು ನಾವೀಗ ಮಾತನಾಡೋಣ. ನಾನು ನನ್ನ ಜೀವನದಲ್ಲಿ ದಿಶಾ ಸಾಲ್ಯಾನ್ ಅವರನ್ನು ಭೇಟಿಯೇ ಮಾಡಿಲ್ಲ, ಅವರ್ಯಾರು ಅಂತಲೂ ನನಗೆ ಗೊತ್ತಿಲ್ಲ. ಕಳೆದ 6 ವರ್ಷಗಳಿಂದ ರಾಜಕೀಯ ಹಾಗೂ ವೈಯಕ್ತಿಕ ದ್ವೇಷ ಸಾಧನೆಗಾಗಿ ಯಾವುದೇ ಸಾಕ್ಷ್ಯಗಳಿಲ್ಲದೆ ನನ್ನ ತೇಜೋವಧೆ ಮಾಡಲು ಈ ಪ್ರಯತ್ನ ನಡೆಸಲಾಗುತ್ತಿದೆ. ಸದ್ಯ ನಡೆಯುತ್ತಿರುವ ಸಿಬಿಐ ತನಿಖೆಯು ಯಾವುದೇ ರಾಜಕೀಯ ಹಸ್ತಕ್ಷೇಪವಿಲ್ಲದೆ ಮುಂದುವರಿಯಲಿ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ:

ಹಿನ್ನೆಲೆ ಏನು?

2020ರ ಜೂನ್ 8ರಂದು ಮುಂಬೈನ ಬಹುಮಹಡಿ ಕಟ್ಟಡದಿಂದ ಬಿದ್ದು ದಿಶಾ ಸಾಲ್ಯಾನ್ ನಿಗೂಢವಾಗಿ ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ನಟ ಸುಶಾಂತ್ ಸಿಂಗ್ ಕೂಡ ಸಾವನ್ನಪ್ಪಿದ್ದರು. ಮೊದಲಿಗೆ ಇದನ್ನು ಆಕಸ್ಮಿಕ ಸಾವು ಎಂದು ಪೊಲೀಸರು ದಾಖಲಿಸಿಕೊಂಡಿದ್ದರೂ, ಮುಂಬೈ ಹೈಕೋರ್ಟ್ ಆದೇಶದ ಮೇರೆಗೆ ಸದ್ಯ ಈ ಪ್ರಕರಣದ ಮರುತನಿಖೆಯನ್ನು ಸಿಬಿಐ ತೀವ್ರಗೊಳಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !