September 23, 2026
Wednesday, September 23, 2026
spot_img

ಐಐಟಿ ಬಾಂಬೆ ಸೂಸೈಡ್‌ ಕೇಸ್‌ | ಇಂದಿನಿಂದಲೇ ಉಪವಾಸ ಸತ್ಯಾಗ್ರಹ ಎಂದ ಸಾಹಿಲ್‌ ವಾಕೊಡೆ ತಂದೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಐಐಟಿ ಬಾಂಬೆಯ ದ್ವಿತೀಯ ವರ್ಷದ ಬಿ.ಟೆಕ್‌ ವಿದ್ಯಾರ್ಥಿ ಸಾಹಿಲ್‌ ವಾಕೋಡೆ ಅವರ ತಂದೆ ರವೀಂದ್ರ ವಾಕೋಡೆ ಇಂದಿನಿಂದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ನನ್ನ ಮಗ ಮೃತಪಟ್ಟು ನಾಲ್ಕು ದಿನಗಳು ಆಗಿವೆ. ಆತನ ಸಾವಿಗೆ ಕಾರಣರಾದವರನ್ನು ಅರೆಸ್ಟ್‌ ಮಾಡುವವರೆಗೂ ನಾನು ಉಪವಾಸ ಸತ್ಯಾಗ್ರಹ ನಿಲ್ಲಿಸೋದಿಲ್ಲ ಎಂದು ರವೀಂದ್ರ ವಾಕೋಡೆ ಹೇಳಿದ್ದಾರೆ. ಮುಂಬೈ ಕ್ರೈಮ್‌ ಬ್ರಾಂಚ್‌ ಅಧಿಕಾರಿಗಳನ್ನು ಭೇಟಿಯಾಗಿ ಬಂದ ನಂತರ ರವೀಂದ್ರ ಅವರು ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ಕೆಲವೇ ದಿನಗಳ ಹಿಂದೆ ಹಾಸ್ಟೆಲಿಗೆ ಬಂದು ನಾನು ಹಾಗೂ ನನ್ನ ಪತ್ನಿ ಸಾಹಿಲ್‌ನನ್ನು ಭೇಟಿ ಮಾಡಿದ್ದೆವು. ಆತನ ಸಾವಿನ ಸುದ್ದಿ ಕೇಳಿ ಸಿಡಿಲು ಬಡಿದಂತಾಗಿದೆ. ಮಗ ಅಮಾಯಕ. ಆತನ ಸಾವಿಗೆ ನ್ಯಾಯ ಸಿಗಬೇಕು. ಅನ್ನ ನೀರು ಯಾವುದೂ ಬೇಡ, ನ್ಯಾಯ ಕೊಡಿ ಎಂದು ರವೀಂದ್ರ ಅವರು ಹೇಳಿದ್ದಾರೆ.

ಪ್ರಕರಣದ ತನಿಖೆಗಾಗಿ ಐಐಟಿ ಬಾಂಬೆ ಹತ್ತು ಮಂದಿಯ ಕಮಿಟಿಯೊಂದನ್ನು ಸ್ಥಾಪಿಸಿದೆ. ಈ ಪ್ರಕರಣದ ಆರೋಪಿ ಸೂರ್ಯನಾರಾಯಣ ಡೂಲಾ ಅವರನ್ನು ರಜೆಯ ಮೇಲೆ ಮನೆಗೆ ಕಳುಹಿಸಲಾಗಿದೆ. ಒಂದು ವಾರದ ಅವಧಿಯಲ್ಲಿ ಪ್ಯಾನಲ್‌ ವಿಚಾರಣೆ ನಡೆಸಿ ರಿಪೋರ್ಟ್‌ ಸಬ್ಮಿಟ್‌ ಮಾಡಲಿದೆ. ಇದಾದ ನಂತರ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಕಾಲೇಜು ಹೇಳಿದೆ.

ಘಟನೆ ಹಿನ್ನೆಲೆ ಏನು?

ಸೆ.18ರಂದು ನಡೆದ ಮಿಡ್‌ ಸೆಮಿಸ್ಟರ್‌ ಪರೀಕ್ಷೆಯಲ್ಲಿ ಸಾಹಿಲ್‌ ಫೋನ್‌ನಲ್ಲಿದ್ದ ಚಾಟ್‌ಜಿಪಿ ಬಳಸಿ ಚೀಟಿಂಗ್‌ ಮಾಡಿದ್ದರು ಎನ್ನಲಾಗಿದೆ. ಈ ವೇಳೆ ಪ್ರೊಫೆಸರ್‌ ಸೂರ್ಯನಾರಾಯಣ ಡೂಲಾ ಅವರ ಕೈಯಲ್ಲಿ ಸಿಕ್ಕಿಬಿದ್ದಿದ್ದಾರೆ. ನಂತರ ಎಕ್ಸಾಂ ಹಾಲ್‌ನಿಂದ ಹೊರಗೆ ಕಳುಹಿಸಲಾಗಿದೆ. ಈ ಮುಜುಗರ, ಅವಮಾನ ಹಾಗೂ ಮುಂದೇನು ಎನ್ನುವ ಭಯ ಹಾಗೂ ಒತ್ತಡದಿಂದ ಸಾಹಿಲ್‌ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಆದರೆ ಇನ್ನೊಂದು ಆಯಾಮದ ಪ್ರಕಾರ ಜಾತಿ ಆಧಾರಿತ ಕಿರುಕುಳದಿಂದ ಸಾಹಿಲ್‌ ಬೇಸತ್ತಿದ್ದರು ಎನ್ನಲಾಗಿದೆ. ಎಸ್‌ಸಿ ಸಮುದಾಯಕ್ಕೆ ಸಾಹಿಲ್‌ ಸೇರಿದ್ದು, ಇದೇ ಕಾರಣದಿಂದ ಪ್ರೊಫೆಸರ್‌ ಸೂರ್ಯನಾರಾಯಣ ಡೊಲ್ಲಾ ಹಿಂಸೆ ನೀಡುತ್ತಿದ್ದರು ಎಂದು ಪೋಷಕರು ದೂರಿದ್ದಾರೆ. ಈ ಬಗ್ಗೆ ಮುಂಬೈ ಪೊಲೀಸ್‌ ಅಪರಾಧ ವಿಭಾಗ ತನಿಖೆ ನಡೆಸುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !