September 25, 2026
Friday, September 25, 2026
spot_img

ನಾಳೆಯಿಂದ ಪಿತೃಪಕ್ಷ ಆರಂಭ: ಐದು ಋಣಗಳಿಂದ ಮುಕ್ತಿ ಹೊಂದಿದರೆ ಮಾತ್ರ ಸದ್ಗತಿ

ನಾಳೆಯಿಂದ ಪಿತೃಪಕ್ಷ ಆರಂಭವಾಗಲಿದೆ. ವರ್ಷಕ್ಕೊಮ್ಮೆ ನಮ್ಮ ಹಿರಿಯರ ಗೌರವದಲ್ಲಿ ಅವರ ನೆಚ್ಚಿನ ಅಡುಗೆ ಮಾಡಿ ಬಡಿಸಿ, ನೆಚ್ಚಿನ ಜನರ ಜೊತೆ ಪೂಜೆ ಮಾಡಲಾಗುತ್ತದೆ. ನಮ್ಮ ಧರ್ಮದಲ್ಲಿ ಜನಿಸಿದ ಪ್ರತಿಯೊಬ್ಬರಿಗೂ ಹುಟ್ಟಿದಾಗಿನಿಂದಲೇ ಐದು ಋಣಗಳಿರುತ್ತವೆ. ಜೀವಿತಾವಧಿಯಲ್ಲಿ ಈ ಎಲ್ಲದರಲ್ಲಿಯೂ ಮುಕ್ತಿ ಹೊಂದಿದವರಿಗೆ ಮಾತ್ರ ಅಂತಿಮ ಸದ್ಗತಿ ದೊರೆಯುತ್ತದೆ.

ದೇವಋಣ, ಋಷಿಋಣ, ಪಿತೃಋಣ, ಭೂತಋಣ ಹಾಗೂ ಸಮಾಜಋಣ. ಪಿತೃಋಣವನ್ನು ತೀರಿಸುವ ಸಲುವಾಗಿ ಪಿತೃಪಕ್ಷವನ್ನು ಆಚರಣೆ ಮಾಡಲಾಗುತ್ತದೆ. ಈ ಭೂಮಿಯಲ್ಲಿ ನಾವು ಜನನ ಪಡೆಯಲು ನಮ್ಮ ಕರ್ಮ, ತಂದೆ ತಾಯಿ, ಅಜ್ಜ ಅಜ್ಜಿ ಹಾಗೂ ಇತರ ಹಿರಿಯರು ಕಾರಣವಾಗಿರುತ್ತಾರೆ. ಜನ್ಮ ಕೊಟ್ಟದ್ದಕ್ಕಾಗಿ ನಮ್ಮ ಜೊತೆ ಇರದ ಹಿರಿಯರನ್ನು ನೆನೆಸುವ ಸಮಯ ಇದಾಗಿದೆ. ಈ ಸಮಯದಲ್ಲಿ ನಮ್ಮ ಹಿರಿಯರಿಗಾಗಿ ಪೂಜೆ ಪುನಸ್ಕಾರಗಳು ಹಾಗೂ ಅವರಿಗೆ ಧನ್ಯವಾದಗಳನ್ನು ಹೇಳಲಾಗುತ್ತದೆ.

ನಮ್ಮೊಂದಿಗಿರಿದ ನಮ್ಮ ಹಿರಿಯರ ಅತೃಪ್ತ ಆಸೆಗಳಿಗೆ ಮುಕ್ತಿ ನೀಡಲಾಗುತ್ತದೆ. ಅವುಗಳಿಗೆ ಮುಕ್ತಿ ಸಿಗದೇ ಹೋದಲ್ಲಿ, ದುಷ್ಟ ಶಕ್ತಿಗಳ ಅಧೀನಕ್ಕೆ ಆಗಮಿಸಿ ಅವರಿಗೆ ಗುಲಾಮರಾಗುತ್ತಾರೆ. ತದನಂತರ ದುಷ್ಟಶಕ್ತಿಗಳು ಹೇಳಿದ ಕೆಲಸಗಳನ್ನು ಮಾಡುತ್ತವೆ. ಇದರಿಂದಾಗಿ ಕುಟುಂಬಕ್ಕೆ ತೊಂದರೆ ಇರುವ ಸಾಧ್ಯತೆ ಇದೆ. ಹೀಗಾಗಿ ಈ ಪಕ್ಷದಲ್ಲಿ ಹಿರಿಯರಿಗೆ ನಮನ ಸಲ್ಲಿಸಿ. ನಮ್ಮ ಜೀವನ ಚೆನ್ನಾಗಿರಲಿ ಎಂದು ಹರಸುವಂತೆ ಬೇಡಲಾಗುತ್ತದೆ.

ಭೂಮಿ ಮತ್ತು ಸ್ವರ್ಗದ ಮಧ್ಯೆ ವಾಸ

ನಮ್ಮ ಹಿರಿಯರು ಮರಣ ಹೊಂದಿದ ದಿನದಂದು ತಿಥಿಯನ್ನು ಮಾಡಲಾಗುತ್ತದೆ. ದಿನ ಗೊತ್ತಿಲ್ಲ ಎಂದಾದರೆ ಭಾದ್ರಪದ ಮಾಸದ ಕೃಷ್ಣಪಕ್ಷದ ಪಾಡ್ಯದಿಂದ ಅಮಾವಾಸ್ಯೆಯವರೆಗೂ ಇರುವ ಪಿತೃಪಕ್ಷದಲ್ಲಿ ಪೂಜೆ ಮಾಡಲಾಗುತ್ತದೆ. ಒಟ್ಟಾರೆ ಮೂರು ತಲೆಮಾರಿನ ಹಿರಿಯರಿಗೆ ಪೂಜೆ ಮಾಡುವುದು ಸೂಕ್ತವಾಗಿದೆ. ನಮ್ಮ ಹಿರಿಯರಿಗೆ ಮುಕ್ತಿ ಸಿಕ್ಕಿಲ್ಲ ಎನ್ನುವ ಪಕ್ಷದಲ್ಲಿ ಅವರು ಭೂಮಿ ಹಾಗೂ ಸ್ವರ್ಗದ ಮಧ್ಯದ ಭಾಗದಲ್ಲಿ ವಾಸವಿರುತ್ತಾರೆ. ಭೂಮಿಗೆ ಬರಲಾಗದೇ ಸ್ವರ್ಗಕ್ಕೆ ಹೋಗಲಾರದೇ ಒದ್ದಾಡುತ್ತಾರೆ. ಹೀಗಾಗಿ ಅವರಿಗೆ ಮೋಕ್ಷ ನೀಡಬೇಕು. ತದನಂತರ ಅವರು ಸ್ವರ್ಗವಾಸಿಗಳಾಗುತ್ತಾರೆ ಎಂದು ನಂಬಲಾಗಿದೆ.

ಕರ್ಣನಿಗೆ ಊಟವೇ ಸಿಗಲಿಲ್ಲ

ಇನ್ನು ನಂಬಿಕೆಯ ಪ್ರಕಾರ ಸೂರ್ಯ ಈಗ ಕನ್ಯಾರಾಶಿಗೆ ಪ್ರವೇಶ ಮಾಡುತ್ತಾನೆ. ಈ ರಾಶಿಯಿಂದ ಮುಂದುನ ರಾಶಿಗೆ ಹೋಗುವವರೆಗೂ ನಮ್ಮ ಪಿತೃಗಳ ಆತ್ಮವು ಭೂಮಿಯಲ್ಲಿ, ತಮ್ಮಿಷ್ಟದ ಮನೆಯಲ್ಲಿ ವಾಸ ಮಾಡುತ್ತಾರೆ ಎಂದು ಹೇಳಲಾಗುತ್ತದೆ. ಕರ್ಣನನ್ನು ದೇವದೂತರು ಸ್ವರ್ಗಕ್ಕೆ ಕರೆದುಕೊಂಡು ಹೋಗುತ್ತಿರುವ ವೇಳೆ ಆತನಿಗೆ ಹಸಿವಾಗುತ್ತದೆ. ಸುತ್ತಮುತ್ತ ಬರೀ ಬೆಳ್ಳಿ, ಬಂಗಾರ, ವಜ್ರ ವೈಡೂರ್ಯವೇ ಕಾಣಿಸುತ್ತದೆ. ಹೀಗಾಗಿ ಕರ್ಣ ದೇವದೂತರ ಬಳಿ ನನ್ನ ಸುತ್ತಮುತ್ತಾ ತುತ್ತು ಅನ್ನವೂ ಕಾಣಿಸುತ್ತಿಲ್ಲವಲ್ಲ ಎಂದು ಕೇಳುತ್ತಾರೆ. ಆದರೆ ದೇವದೂತರು ʼ ಕರ್ಣಾ ನೀವು ಭೂಮಿಯ ಮೇಲಿದ್ದಾಗ ಜನರಿಗೆ ವಜ್ರ ವೈಢೂರ್ಯ, ಬೆಳ್ಳಿ ಬಂಗಾರ ಎಲ್ಲವನ್ನೂ ದಾನವಾಗಿ ನೀಡಿದ್ದೀರಿ. ಆದರೆ ಯಾರಿಗೂ ಒಂದು ತುತ್ತು ಊಟ ದಾನ ಮಾಡಿಲ್ಲ. ಹೀಗಾಗಿ ನಿಮಗೆ ಎಲ್ಲಿಯೂ ಊಟ ಕಾಣಿಸುತ್ತಿಲ್ಲʼ ಎಂದು ಹೇಳುತ್ತಾರೆ. ತದನಂತರದಿಂದ ಮೂರು ತಲೆಮಾರಿನ ಪಿತೃಗಳಿಗೆ ಅವರಿಷ್ಟದ ಊಟ ನೀಡಿ ಶ್ರಾದ್ಧ ಮಾಡುವ ಸಂಪ್ರದಾಯ ಬಂದಿದೆ.

ಅಶ್ರುತರ್ಪಣ ನೀಡಿದರೂ ಸಾಕು

ಪಿತೃಪಕ್ಷದ ಸಂದರ್ಭ ಯಾವುದೇ ಶುಭ ಕಾರ್ಯ ಮಾಡಲಾಗುವುದಿಲ್ಲ. ಈ ಹದಿನೈದು ದಿನಗಳಲ್ಲಿ ಪಿತೃಋಣ ತೀರಿಸಲು ಪೂಜೆಯನ್ನು ಮಾಡಲಾಗುತ್ತದೆ. ತೀರಿಕೊಂಡ ಪೂರ್ವಜರಿಗೆ ಮಾಂಸಾಹಾರ ಊಟ ಇಷ್ಟವಿದ್ದಲ್ಲಿ ಮಾಂಸಾಹಾರ, ಸಸ್ಯಾಹಾರ ಇಷ್ಟವಿದ್ದಲ್ಲಿ ಸಸ್ಯಾಹಾರ, ಮದ್ಯ, ಸಿಗರೇಟು, ಮೊಟ್ಟೆ, ಎಳನೀರು, ಸಿಹಿತಿಂಡಿ ಎಲ್ಲವನ್ನೂ ಇಡಲಾಗುತ್ತದೆ. ಮೇಲೆ ತಿಳಿಸಿದ ಯಾವುದೇ ರೀತಿಯಲ್ಲೂ ಶ್ರಾದ್ಧವನ್ನು ಮಾಡಲು ಸಾಧ್ಯವಾಗದೇ ಹೋದಲ್ಲಿ, ಸ್ನಾನ ಮಾಡಿ ಶುಚಿರ್ಭೂತರಾಗಿ, ಶ್ರದ್ಧಾ ಭಕ್ತಿಯಿಂದ ತಮ್ಮ ತಂದೆ ತಾಯಿಯರು ಮತ್ತು ಪೂರ್ವಜರನ್ನು ನೆನೆಸಿಕೊಂಡು ಆತ್ಮಶುದ್ಧಿಯಿಂದ ಒಂದು ತೊಟ್ಟು ಕಣ್ಣಿರು ಹಾಕುವ ಮೂಲಕ ಅಶ್ರುತರ್ಪಣವನ್ನು ನೀಡುವ ಮೂಲಕವೂ ಕನಿಷ್ಟ ಪಕ್ಷದಲ್ಲಿ ಪಿತೃಗಳ ಋಣವನ್ನು ತೀರಿಸಬಹುದಾಗಿದೆ. ಆದರೆ ಯಾರಿಗೂ ಇಂತಹ ದೈನೇಸಿ ಸ್ಥಿತಿ ಬಾರದಿರಲಿ ಎನ್ನುವುದೇ ಎಲ್ಲರ ಆಶಯವಾಗಿದೆ.

Must Read