September 23, 2026
Wednesday, September 23, 2026
spot_img

ಹಣಕಾಸು ಇಲಾಖೆಯ ಎಚ್ಚರಿಕೆಯಿಂದ ಕಾವೇರಿದ ರಾಜಕೀಯ: ವಿಧಾನಸೌಧದ ಬಳಿ ಬಿಜೆಪಿ ಪ್ರತಿಭಟನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದ ಆರ್ಥಿಕ ಪರಿಸ್ಥಿತಿ ಕುರಿತು ಹಣಕಾಸು ಇಲಾಖೆಯ ಎಚ್ಚರಿಕೆ ನೀಡಿದ್ದು ರಾಜಕೀಯ ವಲಯದಲ್ಲಿ ಕೋಲಾಹಲ ಉಂಟಾಗಿದೆ.

ಈ ಬೆನ್ನಲ್ಲೇ, ಬಿಜೆಪಿ ಬುಧವಾರ ವಿಧಾನಸೌಧದ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದು, ರಾಜ್ಯ ಸರ್ಕಾರದ ಆರ್ಥಿಕ ನಿರ್ವಹಣೆ ಹಾಗೂ ಅಭಿವೃದ್ಧಿ ಕಾರ್ಯಗಳ ಕುರಿತು ಕಾಂಗ್ರೆಸ್ ಸರ್ಕಾರವನ್ನು ಪ್ರಶ್ನಿಸಿದ ಬಿಜೆಪಿ ನಾಯಕರು, ಹಣಕಾಸು ಇಲಾಖೆಯ ಟಿಪ್ಪಣಿಯನ್ನೇ ಮುಂದಿಟ್ಟು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ವಿಧಾನಸೌಧದ ಕೆಂಗಲ್ ಹನುಮಂತಯ್ಯ ಪ್ರತಿಮೆ ಬಳಿ ನಡೆದ ಪ್ರತಿಭಟನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಹಾಗೂ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವ ವಹಿಸಿದ್ದು, ರಾಜ್ಯದಲ್ಲಿ ಸಮರ್ಪಕ ಆಡಳಿತ ನೀಡಬೇಕು ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಅಗತ್ಯ ಅನುದಾನ ಕಲ್ಪಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಹಣಕಾಸು ಇಲಾಖೆ ಹೇಳಿದ್ದೇನು?

ಈ ಪ್ರತಿಭಟನೆಗೆ ಒಂದು ದಿನ ಮುನ್ನ ಹಣಕಾಸು ಇಲಾಖೆ ಮಹತ್ವದ ಹೊಸ ವೆಚ್ಚದ ಯೋಜನೆಗಳನ್ನು ಕೈಗೆತ್ತಿಕೊಳ್ಳುವಾಗ ಎಚ್ಚರಿಕೆ ವಹಿಸುವಂತೆ ಸರ್ಕಾರಕ್ಕೆ ಸಲಹೆ ನೀಡಿತ್ತು. ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಸಂಪರ್ಕ ಯೋಜನೆಗೆ ಸಂಬಂಧಿಸಿದ ಸುಮಾರು 10,000 ಕೋಟಿ ಪ್ರಸ್ತಾವ ಪರಿಶೀಲಿಸುವ ವೇಳೆ, ಈಗಾಗಲೇ ಬಜೆಟ್‌ನಲ್ಲಿ ಅನುದಾನ ಮೀಸಲಿಡದ ದೊಡ್ಡ ಯೋಜನೆಗಳಿಗೆ ಸಂಪನ್ಮೂಲ ಗುರುತಿಸದೆ ಚಾಲನೆ ನೀಡುವುದರಿಂದ ನಗದು ಹರಿವು ಹಾಗೂ ಹಣಕಾಸು ನಿರ್ವಹಣೆಯಲ್ಲಿ ಒತ್ತಡ ಉಂಟಾಗಬಹುದು ಎಂದು ಇಲಾಖೆ ಸೂಚಿಸಿತ್ತು.

ಇದನ್ನೂ ಓದಿ:

ಹಣಕಾಸು ಇಲಾಖೆಯ ಅಂದಾಜಿನ ಪ್ರಕಾರ 2026-27ನೇ ಸಾಲಿನಲ್ಲಿ ರಾಜ್ಯದ ಹಣಕಾಸು ಕೊರತೆ ಜಿಎಸ್‌ಡಿಪಿಯ ಶೇ.2.95ರಷ್ಟಿರಲಿದೆ. ಇದು ಹಣಕಾಸು ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣಾ ಚೌಕಟ್ಟಿನ ಶೇ.3ರ ಮಿತಿಗೆ ಸಮೀಪದಲ್ಲಿದೆ. ಇದೇ ವೇಳೆ, ವಿವಿಧ ಇಲಾಖೆಗಳ ಮುಂದುವರಿದ ಕಾಮಗಾರಿಗಳ ಬಾಕಿ ವೆಚ್ಚ 2 ಲಕ್ಷ ಕೋಟಿಗೂ ಅಧಿಕವಾಗಿದ್ದು, ಲೋಕೋಪಯೋಗಿ, ಜಲಸಂಪನ್ಮೂಲ, ಸಣ್ಣ ನೀರಾವರಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳ ಬಾಕಿ ಬಿಲ್‌ಗಳ ಮೊತ್ತವೇ 36,136 ಕೋಟಿಯಷ್ಟಿದೆ.

ಡಿ.ಕೆ. ಶಿವಕುಮಾರ್ ಹೇಳಿದ್ದಿಷ್ಟು

ಹಣಕಾಸು ಇಲಾಖೆಯ ಸಲಹೆಯನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸರ್ಕಾರದ ಹಿತದೃಷ್ಟಿಯಿಂದ ನೀಡಿರುವ ಎಚ್ಚರಿಕೆ ಎಂದು ಹೇಳಿದ್ದಾರೆ. ಹೊಸ ಯೋಜನೆಗಳು ಹಾಗೂ ಈಗಾಗಲೇ ಜಾರಿಯಲ್ಲಿರುವ ಕಾರ್ಯಕ್ರಮಗಳ ನಡುವೆ ಲಭ್ಯವಿರುವ ಸಂಪನ್ಮೂಲಗಳನ್ನು ಹೇಗೆ ಬಳಸಬೇಕು ಎಂಬುದನ್ನು ಸರ್ಕಾರ ಪರಿಶೀಲಿಸಲಿದೆ ಎಂದು ಅವರು ತಿಳಿಸಿದ್ದಾರೆ.

ಒಂದೆಡೆ ಹಣಕಾಸು ಶಿಸ್ತು ಕಾಪಾಡಿಕೊಳ್ಳುವ ಅಗತ್ಯದ ಕುರಿತು ಇಲಾಖೆಯ ಎಚ್ಚರಿಕೆ, ಮತ್ತೊಂದೆಡೆ ಸರ್ಕಾರದ ವಿರುದ್ಧ ಪ್ರತಿಪಕ್ಷದ ರಾಜಕೀಯ ಆರೋಪ ಈ ಬೆಳವಣಿಗೆ ರಾಜ್ಯದ ಆರ್ಥಿಕ ನಿರ್ವಹಣೆ ಮತ್ತು ಅಭಿವೃದ್ಧಿ ವೆಚ್ಚದ ಕುರಿತು ಮುಂದಿನ ದಿನಗಳಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗುವ ಸಾಧ್ಯತೆಯಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !