September 20, 2026
Sunday, September 20, 2026
spot_img

ಕಸ್ತೂರಿರಂಗನ್ ವರದಿ: ‘ಜನರ ಬದುಕಿಗೆ ಧಕ್ಕೆ ತರಲು ಬಿಡಲ್ಲ’ ಎಂದ ಡಿ.ಕೆ. ಶಿವಕುಮಾರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಸಂಬಂಧಿಸಿದ ಕಸ್ತೂರಿರಂಗನ್ ವರದಿ ಜಾರಿಗೆ ಕರ್ನಾಟಕ ಸರ್ಕಾರದ ವಿರೋಧವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ವರದಿ ಜಾರಿಯಾದರೆ ಪಶ್ಚಿಮ ಘಟ್ಟ ಪ್ರದೇಶದ ರೈತರು, ಕಾಫಿ ಬೆಳೆಗಾರರು ಹಾಗೂ ಅರಣ್ಯ ಅಂಚಿನಲ್ಲಿ ವಾಸಿಸುವ ಜನರ ಬದುಕಿನ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ. ಸೆ.21ರಿಂದ ಆರಂಭವಾಗಲಿರುವ ವಿಶೇಷ ವಿಧಾನಮಂಡಲ ಅಧಿವೇಶನದ ಹಿನ್ನೆಲೆಯಲ್ಲಿ ಸಿಎಂ ಹೇಳಿಕೆ ಮಹತ್ವ ಪಡೆದಿದೆ.

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಡಿಕೆಶಿ, ಕಸ್ತೂರಿರಂಗನ್ ವರದಿಗೆ ಈ ಹಿಂದೆ ರಾಜ್ಯ ಸರ್ಕಾರ ವಿರೋಧ ವ್ಯಕ್ತಪಡಿಸಿತ್ತು. ಆದರೆ ಕೇಂದ್ರ ಸರ್ಕಾರ ಪ್ರಸ್ತಾವನೆಯನ್ನು ಮರುಪರಿಶೀಲನೆಗೆ ಕಳುಹಿಸಿ, ಪರಿಸರ ಸೂಕ್ಷ್ಮ ಪ್ರದೇಶಗಳ ಅಧಿಸೂಚನೆ ಕುರಿತು ಸೆ.27ರೊಳಗೆ ರಾಜ್ಯದ ನಿಲುವು ತಿಳಿಸುವಂತೆ ಸೂಚಿಸಿದೆ ಎಂದು ಹೇಳಿದರು.

ರೈತರ ಅಭಿಪ್ರಾಯ ಸಂಗ್ರಹಿಸಿರುವೆ

ವರದಿಯ ಪರಿಣಾಮವನ್ನು ಅರ್ಥಮಾಡಿಕೊಳ್ಳಲು ಚಿಕ್ಕಮಗಳೂರು, ಕಾರವಾರ, ಕೊಡಗು, ಮೈಸೂರು ಹಾಗೂ ಶಿವಮೊಗ್ಗ ಸೇರಿದಂತೆ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳೀಯರು ಮತ್ತು ರೈತರ ಅಭಿಪ್ರಾಯಗಳನ್ನು ಸಂಗ್ರಹಿಸಿರುವುದಾಗಿ ಸಿಎಂ ತಿಳಿಸಿದರು. ಜನರ ಜೀವನ, ಕೃಷಿ ಹಾಗೂ ಅರಣ್ಯ ಪ್ರದೇಶದ ಸುತ್ತಲಿನ ಸಮಸ್ಯೆಗಳನ್ನು ವಿಶೇಷ ಅಧಿವೇಶನದಲ್ಲಿ ಚರ್ಚಿಸಲಾಗುವುದು ಎಂದರು.

ಇದನ್ನೂ ಓದಿ:

ಕಸ್ತೂರಿರಂಗನ್ ಸಮಿತಿ ಪಶ್ಚಿಮ ಘಟ್ಟಗಳ ಸುಮಾರು 37% ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸುವಂತೆ ಶಿಫಾರಸು ಮಾಡಿತ್ತು. ಗಣಿಗಾರಿಕೆ, ಕಲ್ಲುಗಣಿಗಾರಿಕೆ ಸೇರಿದಂತೆ ಕೆಲವು ಚಟುವಟಿಕೆಗಳಿಗೆ ನಿರ್ಬಂಧ ವಿಧಿಸುವ ಪ್ರಸ್ತಾವನೆಯೂ ವರದಿಯಲ್ಲಿದೆ.

ಕಸ್ತೂರಿರಂಗನ್ ವರದಿ ಜತೆಗೆ ಬರ ಪರಿಸ್ಥಿತಿ ಚರ್ಚೆ

ಇದೇ ವೇಳೆ, ಮೂರು ದಿನಗಳ ವಿಶೇಷ ಅಧಿವೇಶನದಲ್ಲಿ ಕಸ್ತೂರಿರಂಗನ್ ವರದಿ ಜತೆಗೆ ಬರ ಪರಿಸ್ಥಿತಿ ಹಾಗೂ ರೈತರ ಸಮಸ್ಯೆಗಳ ಬಗ್ಗೆಯೂ ಚರ್ಚೆ ನಡೆಸಲು ಸರ್ಕಾರ ಉದ್ದೇಶಿಸಿದೆ ಎಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಕಸ್ತೂರಿರಂಗನ್ ವರದಿಯ ಕುರಿತು ರಾಜ್ಯದ ನಿಲುವು, ಪಶ್ಚಿಮ ಘಟ್ಟದ ಜನರ ಜೀವನೋಪಾಯ ಹಾಗೂ ಪರಿಸರ ಸಂರಕ್ಷಣೆ ನಡುವಿನ ಸಮತೋಲನದ ಪ್ರಶ್ನೆ ವಿಶೇಷ ಅಧಿವೇಶನದಲ್ಲಿ ಪ್ರಮುಖ ಚರ್ಚೆಯಾಗುವ ಸಾಧ್ಯತೆಯಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !