September 25, 2026
Friday, September 25, 2026
spot_img

ಸ್ನೇಹಿತನ ಹುಡುಕಾಟಕ್ಕೆ ಬಂದವನ ದುರಂತ ಅಂತ್ಯ: ಅಪರಿಚಿತ ವಾಹನಕ್ಕೆ ಬೈಕ್ ಡಿಕ್ಕಿ, ಯುವಕ ಸ್ಥಳದಲ್ಲೇ ಸಾ*ವು

ಹೊಸದಿಗಂತ ವರದಿ ಹಾಸನ:

ಹೇಮಾವತಿ ನಾಲೆಗೆ ಬೈಕ್ ಸ್ಕಿಡ್ ಆಗಿ ಬಿದ್ದು ಸ್ನೇಹಿತ ಹೇಮಂತ್ ನಾಪತ್ತೆಯಾಗಿದ್ದ ವಿಷಯ ತಿಳಿದು ಘಟನಾ ಸ್ಥಳಕ್ಕೆ ಬಂದಿದ್ದ ಯುವಕನೊಬ್ಬ, ವಾಪಸ್ ತೆರಳುವ ವೇಳೆ ಅಪಘಾತಕ್ಕೀಡಾಗಿ ಮೃತಪಟ್ಟಿರುವ ದಾರುಣ ಘಟನೆ ಚನ್ನರಾಯಪಟ್ಟಣದಲ್ಲಿ ನಡೆದಿದೆ.

ಆನೆಕೆರೆ ಗ್ರಾಮದ ಆನಂದ್ (30) ಮೃತಪಟ್ಟ ಯುವಕ. ಆತ್ಮೀಯ ಸ್ನೇಹಿತನಾಗಿದ್ದ ಹೇಮಂತ್ ಹಾಗೂ ಆನಂದ್, ನಿನ್ನೆ ಸಂಜೆ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಮೃತಪಟ್ಟಿದ್ದಾರೆ.

ಕೆಇಬಿ ನೌಕರ ಹೇಮಂತ್ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಸ್ಕಿಡ್ ಆಗಿ ಹೇಮಾವತಿ ನಾಲೆಗೆ ಬಿದ್ದಿದ್ದರು. ವಿಷಯ ತಿಳಿದ ಆನಂದ್ ಬೈಕ್‌ನಲ್ಲಿ ಘಟನಾ ಸ್ಥಳಕ್ಕೆ ಆಗಮಿಸಿ ಕೆಲಕಾಲ ಅಲ್ಲಿದ್ದರು. ಬಳಿಕ ಗ್ರಾಮಕ್ಕೆ ವಾಪಸ್ ತೆರಳುತ್ತಿದ್ದ ವೇಳೆ ರಸ್ತೆ ಬದಿ ನಿಂತಿದ್ದ ಅಪರಿಚಿತ ವಾಹನಕ್ಕೆ ಅವರ ಬೈಕ್ ಡಿಕ್ಕಿ ಹೊಡೆದಿದೆ. ಪರಿಣಾಮ ಆನಂದ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಹೇಮಂತ್ ಮೃತದೇಹ ಇನ್ನೂ ಪತ್ತೆಯಾಗಿಲ್ಲ. ಅಗ್ನಿಶಾಮಕದಳ ಹಾಗೂ ಪೊಲೀಸರು ನಾಲೆಯಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚನ್ನರಾಯಪಟ್ಟಣ ನಗರ ಹಾಗೂ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Must Read