ಹೊಸದಿಗಂತ ಡಿಜಿಟಲ್ ಡೆಸ್ಕ್:
‘ವಂದೇ ಮಾತರಂ’ನ ಎಲ್ಲಾ ಆರು ಚರಣಗಳನ್ನು ಹಾಡುವುದನ್ನು ಕಡ್ಡಾಯಗೊಳಿಸಿರುವ 2026ರ ಕಾನೂನು ತಿದ್ದುಪಡಿ ಪ್ರಶ್ನಿಸಿ ಸಂಗೀತ ಗಾಯಕ ಟಿ.ಎಂ. ಕೃಷ್ಣ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳಿದೆ. ಎರಡು ವಾರಗಳಲ್ಲಿ ಉತ್ತರ ಸಲ್ಲಿಸುವಂತೆ ಕೇಂದ್ರಕ್ಕೆ ಸೂಚಿಸಲಾಗಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠ ಅರ್ಜಿಯ ವಿಚಾರಣೆ ನಡೆಸಿತು. ಅಧಿಕೃತ ಕಾರ್ಯಕ್ರಮಗಳಲ್ಲಿ ಆರು ಚರಣಗಳನ್ನು ಹಾಡುವುದನ್ನು ಕಡ್ಡಾಯಗೊಳಿಸುವುದು ಮತ್ತು ಅದಕ್ಕೆ ಅಡ್ಡಿಪಡಿಸಿದರೆ ದಂಡಾತ್ಮಕ ಕ್ರಮ ಕೈಗೊಳ್ಳುವ ಅವಕಾಶವನ್ನು ಕೃಷ್ಣ ಪ್ರಶ್ನಿಸಿದ್ದಾರೆ.
ಅರ್ಜಿದಾರರ ಪರ ಹಿರಿಯ ವಕೀಲ ಎಸ್. ಮುರಳೀಧರ್, ವಂದೇ ಮಾತರಂನ ಕೊನೆಯ ನಾಲ್ಕು ಚರಣಗಳಲ್ಲಿ ಹಿಂದೂ ದೇವತೆಗಳ ಉಲ್ಲೇಖಗಳಿವೆ. ಹೀಗಾಗಿ ಧಾರ್ಮಿಕ ಭಾವನೆಗಳಿಗೆ ಸಂಬಂಧಿಸಿದ ಸಾಲುಗಳನ್ನು ಹಾಡುವಂತೆ ಬಲವಂತಪಡಿಸುವುದು ಸಂವಿಧಾನಾತ್ಮಕ ಹಕ್ಕುಗಳಿಗೆ ವಿರುದ್ಧವಾಗಬಹುದು ಎಂದು ವಾದಿಸಿದರು. ಕಾಯ್ದೆಯಲ್ಲಿ ‘ರಾಷ್ಟ್ರೀಯ ಗೀತೆ’ಯ ವ್ಯಾಖ್ಯಾನವೂ ಸ್ಪಷ್ಟವಾಗಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ:
ವಿಚಾರಣೆ ವೇಳೆ 1986ರ ಬಿಜೋಯ್ ಎಮ್ಯಾನುಯೆಲ್ ಪ್ರಕರಣದ ತೀರ್ಪನ್ನು ಸುಪ್ರೀಂ ಕೋರ್ಟ್ ಉಲ್ಲೇಖಿಸಿತು. ಧಾರ್ಮಿಕ ನಂಬಿಕೆಯ ಕಾರಣದಿಂದ ರಾಷ್ಟ್ರಗೀತೆ ಹಾಡದಿದ್ದರೂ ಗೌರವದಿಂದ ನಿಂತಿರುವ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವಂತಿಲ್ಲ ಎಂಬ ತತ್ವವನ್ನು ನ್ಯಾಯಾಲಯ ಗಮನಿಸಿದೆ.
ಕೇಂದ್ರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅರ್ಜಿಗೆ ವಿರೋಧ ವ್ಯಕ್ತಪಡಿಸಿದರು. ಪ್ರಕರಣದ ಮುಂದಿನ ವಿಚಾರಣೆಯಲ್ಲಿ ಕೇಂದ್ರದ ಉತ್ತರ ಪ್ರಮುಖವಾಗಲಿದ್ದು, ಬಳಿಕ ನ್ಯಾಯಾಲಯದ ನಿಲುವು ಸ್ಪಷ್ಟವಾಗಲಿದೆ.



