November 9, 2026
Monday, November 9, 2026
spot_img

ಚಾಕು ತೋರಿಸಿ ದರೋಡೆ ಪ್ರಕರಣ: 3.62 ಲಕ್ಷ ರೂ. ಸುಲಿಗೆ ಮಾಡಿದ ನಾಲ್ವರು ಅಂದರ್

ಹೊಸದಿಗಂತ ವರದಿ ಯಲ್ಲಾಪುರ:

ಮನೆಯ ಬಾಗಿಲು ಮುರಿದು ಒಳನುಗ್ಗಿ, ಮನೆಯವರಿಗೆ ಚಾಕು ತೋರಿಸಿ ಬೆದರಿಸಿ ಚಿನ್ನಾಭರಣ, ನಗದು ಹಾಗೂ ಬೈಕ್ ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ವಸ್ತುಗಳನ್ನು ದರೋಡೆ ಮಾಡಿದ್ದ ಪ್ರಕರಣವನ್ನು ಯಲ್ಲಾಪುರ ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ನವೆಂಬರ್ 9ರಂದು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ್ದ ಕಾರು ಸೇರಿದಂತೆ ಸುಲಿಗೆ ಮಾಡಿದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಯಲ್ಲಾಪುರ ತಾಲೂಕಿನ ಹುಟ್ಕಮನೆ ಗ್ರಾಮದ ಮೂಲೆಗುಂಡ್ಲ್ ನಿವಾಸಿ, 63 ವರ್ಷದ ರಾಮಚಂದ್ರ ಭಟ್ಟ ಎಂಬುವವರ ಮನೆಯಲ್ಲಿ ನವೆಂಬರ್ 5ರಂದು ರಾತ್ರಿ 8.30ರ ಸುಮಾರಿಗೆ ಈ ಘಟನೆ ನಡೆದಿತ್ತು. ಮನೆಯ ಬಾಗಿಲು ಮುರಿದು ಒಳನುಗ್ಗಿದ್ದ ಸುಲಿಗೆಕೋರರು, ರಾಮಚಂದ್ರ ಭಟ್ಟ ಹಾಗೂ ಮನೆಯವರಿಗೆ ಚಾಕು ತೋರಿಸಿ ಬೆದರಿಸಿದ್ದರು. ಬಳಿಕ ಮನೆಯ ಮಾಳಿಗೆಯ ಮೇಲಿದ್ದ ಗೋದ್ರೇಜ್ ಕಪಾಟಿನಲ್ಲಿದ್ದ ಚಿನ್ನಾಭರಣ ಹಾಗೂ ಇತರ ಬೆಲೆಬಾಳುವ ವಸ್ತುಗಳನ್ನು ದೋಚಿಕೊಂಡು ಪರಾರಿಯಾಗಿದ್ದರು.

ಸುಲಿಗೆಯಾದ ವಸ್ತುಗಳಲ್ಲಿ ಸುಮಾರು 56 ಗ್ರಾಂ ಚಿನ್ನಾಭರಣ, 60 ಗ್ರಾಂ ಬೆಳ್ಳಿ ಪಾತ್ರೆಗಳು, ಎರಡು ಕೈಗಡಿಯಾರ, ಎರಡು ಟಚ್‌ಸ್ಕ್ರೀನ್ ಮೊಬೈಲ್‌ಗಳು ಹಾಗೂ 12 ಸಾವಿರ ರೂ. ನಗದು ಸೇರಿವೆ. ಅಲ್ಲದೆ, ಮನೆಯಲ್ಲಿದ್ದ ಟಿವಿಎಸ್ ಅಪಾಚೆ ಬೈಕ್‌ನೂ ಕದ್ದೊಯ್ದಿದ್ದರು. ಒಟ್ಟು ಸುಲಿಗೆಯಾದ ವಸ್ತುಗಳ ಅಂದಾಜು ಮೌಲ್ಯ ಸುಮಾರು 3.62 ಲಕ್ಷ ರೂ. ಆಗಿತ್ತು.

ಇದನ್ನೂ ಓದಿ:

ನವೆಂಬರ್ 9ರಂದು ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಪ್ರಕರಣದ ಆರೋಪಿಗಳಾದ ಹಸನ್‌ಸಾಬು ಅಮೀನಗಡ (48), ಮುಬಾರಕ್ ಮುಕಾನದಾರ (26), ಮುಹಮ್ಮದ್ ಖಾಸಿಂ ದಂಡಿನವರ (38) ಹಾಗೂ ಅಬ್ಬಾಸ್ ಮುಕಾನದಾರ (50) ಎಂಬುವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಒಂಟಿ ಮನೆಯೊಂದರಲ್ಲಿ ಸುಲಿಗೆ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.

ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಬಿಳಿ ಬಣ್ಣದ ಫೋರ್ಡ್ ಕಾರು, ಹೀರೋ ಮೋಟಾರ್ ಸೈಕಲ್, ಸುಲಿಗೆ ಮಾಡಿದ್ದ ಟಿವಿಎಸ್ ಬೈಕ್, ಎರಡು ಮೊಬೈಲ್‌ಗಳು ಹಾಗೂ ಇತರ ಸುಲಿಗೆ ಮಾಡಿದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.ಈ ಕಾರ್ಯಾಚರಣೆಯು ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್. ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಹಾಗೂ ಶಿರಸಿ ಉಪವಿಭಾಗದ ಡಿವೈಎಸ್ಪಿ ಗೀತಾ ಪಾಟೀಲ ಅವರ ಮಾರ್ಗದರ್ಶನದಲ್ಲಿ ಯಲ್ಲಾಪುರ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.

Must Read

Skip to toolbar