November 24, 2026
Tuesday, November 24, 2026
spot_img

ಉಡುಪಿಯಲ್ಲಿ ನ.29ರಂದು ಮಹಾಧನ್ವಂತರಿ ಯಾಗ: 15 ಸಾವಿರಕ್ಕೂ ಅಧಿಕ ಭಕ್ತರು ಭಾಗವಹಿಸುವ ನಿರೀಕ್ಷೆ

ಹೊಸದಿಗಂತ ವರದಿ ಮಂಗಳೂರು:

ಸನಾತನ ಸಂಸ್ಥೆಯ ವತಿಯಿಂದ ನವೆಂಬರ್ 29ರಂದು ಉಡುಪಿಯ ಕುಂಜಿಬೆಟ್ಟು ಎಂ.ಜಿ.ಎಂ. ಕಾಲೇಜು ಮೈದಾನದಲ್ಲಿ ಮಹಾಧನ್ವಂತರಿ ಯಾಗ ಆಯೋಜಿಸಲಾಗಿದೆ. ಯಾಗದಲ್ಲಿ 15 ಸಾವಿರಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆಯಿದ್ದು, ಈಗಾಗಲೇ 9,500 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಸುಮಾರು 6,500 ಮಂದಿ ನೋಂದಾಯಿಸಿಕೊಂಡಿದ್ದಾರೆ ಎಂದು ಯಾಗದ ಆಯೋಜನಾ ಸಮಿತಿಯ ಸಂಯೋಜಕ ಗುರುಪ್ರಸಾದ ಗೌಡ ತಿಳಿಸಿದರು.

ಆರೋಗ್ಯ ಸಂಪನ್ನ ಸಮಾಜದ ನಿರ್ಮಾಣ, ರಾಷ್ಟ್ರದ ಸುರಕ್ಷತೆ, ಲೋಕಕಲ್ಯಾಣ ಹಾಗೂ ಸಮಾಜದ ಶಾರೀರಿಕ ಮತ್ತು ಮಾನಸಿಕ ಕಷ್ಟಗಳ ನಿವಾರಣೆಗಾಗಿ ಈ ಯಾಗವನ್ನು ಆಯೋಜಿಸಲಾಗಿದೆ.

ಕಾರ್ಯಕ್ರಮದಲ್ಲಿ ಶಾಸಕರಾದ ರಾಜೇಶ್ ನಾಯ್ಕ್, ವೇದವ್ಯಾಸ ಕಾಮತ್, ಹರೀಶ್ ಪೂಂಜ, ಅಶೋಕ್ ಕುಮಾರ್ ರೈ, ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಆನೆಗುಂದಿ ಮಠದ ಕಾಳಹಸ್ತೇಂದ್ರ ಸ್ವಾಮೀಜಿ, ಕೊಂಡೆವೂರು ಮಠದ ಯೋಗಾನಂದ ಸರಸ್ವತಿ ಸ್ವಾಮೀಜಿ, ಕರಿಂಜೆಯ ಮುಕ್ತಾನಂದ ಸ್ವಾಮೀಜಿ ಮತ್ತಿತರರು ಭಾಗವಹಿಸಲಿದ್ದಾರೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು, ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆಗಳ ಗಣ್ಯರು ಹಾಗೂ ಸಾರ್ವಜನಿಕರು ಪಾಲ್ಗೊಳ್ಳಲಿದ್ದಾರೆ ಎಂದರು.

ಸನಾತನ ಸಂಸ್ಥೆಯ ಧರ್ಮಪ್ರಚಾರಕ ಸಂತರಾದ ರಮಾನಂದ ಗೌಡ ಮಾತನಾಡಿ, ಕ್ರಿ.ಶ. 1026ರಲ್ಲಿ ಮಹಮ್ಮದ್ ಗಝನಿಯ ಆಕ್ರಮಣದಿಂದ ಸೋಮನಾಥ ದೇವಾಲಯ ಧ್ವಂಸಗೊಂಡ ಸಂದರ್ಭದಲ್ಲಿ ದೇವಾಲಯದ ಪವಿತ್ರ ಜ್ಯೋತಿರ್ಲಿಂಗದ ಕೆಲವು ಭಾಗಗಳನ್ನು ಶ್ರದ್ಧಾವಂತ ಅರ್ಚಕರು ಸಂರಕ್ಷಿಸಿದ್ದರು ಎಂಬ ಮಾಹಿತಿಯಿದೆ. ಈ ಪವಿತ್ರ ಅವಶೇಷಗಳನ್ನು ನೂರಾರು ವರ್ಷಗಳ ಕಾಲ ರಹಸ್ಯವಾಗಿ ಸಂರಕ್ಷಿಸಿಕೊಂಡು ಬರಲಾಗಿದೆ ಎಂದು ತಿಳಿಸಿದರು.

ತಂಜಾವೂರಿನ ವೇದಕುಲಪತಿ ಜಿ.ಕೆ. ಸೀತಾರಾಮನ್ ಗುರೂಜಿಯವರು ಈ ಪವಿತ್ರ ಅವಶೇಷಗಳನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಅವುಗಳಲ್ಲಿ ನಾಲ್ಕು ಅವಶೇಷಗಳನ್ನು ಸನಾತನ ಸಂಸ್ಥೆಗೆ ಹಸ್ತಾಂತರಿಸಲಾಗಿದ್ದು, ಉಡುಪಿಯಲ್ಲಿ ನಡೆಯಲಿರುವ ಮಹಾಧನ್ವಂತರಿ ಯಾಗದಲ್ಲಿ ಸಾರ್ವಜನಿಕರ ದರುಶನಕ್ಕೆ ಇಡಲಾಗುವುದು. ಪ್ರಾಚೀನ ಕಾಲದ ಈ ಪವಿತ್ರ ಅವಶೇಷಗಳ ದರುಶನ ಭಕ್ತರಿಗೆ ಅಪೂರ್ವ ಆಧ್ಯಾತ್ಮಿಕ ಅನುಭವ ನೀಡಲಿದೆ ಎಂದರು.

ಇದರ ಜತೆಗೆ ಅಮೂಲ್ಯ ಧರ್ಮಗ್ರಂಥಗಳು, ಸಾತ್ತ್ವಿಕ ಉತ್ಪನ್ನಗಳು ಹಾಗೂ ಧಾರ್ಮಿಕ ಮತ್ತು ಆಧ್ಯಾತ್ಮಿಕ ವಿಷಯಗಳನ್ನು ಪರಿಚಯಿಸುವ ವಿಶೇಷ ಪ್ರದರ್ಶನವನ್ನೂ ಆಯೋಜಿಸಲಾಗಿದೆ.

ಈ ಸಂದರ್ಭದಲ್ಲಿ ಬಿಜೆಪಿ ಯುವ ಮೋರ್ಚಾ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ನಂದನ್ ಮಲ್ಯ, ಉದ್ಯಮಿ ಎಂ.ಜೆ. ಶೆಟ್ಟಿ ಹಾಗೂ ಸನಾತನ ಸಂಸ್ಥೆಯ ಪ್ರತಿನಿಧಿ ಲಕ್ಷ್ಮೀ ಪೈ ಉಪಸ್ಥಿತರಿದ್ದರು.

Must Read

Skip to toolbar