September 27, 2026
Sunday, September 27, 2026
spot_img

ಕೇರಳಂ ತಿರುವೋಣಂ ಬಂಪರ್: ಕಣ್ಣೂರು ಜಿಲ್ಲೆಯಲ್ಲಿ ಮಾರಾಟವಾದ ಟಿಕೆಟ್ ಗೆ 30 ಕೋಟಿ ರೂ. ಪ್ರಥಮ ಬಹುಮಾನ!

ಹೊಸದಿಗಂತ ಡಿಜಿಟಲ್ ಡೆಸ್ಕ್:


ಕೇರಳಂ ಸರ್ಕಾರದ 2026ರ ತಿರುವೋಣಂ ಬಂಪರ್ ಲಾಟರಿಯ 30 ಕೋಟಿ ರೂ. ಪ್ರಥಮ ಬಹುಮಾನ ವಿಜೇತರ ಘೋಷಣೆಯಾಗಿದೆ.


ಕಣ್ಣೂರು ಜಿಲ್ಲೆಯ ಚಕ್ಕರಕ್ಕಲ್‌ನಲ್ಲಿರುವ ಲಾಟರಿ ಏಜೆನ್ಸಿ ಮೂಲಕ ಮಾರಾಟವಾದ TL 360615 ಸಂಖ್ಯೆಯ ಟಿಕೆಟ್‌ಗೆ 30 ಕೋಟಿ ರೂ. ಲಭಿಸಿದೆ. ಶನಿವಾರ ತಿರುವನಂತಪುರದ ಗೋರ್ಕಿ ಭವನದಲ್ಲಿ ನಡೆದ ತಿರುವೋಣಂ ಬಂಪರ್ ಲಾಟರಿ ಡ್ರಾದಲ್ಲಿ ವಿಜೇತ ಸಂಖ್ಯೆಯನ್ನು ಪ್ರಕಟಿಸಲಾಯಿತು. ಈ ಬಾರಿಯ ತಿರುವೋಣಂ ಬಂಪರ್ ಲಾಟರಿಯಲ್ಲಿ ಒಟ್ಟು 90 ಲಕ್ಷ ಟಿಕೆಟ್‌ಗಳನ್ನು ಮುದ್ರಿಸಲಾಗಿದ್ದು, ಎಲ್ಲ ಟಿಕೆಟ್‌ಗಳೂ ಮಾರಾಟವಾಗಿದ್ದವು. ಪ್ರತಿ ಟಿಕೆಟ್‌ನ ಬೆಲೆ 500 ರೂ. ಆಗಿತ್ತು. 30 ರೂ. ಕೋಟಿ ಪ್ರಥಮ ಬಹುಮಾನ ಈ ಬಾರಿಯ ಲಾಟರಿಯ ಪ್ರಮುಖ ಆಕರ್ಷಣೆಯಾಗಿತ್ತು.


ತಿರುವೋಣಂ ಬಂಪರ್‌ನಲ್ಲಿ 20 ಮಂದಿಗೆ ತಲಾ 1 ಕೋಟಿ ರೂ. ದ್ವಿತೀಯ ಬಹುಮಾನ, 20 ಮಂದಿಗೆ ತಲಾ 25 ರೂ. ಲಕ್ಷ ತೃತೀಯ ಬಹುಮಾನ ಸೇರಿದಂತೆ ಹಲವು ಹಂತಗಳಲ್ಲಿ ಬಹುಮಾನಗಳನ್ನು ಘೋಷಿಸಲಾಗಿದೆ. ಒಟ್ಟು ಬಹುಮಾನ ಮೊತ್ತ 125.54 ಕೋಟಿ ರೂ. ಎಂದು ಲಾಟರಿ ಇಲಾಖೆ ತಿಳಿಸಿದೆ.


ಪ್ರಥಮ ಬಹುಮಾನ ಪಡೆದ ಟಿಕೆಟ್‌ದಾರರು ಲಾಟರಿ ಇಲಾಖೆಯ ನಿಯಮಾನುಸಾರ ಮೂಲ ಟಿಕೆಟ್ ಹಾಗೂ ಅಗತ್ಯ ಗುರುತಿನ ದಾಖಲೆಗಳೊಂದಿಗೆ ಬಹುಮಾನ ಮೊತ್ತವನ್ನು ಕ್ಲೇಮ್ ಮಾಡಬೇಕಾಗುತ್ತದೆ. ಬಹುಮಾನ ಮೊತ್ತಕ್ಕೆ ಅನ್ವಯವಾಗುವ ತೆರಿಗೆ ಹಾಗೂ ಇತರ ಕಡಿತಗಳ ಬಳಿಕ ವಿಜೇತರಿಗೆ ಹಣ ಪಾವತಿಯಾಗಲಿದೆ.
ಈ ನಡುವೆ, ಬಹುಮಾನ ಗೆದ್ದಿರುವ ವ್ಯಕ್ತಿ ಯಾರು ಎಂಬುದು ಇನ್ನೂ ಬಹಿರಂಗವಾಗಿಲ್ಲ. ವಿಜೇತರು ಅಧಿಕೃತವಾಗಿ ಟಿಕೆಟ್ ಸಲ್ಲಿಸಿದ ಬಳಿಕವೇ ಅವರ ಗುರುತು ಮತ್ತು ಹೆಚ್ಚಿನ ವಿವರಗಳು ಲಭ್ಯವಾಗುವ ಸಾಧ್ಯತೆಯಿದೆ.

Must Read