ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನ ಸರ್ಕಾರಿ ವಸತಿನಿಲಯಗಳ ಊಟದ ಮೆನ್ಯುವಿನಲ್ಲಿ ಚಿಕನ್, ಮಟನ್ ಮಾತ್ರ ನೀಡುತ್ತಾರೆ. ಇದರ ಜತೆಗೆ ಗೋಮಾಂಸವನ್ನೂ ನೀಡಿ ಎಂದು ವಿದ್ಯಾರ್ಥಿಗಳು ಸಚಿವರಲ್ಲಿ ಬೇಡಿಕೆ ಇಟ್ಟಿದ್ದಾರೆ. ಈ ವಿಚಾರ ಸದ್ಯ ಚರ್ಚೆಗೆ ಕಾರಣವಾಗಿದೆ.
ನಿತ್ಯ ವೆಜ್ ಊಟ ಇರುತ್ತದೆ. ವಾರಕ್ಕೆ ಒಮ್ಮೆ ಅಥವಾ ಎರಡು ಬಾರಿ ಚಿಕನ್ ಇಲ್ಲವೋ ಮಟನ್ ನೀಡಲಾಗುತ್ತದೆ. ಆದರೆ ನಮಗೆ ಬೀಫ್ ಬೇಕು ಎಂದು ವಿದ್ಯಾರ್ಥಿಗಳು ಸಾಮಾಜಿಕ ನ್ಯಾಯ ಸಚಿವ ವನ್ನಿ ಅರಸು ಅವರಲ್ಲಿ ಮನವಿ ಮಾಡಿದ್ದಾರೆ. ಚೆನ್ನೈನ ಸೈದಾಪೇಟೆಯಲ್ಲಿರುವ ಎಂಸಿ ರಾಜಾ ಹಾಸ್ಟೆಲ್ಗೆ ಭೇಟಿ ನೀಡಿದ್ದರು. ಈ ವೇಳೆ ಹಾಸ್ಟೆಲ್ನಲ್ಲಿ ಏನೆಲ್ಲಾ ಸಮಸ್ಯೆಗಳಾಗುತ್ತಿದೆ ಎಂದು ಪ್ರಶ್ನೆ ಮಾಡಿದ್ದರು. ಅದಕ್ಕೆ ವಿದ್ಯಾರ್ಥಿಗಳು ಉತ್ತರಿಸಿ ನಮಗೆ ಮಾಂಸಾಹಾರಿ ಮೆನ್ಯುವಿನಲ್ಲಿ ಗೋಮಾಂಸ ಸೇರ್ಪಡೆಯಾಗಬೇಕು ಎಂದು ವಿನಂತಿಸಿದ್ದಾರೆ.
ಪ್ರತೀ ಸೋಮವಾರ ಇಲ್ಲಿ ಬಿರಿಯಾನಿ ನೀಡಲಾಗುತ್ತದೆ. ಇನ್ನು ಮಟನ್ ದುಬಾರಿಯಾದ ಕಾರಣ ಇದು ಅಪರೂಪ. ಇದರ ಜತೆ ಕೆಲವರು ಮಟನ್ ಸೇವನೆ ಮಾಡುವುದಿಲ್ಲ. ಈ ಎಲ್ಲ ಕಾರಣಗಳನ್ನು ಪರಿಗಣಿಸಿ ನಮಗೆ ಗೋಮಾಂಸ ನೀಡಬೇಕು ಎಂದು ಮನವಿ ಮಾಡಿದ್ದಾರೆ. ವಿದ್ಯಾರ್ಥಿಗಳು ಬೇಡಿಕೆ ಇಡುವುದು ಸಹಜ. ಅದು ಸರಿಯೋ ಇಲ್ಲವೋ ನಾವು ಪರಿಶೀಲನೆ ಮಾಡುತ್ತೇವೆ. ಸರ್ಕಾರದ ಅಧಿಕಾರಿಗಳ ಜತೆ ಮಾತುಕತೆ ಆಗಬೇಕು. ವಿದ್ಯಾರ್ಥಿಗಳ ಮನಸ್ಸಿಗೆ ನೋವು ಮಾಡುವುದಿಲ್ಲ ಎಂದು ವನ್ನಿ ಅರಸು ಹೇಳಿದ್ದಾರೆ.



