November 9, 2026
Monday, November 9, 2026
spot_img

ಕರ್ನಾಟಕದ ಕೈಗಾರಿಕಾ ವಲಯಕ್ಕೆ ಬಂಪರ್ ಬೂಸ್ಟ್: 6,825 ಕೋಟಿ ರೂ. ಯೋಜನೆಗಳಿಗೆ ಅನುಮೋದನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ರಾಜ್ಯದಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಮತ್ತಷ್ಟು ವೇಗ ನೀಡುವ ಮಹತ್ವದ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ. ಒಟ್ಟು 6,825.93 ಕೋಟಿ ರೂ. ಬಂಡವಾಳ ಹೂಡಿಕೆಯ 147 ಕೈಗಾರಿಕಾ ಯೋಜನೆಗಳಿಗೆ ರಾಜ್ಯಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಒಪ್ಪಿಗೆ ನೀಡಿದೆ.

ಈ ಯೋಜನೆಗಳ ಅನುಷ್ಠಾನದಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸುಮಾರು 18,600 ಉದ್ಯೋಗಾವಕಾಶಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.

ಸಚಿವ ಎಂ.ಬಿ. ಪಾಟೀಲ್ ಅಧ್ಯಕ್ಷತೆಯಲ್ಲಿ ನಡೆದ ಸಮಿತಿಯ 161ನೇ ಸಭೆಯಲ್ಲಿ ಈ ಅನುಮೋದನೆ ನೀಡಲಾಗಿದೆ. ವಿಶೇಷವೆಂದರೆ, ಒಪ್ಪಿಗೆ ಪಡೆದ ಯೋಜನೆಗಳ ಪೈಕಿ 131 ಯೋಜನೆಗಳು ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳನ್ನು ಹೊರತುಪಡಿಸಿ ಇತರ ಜಿಲ್ಲೆಗಳಲ್ಲಿ ಸ್ಥಾಪನೆಯಾಗಲಿವೆ. ಇದರಿಂದ ಪ್ರಾದೇಶಿಕ ಮಟ್ಟದಲ್ಲಿಯೂ ಕೈಗಾರಿಕಾ ಬೆಳವಣಿಗೆಗೆ ಉತ್ತೇಜನ ದೊರೆಯಲಿದೆ ಎಂದು ಸಚಿವರು ಹೇಳಿದ್ದಾರೆ.

ದೊಡ್ಡ ಯೋಜನೆಗಳಿಗೆ ಹೆಚ್ಚಿನ ಹೂಡಿಕೆ

ಅನುಮೋದನೆ ಪಡೆದ ಯೋಜನೆಗಳಲ್ಲಿ ತಲಾ 50 ಕೋಟಿಗೂ ಅಧಿಕ ಹೂಡಿಕೆಯ 36 ಬೃಹತ್ ಯೋಜನೆಗಳು ಸೇರಿವೆ. ಇವುಗಳಿಗೆ 4,507.71 ಕೋಟಿ ಬಂಡವಾಳ ಹರಿದುಬರಲಿದ್ದು, 12,074 ಉದ್ಯೋಗಗಳು ಸೃಷ್ಟಿಯಾಗಲಿವೆ. ಇನ್ನು 15 ಕೋಟಿಯಿಂದ 50 ಕೋಟಿವರೆಗಿನ ಹೂಡಿಕೆಯ 108 ಹೊಸ ಯೋಜನೆಗಳಿಗೆ ಅನುಮತಿ ನೀಡಲಾಗಿದ್ದು, ಇವುಗಳಿಂದ 2,238.37 ಕೋಟಿ ಹೂಡಿಕೆ ಹಾಗೂ 6,526 ಉದ್ಯೋಗಗಳು ನಿರೀಕ್ಷಿಸಲಾಗಿದೆ. ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಮೂರು ಘಟಕಗಳ ಹೆಚ್ಚುವರಿ 79.85 ಕೋಟಿ ಹೂಡಿಕೆಗೂ ಸಮಿತಿ ಹಸಿರು ನಿಶಾನೆ ತೋರಿದೆ.

ಇದನ್ನೂ ಓದಿ:

ಹಲವು ಜಿಲ್ಲೆಗಳಿಗೆ ಕೈಗಾರಿಕಾ ಕೊಡುಗೆ

ದೇವನಹಳ್ಳಿಯಲ್ಲಿ ಅದ್ವೈತ್ ಟೆಕ್ ಸಂಸ್ಥೆ 380 ಕೋಟಿ ವೆಚ್ಚದಲ್ಲಿ ಐಟಿ ಪಾರ್ಕ್ ಸ್ಥಾಪಿಸಲಿದ್ದು, 500 ಉದ್ಯೋಗಗಳನ್ನು ಒದಗಿಸಲಿದೆ. ಬೆಂಗಳೂರಿನ ದೊಡ್ಡನೆಕುಂದಿಯಲ್ಲಿ ಮತ್ತೊಂದು ಐಟಿ ಪಾರ್ಕ್ ನಿರ್ಮಾಣವಾಗಲಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಗಾಜು ಉತ್ಪಾದನೆ, ಸೆಮಿಕಂಡಕ್ಟರ್ ಉಪಕರಣ ತಯಾರಿಕೆ ಸೇರಿದಂತೆ ಮೂರು ಪ್ರಮುಖ ಘಟಕಗಳು ಸ್ಥಾಪನೆಯಾಗಲಿವೆ.

ಮೈಸೂರು ಜಿಲ್ಲೆಯಲ್ಲಿ ಎಲೆಕ್ಟ್ರಾನಿಕ್ ಬಿಡಿಭಾಗಗಳು ಮತ್ತು ಒಮೆಗಾ-3 ಉತ್ಪನ್ನಗಳ ತಯಾರಿಕಾ ಘಟಕಗಳು ಬರಲಿವೆ. ಮಂಡ್ಯ ಜಿಲ್ಲೆಯ ಬನ್ನೇನಹಳ್ಳಿಯಲ್ಲಿ ಸಮಗ್ರ ಸಾವಯವ ಹೈನುಗಾರಿಕೆ ಮತ್ತು ಆಹಾರ ಸಂಸ್ಕರಣಾ ಘಟಕ ಸ್ಥಾಪನೆಗೆ ಅನುಮೋದನೆ ದೊರೆತಿದೆ.

ಹೂಡಿಕೆಗೆ ಹೊಸ ದಿಕ್ಕು

ಆಹಾರ ಸಂಸ್ಕರಣೆ, ಜವಳಿ, ದತ್ತಾಂಶ ಕೇಂದ್ರ, ಸೆಮಿಕಂಡಕ್ಟರ್, ಏರೋಸ್ಪೇಸ್, ಐಟಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಯೋಜನೆಗಳು ರೂಪುಗೊಳ್ಳಲಿವೆ. ಈ ಹೂಡಿಕೆಗಳು ರಾಜ್ಯದ ಕೈಗಾರಿಕಾ ಸಾಮರ್ಥ್ಯವನ್ನು ಹೆಚ್ಚಿಸುವುದರ ಜೊತೆಗೆ ಸ್ಥಳೀಯ ಯುವಜನರಿಗೆ ಉದ್ಯೋಗದ ಹೊಸ ಅವಕಾಶಗಳನ್ನು ತೆರೆಯುವ ನಿರೀಕ್ಷೆಯಿದೆ.

Must Read

Skip to toolbar