September 25, 2026
Friday, September 25, 2026
spot_img

ಏಷ್ಯನ್ ಗೇಮ್ಸ್ 2026: ಶೂಟಿಂಗ್‌ನಲ್ಲಿ ಭಾರತಕ್ಕೆ ಚಿನ್ನದ ಸಂಭ್ರಮ; ದಕ್ಷಿಣ ಕೊರಿಯಾ ವಿರುದ್ಧ ಭರ್ಜರಿ ಜಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಜಪಾನ್‌ನಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನ ಶೂಟಿಂಗ್ ಅಖಾಡದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿದೆ. ಇಡೀ ದೇಶವೇ ಕಾತರದಿಂದ ಕಾಯುತ್ತಿದ್ದ ಶೂಟಿಂಗ್ ವಿಭಾಗದ ಮೊದಲ ಚಿನ್ನದ ಪದಕವನ್ನು ಭಾರತದ ಯುವ ಶೂಟರ್‌ಗಳಾದ ಕಮಲ್‌ಜೀತ್ ಮತ್ತು ಸುರುಚಿ ಇಂದರ್ ಸಿಂಗ್ ಜಂಟಿಯಾಗಿ ಮುಡಿಗೇರಿಸಿಕೊಂಡಿದ್ದಾರೆ.

ಏಷ್ಯನ್ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆ

10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದ ಫೈನಲ್ ಪಂದ್ಯದಲ್ಲಿ ಗುರಿ ಕಡೆಗೆ ಕಣ್ಣಿಟ್ಟ ಈ ಜೋಡಿಯು ಬರೋಬ್ಬರಿ 484.6 ಅಂಕಗಳನ್ನು ಕಲೆಹಾಕಿ ದಕ್ಷಿಣ ಕೊರಿಯಾ (478.0 ಅಂಕ) ತಂಡವನ್ನು ಮಣಿಸಿತು. ಈ ಮೂಲಕ ಈ ವರ್ಷದ ಆರಂಭದಲ್ಲಿ ನವದೆಹಲಿಯಲ್ಲಿ ಉಜ್ಬೇಕಿಸ್ತಾನ್ ಬರೆದಿದ್ದ (481.3 ಅಂಕ) ಏಷ್ಯನ್ ದಾಖಲೆಯನ್ನು ಸಂಪೂರ್ಣವಾಗಿ ಧೂಳೀಪಟ ಮಾಡಿದೆ. ಪಂದ್ಯದ ಕೊನೆಯ ಹಂತದಲ್ಲಿ ದಕ್ಷಿಣ ಕೊರಿಯಾ ಭರ್ಜರಿ ಪೈಪೋಟಿ ನೀಡಿದರೂ ತಾಳ್ಮೆ ಕಳೆದುಕೊಳ್ಳದ ಭಾರತದ ಜೋಡಿ, ಜಾಗತಿಕ ವಿಶ್ವ ದಾಖಲೆಗಿಂತ ಕೇವಲ 4 ಅಂಕಗಳಷ್ಟೇ ಹಿಂದಿನ ಸ್ಕೋರ್‌ನೊಂದಿಗೆ ಚಿನ್ನದ ಪದಕವನ್ನು ಪಡೆದಿದೆ. ಈ ಪಂದ್ಯದಲ್ಲಿ ಇರಾನ್ ಕಂಚಿನ ಪದಕಕ್ಕೆ ತೃಪ್ತಿಪಟ್ಟಿತು.

ಶೂಟಿಂಗ್‌ನಲ್ಲಿ ಬೆಳ್ಳಿಯ ಪದಕ

ಇದೇ ವೇಳೆ ಶೂಟಿಂಗ್‌ನ ಮತ್ತೊಂದು ವಿಭಾಗದಲ್ಲೂ ಭಾರತಕ್ಕೆ ಯಶಸ್ಸು ಸಿಕ್ಕಿದೆ. ಪುರುಷರ 50 ಮೀಟರ್ ರೈಫಲ್ 3 ಪೊಸಿಷನ್ಸ್ ತಂಡ ವಿಭಾಗದಲ್ಲಿ ಐಶ್ವರ್ಯ್ ಪ್ರತಾಪ್ ಸಿಂಗ್ ತೋಮರ್, ರುದ್ರಾಕ್ಷ್ ಪಾಟೀಲ್ ಮತ್ತು ನೀರಜ್ ಕುಮಾರ್ ಅವರನ್ನೊಳಗೊಂಡ ಭಾರತ ತಂಡ ಅದ್ಭುತ ಹೋರಾಟ ನಡೆಸಿ ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿದೆ.

ಮಲ್ಲಿಕಾರ್ಜುನ ಖರ್ಗೆ ಶುಭ ಹಾರೈಕೆ

ಭಾರತಕ್ಕೆ ಬಂಗಾರದ ಪದಕ ತಂದುಕೊಟ್ಟ ಕಮಲ್‌ಜೀತ್ ಮತ್ತು ಸುರುಚಿ ಸಿಂಗ್ ಜೋಡಿಯನ್ನು ಮಲ್ಲಿಕಾರ್ಜುನ ಖರ್ಗೆ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ʼನಿಮ್ಮ ಈ ಅದ್ಭುತ ಗೆಲುವು ಇಡೀ ದೇಶವೇ ಹೆಮ್ಮೆಪಡುವಂತೆ ಮಾಡಿದೆ. ನಿಮ್ಮಿಬ್ಬರ ಭವಿಷ್ಯವು ಉಜ್ವಲವಾಗಿರಲಿ ಮತ್ತು ಮುಂಬರುವ ದಿನಗಳಲ್ಲಿ ದೇಶಕ್ಕಾಗಿ ಇನ್ನೂ ಹೆಚ್ಚಿನ ಸಾಧನೆಗಳನ್ನು ಮಾಡುವಂತಾಗಲಿ’ ಎಂದು ಶುಭ ಹಾರೈಸಿದ್ದಾರೆ.

ಇದನ್ನೂ ಓದಿ:

ಭಾರತದ ಒಟ್ಟು ಪದಕಗಳ ಸಂಖ್ಯೆ 19ಕ್ಕೆ ಏರಿಕೆ

ಈ ಸುವರ್ಣ ಪದಕದೊಂದಿಗೆ ಪ್ರಸಕ್ತ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಒಟ್ಟು ಪದಕಗಳ ಸಂಖ್ಯೆ 19ಕ್ಕೆ ತಲುಪಿದೆ. ಇದರಲ್ಲಿ ಭಾರತ 2 ಚಿನ್ನ, 8 ಬೆಳ್ಳಿ ಮತ್ತು 9 ಕಂಚಿನ ಪದಕಗಳನ್ನು ತನ್ನದಾಗಿಸಿಕೊಂಡಿದೆ.

Must Read