September 25, 2026
Friday, September 25, 2026
spot_img

ತೆಲಂಗಾಣದಲ್ಲಿ ಒಣಗುತ್ತಿರುವ ಬೆಳೆ: ಕೃಷ್ಣಾ ನೀರು ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ಮನವಿ

ಹೊಸದಿಗಂಖತ ಡಿಜಿಟಲ್‌ ಡೆಸ್ಕ್:‌

ನೀರಿನ ಕೊರತೆಯಿಂದಾಗಿ ತೆಲಂಗಾಣದ ಗಡಿ ಭಾಗದಲ್ಲಿ ಒಣಗುತ್ತಿರುವ ಲಕ್ಷಾಂತರ ಎಕರೆ ಬೆಳೆಗಳನ್ನು ರಕ್ಷಿಸಲು ಕೃಷ್ಣಾ ನದಿಗೆ ತಕ್ಷಣವೇ ನೀರು ಹರಿಸಬೇಕು ಎಂದು ತೆಲಂಗಾಣದ ಪ್ರವಾಸೋದ್ಯಮ ಸಚಿವ ಜೂಪಲ್ಲಿ ಕೃಷ್ಣರಾವ್ ಮತ್ತು ಕಾಂಗ್ರೆಸ್ ಶಾಸಕರ ನಿಯೋಗವು ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಅಧಿಕೃತವಾಗಿ ವಿನಂತಿಸಿದೆ.

5,000 ಕ್ಯೂಸೆಕ್ ನೀರಿಗೆ ಬೇಡಿಕೆ

ತೆಲಂಗಾಣದ ಜುರಾಲ, ನೆಟ್ಟೆಂಪಾಡು, ಭೀಮಾ ಮತ್ತು ಕೋಯಿಲ್‌ಸಾಗರ್ ನೀರಾವರಿ ಯೋಜನೆಗಳ ವ್ಯಾಪ್ತಿಯಲ್ಲಿ ಸದ್ಯ ಬೆಳೆಗಳು ಅತ್ಯಂತ ನಿರ್ಣಾಯಕ ಹಂತದಲ್ಲಿದ್ದು, ತೀವ್ರ ನೀರಿನ ಕೊರತೆ ಎದುರಿಸುತ್ತಿವೆ. ಈ ನಾಲ್ಕು ಯೋಜನೆಗಳ ಅಡಿಯಲ್ಲಿ ಸುಮಾರು 5.5 ಲಕ್ಷ ಎಕರೆ ಪ್ರದೇಶದಲ್ಲಿ ರೈತರು ಬೆಳೆ ಬೆಳೆದಿದ್ದಾರೆ. ಈ ಒಣಗುತ್ತಿರುವ ಬೆಳೆಗಳನ್ನು ಉಳಿಸಿಕೊಳ್ಳಲು ಮುಂದಿನ ಒಂದು ತಿಂಗಳ ಕಾಲ ಪ್ರತಿದಿನ 5,000 ಕ್ಯೂಸೆಕ್‌ನಷ್ಟು ನೀರನ್ನು ಕೃಷ್ಣಾ ಜಲಾಶಯಗಳಿಂದ ಹರಿಸಬೇಕು ಎಂದು ನಿಯೋಗವು ಕೋರಿದೆ. ಈ ಮನವಿಗೆ ಸಿಎಂ ಡಿ.ಕೆ. ಶಿವಕುಮಾರ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿದು ಬಂದಿದೆ.

ತೆಲಂಗಾಣದಲ್ಲಿ ರೈತರ ಹೋರಾಟ

ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ಜೋಗುಲಾಂಬ ಗದ್ವಾಲ್ ಜಿಲ್ಲೆಯ ಜುರಾಲ ಯೋಜನೆಯ ಅಚ್ಚುಕಟ್ಟು ಪ್ರದೇಶದ ರೈತರು ನೀರಿಗಾಗಿ ಕಳೆದ ಕೆಲವು ದಿನಗಳಿಂದ ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಬೆನ್ನಲ್ಲೇ ತೆಲಂಗಾಣ ಸರ್ಕಾರವು ಕರ್ನಾಟಕದ ಮೊರೆ ಹೋಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಸೆ. 21 ರಂದು ಪ್ರತಿಪಕ್ಷ ಬಿಆರ್‌ಎಸ್ ಭಾರಿ ಪ್ರತಿಭಟನೆ ನಡೆಸಿತ್ತು. ಮತ್ತೊಂದೆಡೆ, ಸೆ. 22 ರಂದು ಜೋಗುಲಾಂಬ ಗದ್ವಾಲ್ ಜಿಲ್ಲೆಯ ರೈತರನ್ನು ಭೇಟಿ ಮಾಡಲು ತೆರಳುತ್ತಿದ್ದ ತೆಲಂಗಾಣ ರಾಜ್ಯ ಬಿಜೆಪಿ ಅಧ್ಯಕ್ಷ ಎನ್. ರಾಮಚಂದರ್ ರಾವ್ ಅವರನ್ನು ಪೊಲೀಸರು ಮಾರ್ಗಮಧ್ಯದಲ್ಲೇ ತಡೆದು ವಶಕ್ಕೆ ಪಡೆದಿದ್ದರು.

ಇದನ್ನೂ ಓದಿ:

ಹಿಂದಿನ ಸರ್ಕಾರದ ವಿರುದ್ಧ ಸಚಿವರ ವಾಗ್ದಾಳಿ

ತೆಲಂಗಾಣ ಸಚಿವ ಜೂಪಲ್ಲಿ ಕೃಷ್ಣರಾವ್ ಮಾತನಾಡಿ, ʼಜುರಾಲ ಜಲಾಶಯವು ಒಟ್ಟು 9 ಟಿಎಂಸಿಗಿಂತ ಅಧಿಕ ಸಂಗ್ರಹ ಸಾಮರ್ಥ್ಯ ಹೊಂದಿದ್ದರೂ, ಅದರಲ್ಲಿ ಸುಮಾರು 3 ಟಿಎಂಸಿಯಷ್ಟು ಹೂಳು ತುಂಬಿಕೊಂಡಿದೆ. ಉಳಿದ 3 ಟಿಎಂಸಿ ನೀರನ್ನು ಜೂನ್ 2027 ರ ಅಂತ್ಯದವರೆಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಕಾಯ್ದಿರಿಸಬೇಕಾಗಿದೆʼ ಎಂದು ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಇದೇ ವೇಳೆ ಬಿಆರ್‌ಎಸ್ ಟೀಕೆಗಳಿಗೆ ತಿರುಗೇಟು ನೀಡಿದ ಅವರು, ಹಿಂದಿನ ಬಿಆರ್‌ಎಸ್ ಸರ್ಕಾರವು ಹೆಚ್ಚುವರಿ ನೀರು ಸಂಗ್ರಹಿಸಲು ಹೊಸ ಜಲಾಶಯಗಳನ್ನು ಏಕೆ ನಿರ್ಮಿಸಲಿಲ್ಲ?ಎಂದು ಪ್ರಶ್ನಿಸಿದ್ದಾರೆ.

Must Read