September 26, 2026
Saturday, September 26, 2026
spot_img

ಕೇರಳಂ ಕರಾವಳಿಗೆ ‘ಕಳ್ಳಕ್ಕಡಲ್’ ಭೀತಿ: ಸೆ.28ರವರೆಗೆ ರೆಡ್ ಅಲರ್ಟ್, ತೀರ ಪ್ರದೇಶಗಲ್ಲಿ ವ್ಯಾಪಕ ಕಟ್ಟೆಚ್ಚರ

ಹೊಸದಿಗಂತ ಡಿಜಿಟಲ್ ಡೆಸ್ಕ್:


ಕಳ್ಳಕ್ಕಡಲ್ ಹಾಗೂ ಎತ್ತರದ ಅಲೆಗಳ ಸಾಧ್ಯತೆ ಹಿನ್ನೆಲೆಯಲ್ಲಿ ಕೇರಳಂ ವ್ಯಾಪ್ತಿಯ ಎಲ್ಲಾ ಕಡಲತೀರಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಸೇವಾ ಕೇಂದ್ರ ನೀಡಿರುವ ಮುನ್ನೆಚ್ಚರಿಕೆಯಲ್ಲಿ ಸೆಪ್ಟೆಂಬರ್ 26ರ ಮುಂಜಾನೆ 2.30ರಿಂದ ಸೆಪ್ಟೆಂಬರ್ 28ರ ಮುಂಜಾನೆ 2.30ರವರೆಗೆ ಕೇರಳ ಕರಾವಳಿಯಲ್ಲಿ 1ರಿಂದ 1.5 ಮೀಟರ್‌ವರೆಗೆ ಎತ್ತರದ ಅಲೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಸಮುದ್ರದ ನೀರು ಏಕಾಏಕಿ ದಡದತ್ತ ನುಗ್ಗುವ ‘ಕಳ್ಳಕ್ಕಡಲ್’ ಪರಿಸ್ಥಿತಿಯೂ ಉಂಟಾಗಬಹುದು ಎಂದು ಹೇಳಲಾಗಿದೆ.

ಇದಲ್ಲದೆ ಕಡಲಿನ ಅಲೆಗಳ ತೀವ್ರತೆ ಹೆಚ್ಚಾದ ಸಂದರ್ಭದಲ್ಲಿ ತಗ್ಗು ಪ್ರದೇಶಗಳಿಗೆ ಸಮುದ್ರದ ನೀರು ನುಗ್ಗುವ ಹಾಗೂ ಕರಾವಳಿ ಕೊರೆತ ಉಂಟಾಗುವ ಸಾಧ್ಯತೆಯಿದೆ ಎಂದು ಕೂಡಾ ಎಚ್ಚರಿಕೆ ನೀಡಲಾಗಿದೆ. ಹೀಗಾಗಿ ಕರಾವಳಿ ಪ್ರದೇಶಗಳಲ್ಲಿರುವವರು ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ತಿರುವನಂತಪುರಂನ ಕಪ್ಪಿಲ್‌ನಿಂದ ಪೊಝಿಯೂರ್, ಕೊಲ್ಲಂನ ಅಲಪ್ಪಾಡ್‌ನಿಂದ ಎಡವಾ, ಆಲಪ್ಪುಳದ ಚೆಲ್ಲಾನಂನಿಂದ ಅಝಿಕ್ಕಲ್ ಜೆಟ್ಟಿ, ಎರ್ನಾಕುಲಂನ ಮುನಂಬಂನಿಂದ ಮರುವಕ್ಕಾಡ್, ಮಲಪ್ಪುರಂನ ಕಡಲೂಂಡಿ ನಗರಂನಿಂದ ಪಾಲಪ್ಪೆಟ್ಟಿ, ಕೋಝಿಕ್ಕೋಡ್‌ನ ಚೋಂಬಾಲದಿಂದ ರಾಮನಟ್ಟಕರ, ಕಣ್ಣೂರಿನ ವಳಪಟ್ಟಣಂನಿಂದ ನ್ಯೂ ಮಾಹೆ ಹಾಗೂ ಕಾಸರಗೋಡಿನ ಕುಂಜತ್ತೂರುನಿಂದ ಕೊಟ್ಟಕ್ಕುನ್ನುವರೆಗಿನ ಕರಾವಳಿ ಪ್ರದೇಶಗಳಲ್ಲಿ ವಿಶೇಷ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ಮೀನುಗಾರರು ಸಮುದ್ರಕ್ಕೆ ಸಣ್ಣ ದೋಣಿಗಳು ಹಾಗೂ ಮೀನುಗಾರಿಕಾ ದೋಣಿಗಳನ್ನು ಇಳಿಸುವುದನ್ನು ತಪ್ಪಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಅಲೆಗಳ ತೀವ್ರತೆ ಹೆಚ್ಚಾದ ಸಂದರ್ಭದಲ್ಲಿ ದೋಣಿಗಳನ್ನು ದಡಕ್ಕೆ ತರುವ ಪ್ರಯತ್ನವೂ ಅಪಾಯಕಾರಿಯಾಗಬಹುದು ಎಂದು ಎಚ್ಚರಿಸಲಾಗಿದೆ. ಈ ಅವಧಿಯಲ್ಲಿ ಬೀಚ್ ಪ್ರವಾಸ, ಮನರಂಜನಾ ಚಟುವಟಿಕೆಗಳು ಹಾಗೂ ಸಮುದ್ರದ ಸಮೀಪದ ಇತರ ಚಟುವಟಿಕೆಗಳನ್ನು ಕೈಗೊಳ್ಳದಂತೆ ಸಾರ್ವಜನಿಕರಿಗೆ ಸೂಚನೆ ನೀಡಲಾಗಿದೆ. ಅಪಾಯದ ಸಾಧ್ಯತೆ ಇರುವ ತಗ್ಗು ಪ್ರದೇಶಗಳ ನಿವಾಸಿಗಳು ಅಧಿಕಾರಿಗಳ ಸೂಚನೆಯಂತೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ತಿಳಿಸಲಾಗಿದೆ. ಕೇರಳದ ಜತೆಗೆ ತಮಿಳುನಾಡಿನ ಕನ್ಯಾಕುಮಾರಿ, ರಾಮನಾಥಪುರಂ, ತಿರುನೆಲ್ವೇಲಿ ಜಿಲ್ಲೆಗಳ ಕರಾವಳಿ ಹಾಗೂ ಲಕ್ಷದ್ವೀಪ ಪ್ರದೇಶಕ್ಕೂ ಇದೇ ರೀತಿಯ ಅಲೆಗಳ ಎಚ್ಚರಿಕೆ ನೀಡಲಾಗಿದೆ.

ಏನಿದು ಕಳ್ಳಕ್ಕಡಲ್?

ಸಮುದ್ರದಲ್ಲಿ ಉಂಟಾಗುವ ದೀರ್ಘಾವಧಿಯ ಅಲೆಗಳ ಪರಿಣಾಮವಾಗಿ ಕರಾವಳಿಯಲ್ಲಿ ಯಾವುದೇ ಮುನ್ಸೂಚನೆಯಿಲ್ಲದೆ ಸಮುದ್ರದ ನೀರು ಏಕಾಏಕಿ ದಡದತ್ತ ನುಗ್ಗಿ, ಎತ್ತರದ ಹಾಗೂ ಬಿರುಸಾದ ಅಲೆಗಳು ಕಾಣಿಸಿಕೊಳ್ಳುವ ವಿದ್ಯಮಾನವನ್ನು ಕಳ್ಳಕ್ಕಡಲ್ ಅಥವಾ Swell Surge ಎಂದು ಕರೆಯಲಾಗುತ್ತದೆ.

Must Read