September 25, 2026
Friday, September 25, 2026
spot_img

ಬಾಕಿ ಹಣ ಕೇಳಿದ್ದೇ ತಪ್ಪಾಯಿತು: ಶುಂಠಿ ಜಮೀನು ಮಾಲೀಕನ ಮೇಲೆ ಮಾರಣಾಂತಿಕ ಹಲ್ಲೆ ಆರೋಪ

ಹೊಸದಿಗಂತ ವರದಿ ಹಾಸನ:

ಶುಂಠಿ ಬೆಳೆಯಲು ಗುತ್ತಿಗೆ ನೀಡಿದ್ದ ಜಮೀನಿನ ಬಾಕಿ ಹಣ ಕೇಳಿದ್ದಕ್ಕೆ ವ್ಯಕ್ತಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಆರೋಪ ಬೇಲೂರು ತಾಲ್ಲೂಕಿನ ನೆಟ್ಟೇಕೆರೆ ಗ್ರಾಮದಲ್ಲಿ ಕೇಳಿಬಂದಿದೆ.

ನೆಟ್ಟೇಕೆರೆ ಗ್ರಾಮದ ಚಂದ್ರೇಗೌಡ ಹಲ್ಲೆಗೊಳಗಾದವರು. ಬಿಕ್ಕೋಡು ಗ್ರಾಮದ ಸಂತೋಷ ಹಾಗೂ ಆಲೂರು ತಾಲ್ಲೂಕಿನ ಕೋಟಿಗನಹಳ್ಳಿ ಪಾಳ್ಯದ ಕುಮಾರ್ ಹಲ್ಲೆ ನಡೆಸಿದ ಆರೋಪಿಗಳು.

ಚಂದ್ರೇಗೌಡ ತಮ್ಮ ಜಮೀನನ್ನು ಶುಂಠಿ ಬೆಳೆಯಲು ಸಂತೋಷ ಹಾಗೂ ಕುಮಾರ್ ಅವರಿಗೆ ಗುತ್ತಿಗೆ ನೀಡಿದ್ದರು ಎನ್ನಲಾಗಿದೆ. ಜಮೀನಿನ ಬಾಕಿ ಹಣ ನೀಡುವಂತೆ ಚಂದ್ರೇಗೌಡ ಕೇಳಿದಾಗ ಮಾತಿನ ಚಕಮಕಿ ಆರಂಭವಾಗಿದ್ದು, ಬಳಿಕ ಜಗಳ ತಾರಕಕ್ಕೇರಿ ಇಬ್ಬರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಹಲ್ಲೆ ನಡೆಸಿದ ಬಳಿಕ ಕೊಲೆ ಬೆದರಿಕೆಯನ್ನೂ ಹಾಕಿದ್ದಾರೆ ಎಂದು ಚಂದ್ರೇಗೌಡ ಆರೋಪಿಸಿದ್ದಾರೆ. ಗಾಯಗೊಂಡಿರುವ ಅವರು ಹಾಸನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Must Read