ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿನಿಮಾ ಲೋಕದಲ್ಲಿ ಸಿಲ್ಕ್ ಸ್ಮಿತಾ ಎನ್ನುವುದು ಕೇವಲ ಹೆಸರಲ್ಲ, ಅದು ಪ್ರೇಕ್ಷಕರನ್ನು ಸೆಳೆಯುತ್ತಿದ್ದ ಒಂದು ಮ್ಯಾಜಿಕ್. ಬೆಳ್ಳಿಪರದೆಯ ಮೇಲೆ ತಮ್ಮ ಕಣ್ಣೋಟದ ಮೂಲಕವೇ ಕೋಟ್ಯಂತರ ಅಭಿಮಾನಿಗಳನ್ನು ಸೆಳೆದಿದ್ದರು. ಆದರೆ, ಜಗತ್ತಿಗೆ ಸ್ಮಿತಾ ಆಗಿದ್ದ ಆಕೆಯ ಹಿಂದೆ ‘ವಿಜಯಲಕ್ಷ್ಮಿ’ ಎಂಬ ಒಬ್ಬ ಸಾಮಾನ್ಯ ಹೆಣ್ಣುಮಗಳಿದ್ದಳು. ಆಕೆಯ 30ನೇ ಪುಣ್ಯಸ್ಮರಣೆಯ ಈ ಸಂದರ್ಭದಲ್ಲಿ, ಖ್ಯಾತ ನಟಿ ಖುಷ್ಬೂ ಸುಂದರ್ ಅವರು ಸಿಲ್ಕ್ ಸ್ಮಿತಾ ಅವರೊಂದಿಗಿನ ತಮ್ಮ ಒಡನಾಟ ಹಾಗೂ ಚಿತ್ರರಂಗಕ್ಕೆ ತಿಳಿಯದ ಅವರ ವೈಯಕ್ತಿಕ ಬದುಕಿನ ನೋವಿನ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
ʼಅವಳಿಗೆ ತನ್ನ ಕಣ್ಣುಗಳು ಮತ್ತು ದೇಹವನ್ನು ಪರದೆಯ ಮೇಲೆ ಹೇಗೆ ಬಳಸಬೇಕೆಂದು ಚೆನ್ನಾಗಿ ಗೊತ್ತಿತ್ತು. ಆದರೆ ಅವಳು ಸದಾ ತನ್ನ ಸುತ್ತ ಒಂದು ರಕ್ಷಣಾ ಗೋಡೆಯನ್ನು ನಿರ್ಮಿಸಿಕೊಂಡಿದ್ದಳು. ನಾನು ಅವಳನ್ನು ಎಂದಿಗೂ ‘ಸಿಲ್ಕ್’ ಅಥವಾ ‘ಸ್ಮಿತಾ’ ಎಂದು ಕರೆಯುತ್ತಿರಲಿಲ್ಲ. ಅವಳ ಅಸಲಿ ಹೆಸರಾದ ವಿಜಯಲಕ್ಷ್ಮಿಯ ಶಾರ್ಟ್ ಫಾರ್ಮ್ ‘ವಿಜಿ’ ಅಂತಲೇ ಕರೆಯುತ್ತಿದ್ದೆ. ನಾನು ಹಾಗೆ ಕರೆದಾಗಲೆಲ್ಲಾ ಅವಳ ಮುಖದಲ್ಲಿ ಸಂತೋಷ ಕಾಣಿಸುತ್ತಿತ್ತುʼ ಎಂದು ಖುಷ್ಬೂ ನೆನಪಿಸಿಕೊಂಡಿದ್ದಾರೆ.
ಸ್ಮಿತಾ- ಖುಷ್ಬೂ ಮೊದಲ ಭೇಟಿ
ಅಶೋಕ್ ಕುಮಾರ್ ನಿರ್ದೇಶನದ 3ಡಿ ಸಿನಿಮಾವೊಂದರ ಚಿತ್ರೀಕರಣಕ್ಕಾಗಿ ಖುಷ್ಬೂ ಮೊದಲ ಬಾರಿಗೆ ಚೆನ್ನೈಗೆ ಬಂದಾಗ ಸಿಲ್ಕ್ ಸ್ಮಿತಾ ಅವರ ಪರಿಚಯವಾಗಿತ್ತು. “ಒಮ್ಮೆಲೇ ಶೂಟಿಂಗ್ ಸೆಟ್ನಲ್ಲಿ ಸೂಜಿ ಬಿದ್ದರೂ ಕೇಳಿಸುವಷ್ಟು ನೀರವತೆ ಆವರಿಸಿತು. ಒಂದು ಟವೆಲ್ ಹಾಕಿದ ಫೋಲ್ಡಿಂಗ್ ಚೇರ್ ಬಂತು. ಅಲ್ಲಿ ನಡೆದು ಬಂದವಳೇ ಸಿಲ್ಕ್! ಅವಳಲ್ಲಿದ್ದ ಆ ಕಳೆ ಹಾಗೂ ಆಕರ್ಷಣೆಗೆ ನಾನು ಮಾರುಹೋಗಿದ್ದೆ. ಅವಳು ಇಂಗ್ಲಿಷ್ ಅನ್ನು ಸ್ವಲ್ಪ ತಡಬಡಾಯಿಸುತ್ತಾ ಮಾತನಾಡುತ್ತಿದ್ದರೂ, ನನ್ನನ್ನು ತಕ್ಷಣವೇ ಆಪ್ತವಾಗಿಸಿಕೊಂಡಳು. ಆಗ ಅವಳಿಗೆ ಕೇವಲ 22 ಅಥವಾ 23 ವರ್ಷ ವಯಸ್ಸು ಇರಬಹುದು” ಎಂದು ಖುಷ್ಬೂ ತಮ್ಮ ಮೊದಲ ಭೇಟಿಯ ಬಗ್ಗೆ ತಿಳಿಸಿದ್ದಾರೆ.
ಬಹಳಷ್ಟು ಜನ ಸಿಲ್ಕ್ ಸ್ಮಿತಾ ಅಹಂಕಾರಿ ಎಂದುಕೊಂಡಿದ್ದರು. ಆದರೆ, ಐಟಂ ನಂಬರ್ ಹಾಗೂ ಗ್ಲಾಮರ್ ಪಾತ್ರಗಳನ್ನು ಮಾಡುವ ಮಹಿಳೆಯರನ್ನು ಸಮಾಜ ನೋಡುವ ದೃಷ್ಟಿಯೇ ಬೇರೆ ಇರುತ್ತಿದ್ದರಿಂದ, ತನ್ನನ್ನು ತಾನು ರಕ್ಷಿಸಿಕೊಳ್ಳಲು ಅವಳು ಹಾಗೆ ಗಂಭೀರವಾಗಿ ಇರುತ್ತಿದ್ದಳು ಅಷ್ಟೇ ಎಂದಿದ್ದಾರೆ.
ಸಂಸಾರದ ಸುಖ ಕಾಣದ ವಿಜಯಲಕ್ಷ್ಮಿ
ಸಿಲ್ಕ್ ಸ್ಮಿತಾ ಅವರ ಬದುಕಿನ ಅತ್ಯಂತ ಕರುಣಾಜನಕ ವಿಷಯವನ್ನು ಹಂಚಿಕೊಂಡ ಖುಷ್ಬೂ, ʼಅವಳು ಮನದಾಳದಿಂದ ಕೇವಲ ಒಂದು ಸುಂದರ ಕೌಟುಂಬಿಕ ಜೀವನವನ್ನು ಬಯಸಿದ್ದಳು. ಒಬ್ಬ ಸಾಮಾನ್ಯ ಹೆಂಡತಿಯಂತೆ ಬಾಳಬೇಕು ಎಂಬುದು ಅವಳ ಆಸೆಯಾಗಿತ್ತು. ಅವಳು ಪ್ರೀತಿಸುತ್ತಿದ್ದ ವ್ಯಕ್ತಿಯ ಮಕ್ಕಳಿಗಾಗಿ ವಿದೇಶಕ್ಕೆ ಹೋದಾಗಲೆಲ್ಲಾ ಹುಚ್ಚರಂತೆ ಶಾಪಿಂಗ್ ಮಾಡುತ್ತಿದ್ದಳು. ತನ್ನ ಸಂಗಾತಿಯ ಮಕ್ಕಳನ್ನು ತನ್ನದೇ ಮಕ್ಕಳಂತೆ ಪ್ರೀತಿಸಿದಳು. ಆದರೆ, ಆಫ್-ಸ್ಕ್ರೀನ್ನಲ್ಲಿ ಸಾಮಾನ್ಯ ಬದುಕು ನಡೆಸಬೇಕು ಎಂಬ ಅವಳ ಆಸೆ ಮಾತ್ರ ಕೊನೆವರೆಗೂ ಈಡೇರಲೇ ಇಲ್ಲʼ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
1979ರ ‘ವಂಡಿಚಕ್ಕರಂ’ ತಮಿಳು ಚಿತ್ರದ ಮೂಲಕ ಗುರುತಿಸಿಕೊಂಡು, 18 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ 450ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಸಿಲ್ಕ್ ಸ್ಮಿತಾ, 80 ಮತ್ತು 90ರ ದಶಕದ ದಕ್ಷಿಣ ಭಾರತದ ಸಿನಿಲೋಕದ ಅಪ್ರತಿಮ ತಾರೆಯಾಗಿದ್ದರೂ, ನಿಜ ಜೀವನದಲ್ಲಿ ಪ್ರೀತಿ ಮತ್ತು ನೆಮ್ಮದಿಗಾಗಿ ಹಂಬಲಿಸುತ್ತಲೇ ಕಣ್ಣು ಮುಚ್ಚಿದ್ದು ಇಂದಿಗೂ ಒಂದು ದುರಂತ.



