September 25, 2026
Friday, September 25, 2026
spot_img

‘ಸಿದ್ದರಾಮಯ್ಯ ಕ್ಯಾಪ್ಟನ್, ನಾನು ವೈಸ್ ಕ್ಯಾಪ್ಟನ್’: ನಮ್ಮ ನಡುವೆ ಯಾವುದೇ ಗೊಂದಲವಿಲ್ಲ ಎಂದ ಸತೀಶ್ ಜಾರಕಿಹೊಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರದಿಂದ ಕೆಳಗಿಳಿದ ನಂತರ ಅವರ ಅತ್ಯಾಪ್ತ ವಲಯದಲ್ಲಿದ್ದ ಸಚಿವ ಸತೀಶ್ ಜಾರಕಿಹೊಳಿ ಅವರು ಅಂತರ ಕಾಯ್ದುಕೊಂಡಿದ್ದಾರೆ ಎಂಬ ರಾಜಕೀಯ ವದಂತಿಗಳು ಇತ್ತೀಚೆಗೆ ಭಾರೀ ಸದ್ದು ಮಾಡಿದ್ದವು. ಈ ಎಲ್ಲಾ ರಾಜಕೀಯ ಊಹಾಪೋಹಗಳಿಗೆ ಮೈಸೂರಿನಲ್ಲಿ ಸ್ವತಃ ಸತೀಶ್ ಜಾರಕಿಹೊಳಿ ಅವರೇ ತೆರೆ ಎಳೆದಿದ್ದಾರೆ.

ದೂರದ ಬೆಟ್ಟ ನುಣ್ಣಗೆ ಅಷ್ಟೇ

ತಮ್ಮ ಮತ್ತು ಮಾಜಿ ಸಿಎಂ ಬಾಂಧವ್ಯದ ಕುರಿತು ಕ್ರಿಕೆಟ್ ಶೈಲಿಯಲ್ಲಿ ಉತ್ತರಿಸಿದ ಸಚಿವರು, ʼಸಿದ್ದರಾಮಯ್ಯ ಅವರು ನಮ್ಮ ತಂಡದ ಕ್ಯಾಪ್ಟನ್ ಇದ್ದಂತೆ, ನಾನು ವೈಸ್ ಕ್ಯಾಪ್ಟನ್. ಇಬ್ಬರೂ ಒಗ್ಗಟ್ಟಿನಿಂದ ಇದ್ದೇವೆ. ಆದರೆ ಹೊರಗಿನ ಜನರಿಗೆ ಮತ್ತು ರಾಜಕೀಯ ವಲಯಕ್ಕೆ ಇದು ಹೇಗೆ ಕಾಣಿಸುತ್ತದೆಯೋ ನಮಗೆ ಗೊತ್ತಿಲ್ಲ. ದೂರದ ಬೆಟ್ಟ ನುಣ್ಣಗೆ ಎನ್ನುವಂತೆ ಹೊರಗಿನವರಿಗೆ ನಾವಿಬ್ಬರು ದೂರವಾಗಿದ್ದೇವೆ ಎನಿಸುತ್ತಿರಬಹುದು. ಇತ್ತೀಚೆಗೆ ಇಡಿ (ED) ದಾಳಿಯಾದ ಸಂದರ್ಭದಲ್ಲೂ ಯತೀಂದ್ರ ಸಿದ್ದರಾಮಯ್ಯ ಅವರು ನನ್ನನ್ನು ಭೇಟಿಯಾಗಿದ್ದರು. ಸಿದ್ದರಾಮಯ್ಯ ಅವರ ಬೆನ್ನಿಗೆ ಸದಾ ಒಂದು ಬಲಿಷ್ಠ ಆಪ್ತ ಸೈನ್ಯ ನಿಲ್ಲಲಿದೆʼ ಎಂದು ಹೇಳಿದ್ದಾರೆ.

ಬಿಜೆಪಿ ವಿರುದ್ಧ ಆರೋಪ

ಇತ್ತೀಚೆಗೆ ತಮ್ಮ ಮೇಲೆ ನಡೆದ ಇಡಿ ದಾಳಿಯ ಕುರಿತು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಜಾರಕಿಹೊಳಿ, ಕೇಂದ್ರ ಸರ್ಕಾರದ ಯಾವುದೇ ಯೋಜನೆಯಲ್ಲೂ ನಾನು ಒಂದು ರೂ. ಕಮಿಷನ್ ಪಡೆದಿಲ್ಲ. ಯಾರಾದರೂ ತಪ್ಪು ಮಾಡಿದ್ದಾರೆ ಎನ್ನಲು ಸೂಕ್ತ ದಾಖಲೆಗಳಿರಬೇಕು. ನನ್ನ ಮೇಲೇಕೆ ಈ ದಾಳಿ ನಡೆಯಿತು ಎಂಬುದನ್ನು ಅರಿಯಲು ಸ್ವಲ್ಪ ಸಮಯ ಬೇಕಿದೆ. ಆದರೆ ಕಳೆದ 12 ವರ್ಷಗಳಲ್ಲಿ ಬಿಜೆಪಿಯ ಯಾವೊಬ್ಬ ನಾಯಕನ ಮನೆಯ ಮೇಲೆಯೂ ಇಡಿ ಅಧಿಕಾರಿಗಳು ದಾಳಿ ನಡೆಸಿಲ್ಲ. ಅವರ ವಿರುದ್ಧ ಸಾಲು ಸಾಲು ದೂರುಗಳಿದ್ದರೂ ತನಿಖಾ ಸಂಸ್ಥೆಗಳು ಕಣ್ಣು ಮುಚ್ಚಿ ಕುಳಿತುಕೊಳ್ಳುತ್ತವೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ:

ಇನ್ನು ತನಿಖೆಗೆ ಸಹಕರಿಸುವ ಬಗ್ಗೆ ಮಾತನಾಡುತ್ತಾ, ಅಧಿಕಾರಿಗಳು ಇದುವರೆಗೆ ಯಾವುದೇ ಅಧಿಕೃತ ನೋಟಿಸ್ ನೀಡಿಲ್ಲ, ಒಂದು ವೇಳೆ ನೋಟಿಸ್ ನೀಡಿದರೆ ಖುದ್ದಾಗಿ ಹೋಗಿ ಸೂಕ್ತ ಉತ್ತರ ನೀಡುವುದಾಗಿ ತಿಳಿಸಿದ್ದಾರೆ.

Must Read