September 23, 2026
Wednesday, September 23, 2026
spot_img

ಮೀನುಗಾರ ಮಹಿಳೆ ಮೇಲೆ ದೌರ್ಜನ್ಯ ಆರೋಪ: ಅಧಿಕಾರಿ ಅಮಾನತ್ತಿಗೆ ಸಮುದಾಯದ ಆಗ್ರಹ

ಹೊಸದಿಗಂತ ವರದಿ ಅಂಕೋಲಾ:

ಮೀನು ಮಾರಾಟಕ್ಕೆಂದು ಯಲ್ಲಾಪುರ ತಾಲೂಕಿನ ಮಂಚಿಕೇರಿ ರಸ್ತೆ ಬದಿಯಲ್ಲಿ ಕುಳಿತಿದ್ದ ಅಂಕೋಲಾ ತಾಲೂಕಿನ ಬೆಲೇಕೇರಿ ಮೂಲದ ಮೀನುಗಾರ ಮಹಿಳೆ ಮೇಲೆ ಸರ್ಕಾರಿ ಅಧಿಕಾರಿಯೊಬ್ಬರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಮೀನುಗಾರ ಸಮುದಾಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಆರೋಪಿತ ಅಧಿಕಾರಿಯನ್ನು ಅಮಾನತುಗೊಳಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮೀನುಗಾರ ಸಂಘಟನೆಗಳು ಆಗ್ರಹಿಸಿವೆ.

ಮೀನುಗಾರ ಸಮುದಾಯ ಬಿಸಿಲು,ಮಳೆ,ಗಾಳಿಯಲ್ಲಿ ತಮ್ಮ ಜೀವದ ಹಂಗು ತೊರೆದು ಬೆವರು ಸುರಿಸಿ ಸ್ವಾಭಿಮಾನದ ಬದುಕು ನಡೆಸುತ್ತಿರುವ ಮೀನುಗಾರ ಮಹಿಳೆಯ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ನಡೆಸಿರುವುದು ಮೀನುಗಾರ ಸಮುದಾಯದ ಸ್ವಾಭಿಮಾನಕ್ಕೆ ಮಾಡಿರುವ ಅವಮಾನವಾಗಿದೆ ಎಂದು ಮೀನುಗಾರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:

ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ, ಮೀನುಗಾರ ಸಮುದಾಯದ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ಕೇಣಿಯ ಮೀನುಗಾರ ಪ್ರಮುಖ ಬಂದರು ವಿರೋಧಿ ಹೋರಾಟ ಸಮಿತಿಯ ಸಂಜೀವ ಬಲೆಗಾರ, ಉತ್ತರ ಕನ್ನಡ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಮಾಜಿ ನಿರ್ದೇಶಕ ರಾಜು ಹರಿಕಂತ್ರ ಘಟನೆ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದು ಹೊಟ್ಟೆಪಾಡಿಗೆ ಮೀನು ಮಾರಾಟ ಮಾಡುವ ಮಹಿಳೆಯ ಬುಟ್ಟಿಯಿಂದ ಮೀನು ಚೆಲ್ಲಿ ಆಕೆಯ ಮೇಲೆ ಹಲ್ಲೆ ನಡೆಸಿರುವ ಅಧಿಕಾರಿಯನ್ನು ಬಂಧಿಸಿ ಅಮಾನತ್ತಿಗೆ ಕ್ರಮ ಕೈಗೊಳ್ಳದಿದ್ದರೆ ಉತ್ತರ ಕನ್ನಡ ಜಿಲ್ಲಾ ಬಂದ್ ಸೇರಿದಂತೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಯಲ್ಲಾಪುರ ತಾಲೂಕಿನ ಮಂಚಿಕೇರಿಯ ರಸ್ತೆ ಬದಿ ಮೀನು ಮಾರಾಟ ಮಾಡುತ್ತಿದ್ದ ಅಂಕೋಲಾ ತಾಲೂಕಿನ ಬೆಲೇಕೇರಿಯ ಸರಸ್ವತಿ ಎನ್ನುವ ಮೀನುಗಾರ ಮಹಿಳೆಯ ಬುಟ್ಟಿಯಿಂದ ಮೀನು ಚೆಲ್ಲಿ ಆಕೆಯ ಮೇಲೆ ಹಲ್ಲೆ ನಡೆಸಿದ್ದು, ಅದನ್ನು ತಡೆಯಲು ಬಂದ ತರಕಾರಿ ಮಾರಾಟ ಮಾಡುವ ಪರಿಶಿಷ್ಟ ಸಮುದಾಯದ ಮಹಿಳೆಯ ಮೇಲೆ ಸಹ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಕುರಿತಂತೆ ಬೈಂದೂರಿನ ಪುರಸಭೆಯ ಅಧಿಕಾರಿ ಅಜಯ ಭಂಡಾರಕರ್ ಅವರ ಮೇಲೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !