September 22, 2026
Tuesday, September 22, 2026
spot_img

ಮಲೆನಾಡಿನ ಜನರ ಬದುಕಿನ ಪ್ರಶ್ನೆ: ಕಸ್ತೂರಿರಂಗನ್ ವರದಿ ಕುರಿತು ವಿಧಾನಸಭೆಯಲ್ಲಿ ಪಕ್ಷಾತೀತ ಚರ್ಚೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಸ್ತೂರಿರಂಗನ್ ವರದಿ ಜಾರಿ ವಿಚಾರ ವಿಧಾನಸಭೆಯ ವಿಶೇಷ ಅಧಿವೇಶನದ ಮೊದಲ ದಿನವೇ ಪ್ರಮುಖ ಚರ್ಚೆಗೆ ಕಾರಣವಾಯಿತು. ಮಲೆನಾಡು ಹಾಗೂ ಪಶ್ಚಿಮ ಘಟ್ಟ ವ್ಯಾಪ್ತಿಯ ರೈತರು, ಜನಸಾಮಾನ್ಯರು ಮತ್ತು ಪರಿಸರದ ಮೇಲೆ ವರದಿಯಿಂದ ಉಂಟಾಗಬಹುದಾದ ಪರಿಣಾಮಗಳ ಕುರಿತು ಆಡಳಿತ ಹಾಗೂ ಪ್ರತಿಪಕ್ಷದ ಸದಸ್ಯರು ಸುದೀರ್ಘ ಚರ್ಚೆ ನಡೆಸಿದರು.

ಕಸ್ತೂರಿರಂಗನ್ ವರದಿ ವಿಚಾರದಲ್ಲಿ ರಾಜಕೀಯ ಬೇಡ

ಚರ್ಚೆ ಆರಂಭಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕಸ್ತೂರಿರಂಗನ್ ವರದಿ ವಿಚಾರದಲ್ಲಿ ರಾಜಕೀಯ ಮಾಡುವ ಅಗತ್ಯವಿಲ್ಲ ಎಂದು ಹೇಳಿದರು. ಮಲೆನಾಡು ಹಾಗೂ ಪಶ್ಚಿಮ ಘಟ್ಟ ಪ್ರದೇಶದ ರೈತರು ಮತ್ತು ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದು ಸರ್ಕಾರದ ಆದ್ಯತೆ ಎಂದರು. ಪ್ರತಿಪಕ್ಷಗಳು ಸೂಕ್ತ ಸಲಹೆಗಳನ್ನು ನೀಡಿದರೆ ಅವುಗಳನ್ನು ಪರಿಗಣಿಸಲಾಗುವುದು. ರಾಜ್ಯದ ಹಿತದೃಷ್ಟಿಯಿಂದ ಎಲ್ಲರೂ ಒಟ್ಟಾಗಿ ಸರ್ವಪಕ್ಷ ನಿಯೋಗವನ್ನು ಕೇಂದ್ರಕ್ಕೆ ಕರೆದೊಯ್ಯೋಣ ಎಂದು ಪ್ರಸ್ತಾಪಿಸಿದರು.

ಇದನ್ನೂ ಓದಿ:

ಮೂರು ಪ್ರಮುಖ ಸಲಹೆ ನೀಡಿದ ಆರ್. ಅಶೋಕ್

ಚರ್ಚೆಯಲ್ಲಿ ಪಾಲ್ಗೊಂಡ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್, ಸರ್ಕಾರಕ್ಕೆ ಮೂರು ಪ್ರಮುಖ ಸಲಹೆಗಳನ್ನು ನೀಡಿದರು.

  • ಕೇರಳ ಮಾದರಿಯಲ್ಲಿ ರಾಜ್ಯದಲ್ಲೂ ಭೌತಿಕ ಸಮೀಕ್ಷೆ ನಡೆಸಿ, ಸ್ಥಳೀಯ ಪರಿಸ್ಥಿತಿಗೆ ಅನುಗುಣವಾದ ನೈಜ ವರದಿಯನ್ನು ಸಿದ್ಧಪಡಿಸಿ.
  • ಕಸ್ತೂರಿರಂಗನ್ ವರದಿ ಜಾರಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆಸಲು ತಜ್ಞ ವಕೀಲರ ತಂಡ ರಚಿಸಬೇಕು.
  • ಕೇಂದ್ರದ ಏಳನೇ ಕರಡು ಅಧಿಸೂಚನೆಯನ್ನು ತಿರಸ್ಕರಿಸುವಂತೆ ಒತ್ತಾಯಿಸಲು ಸರ್ವಪಕ್ಷ ನಿಯೋಗವನ್ನು ದೆಹಲಿಗೆ ಕರೆದೊಯ್ಯಲು ಪ್ರತಿಪಕ್ಷ ಸಿದ್ಧವಿದೆ ಎಂದರು.

ಕಸ್ತೂರಿರಂಗನ್ ವರದಿ ಅನ್ವಯ ರಾಜ್ಯದ ಹಲವು ಜಿಲ್ಲೆಗಳ ಗ್ರಾಮಗಳು ಹಾಗೂ ದೊಡ್ಡ ಪ್ರಮಾಣದ ಭೂಪ್ರದೇಶ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಗೆ ಬರಲಿದೆ. ಇದರಿಂದ ಕೃಷಿ, ರಸ್ತೆ, ವಿದ್ಯುತ್ ಸೇರಿದಂತೆ ಮೂಲಸೌಕರ್ಯ ಕಾಮಗಾರಿಗಳಿಗೆ ನಿರ್ಬಂಧ ಉಂಟಾಗುವ ಸಾಧ್ಯತೆ ಕುರಿತು ಸದಸ್ಯರು ಆತಂಕ ವ್ಯಕ್ತಪಡಿಸಿದರು.

ಡಿಕೆಶಿ- ವಿಜಯೇಂದ್ರ ನಡುವೆ ಮಾತಿನ ಜಟಾಪಟಿ

ಇದೇ ವೇಳೆ ವರದಿ ವಿಚಾರದಲ್ಲಿ ಸರ್ಕಾರ ರಾಜಕೀಯ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ವಿಜಯೇಂದ್ರ ನಡುವೆ ಮಾತಿನ ಚಕಮಕಿ ನಡೆಯಿತು.

ಕೇಂದ್ರದ ಕರಡು ಅಧಿಸೂಚನೆ ಕುರಿತು ರಾಜ್ಯ ತನ್ನ ಆಕ್ಷೇಪಣೆಗಳನ್ನು ಸೆಪ್ಟೆಂಬರ್ 27ರೊಳಗೆ ಸಲ್ಲಿಸಬೇಕಿರುವ ಹಿನ್ನೆಲೆಯಲ್ಲಿ ಅಧಿವೇಶನದ ಚರ್ಚೆ ಮಹತ್ವ ಪಡೆದಿದೆ. ಮುಂದಿನ ದಿನಗಳಲ್ಲೂ ಕಸ್ತೂರಿರಂಗನ್ ವರದಿ ಕುರಿತು ಚರ್ಚೆ ಮುಂದುವರಿಯಲಿದ್ದು, ಮಲೆನಾಡು ಹಾಗೂ ಪಶ್ಚಿಮ ಘಟ್ಟದ ಜನರ ಹಿತವನ್ನು ಗಮನದಲ್ಲಿಟ್ಟುಕೊಂಡು ರಾಜ್ಯದ ಮುಂದಿನ ನಿಲುವು ರೂಪುಗೊಳ್ಳುವ ನಿರೀಕ್ಷೆಯಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !