ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಂವಿಧಾನಿಕ ಸಂಸ್ಥೆಗಳ ವಿಶ್ವಾಸಾರ್ಹತೆಯನ್ನು ಕೆಡಿಸಿ ರಾಜಕೀಯ ಲಾಭ ಮಾಡಿಕೊಳ್ಳಲು ವಿರೋಧ ಪಕ್ಷಗಳು ನಿರಂತರವಾಗಿ ಸಂಚು ರೂಪಿಸುತ್ತಿವೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗಂಭೀರ ಆರೋಪ ಮಾಡಿದ್ದಾರೆ.
ಲಕ್ನೋದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳ ನಿಲುವನ್ನು ತೀವ್ರವಾಗಿ ಖಂಡಿಸಿದರು.
ಚುನಾವಣೆಯಲ್ಲಿ ಗೆದ್ದರೆ ತಮ್ಮ ಶ್ರಮ, ಸೋತರೆ ಇವಿಎಂ ತಪ್ಪೇ?
ಚುನಾವಣಾ ವ್ಯವಸ್ಥೆಯನ್ನು ಪದೇ ಪದೇ ಸಂಶಯದಿಂದ ನೋಡುವ ವಿರೋಧ ಪಕ್ಷಗಳ ಪ್ರವೃತ್ತಿಯನ್ನು ಟೀಕಿಸಿದ ಸಿಎಂ ಯೋಗಿ, ‘ಚುನಾವಣೆಯಲ್ಲಿ ಕಾಂಗ್ರೆಸ್, ಸಮಾಜವಾದಿ ಪಕ್ಷ ಅಥವಾ ಆರ್ಜೆಡಿ ಗೆಲುವು ಸಾಧಿಸಿದರೆ ಅದು ತಮ್ಮ ಸ್ವಂತ ಪರಿಶ್ರಮ ಎನ್ನುತ್ತಾರೆ. ಅದೇ ಭ್ರಷ್ಟಾಚಾರ ಮತ್ತು ತಪ್ಪು ನೀತಿಗಳಿಗಾಗಿ ಜನರು ಅವರನ್ನು ತಿರಸ್ಕರಿಸಿದರೆ ಇವಿಎಂ ಅಥವಾ ಚುನಾವಣಾ ಆಯೋಗದ ಮೇಲೆ ಗೂಬೆ ಕೂರಿಸುತ್ತಾರೆ. ಈ ಪಕ್ಷಗಳು ಒಮ್ಮೆಯಾದರೂ ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದು ಕಟುವಾಗಿ ಹೇಳಿದರು. ಇದೇ ಇವಿಎಂ ವ್ಯವಸ್ಥೆಯಡಿಯಲ್ಲಿ ಕಾಂಗ್ರೆಸ್ ಕೇಂದ್ರದಲ್ಲಿ ಮತ್ತು ಹಲವು ರಾಜ್ಯಗಳಲ್ಲಿ ಸರ್ಕಾರ ರಚಿಸಿರುವುದನ್ನು ಅವರು ನೆನಪಿಸಿದರು.
SIR ಕುರಿತು ಅನಗತ್ಯ ಗೊಂದಲ ಸೃಷ್ಟಿಸಲು ಯತ್ನ
SIR ಪರಿಷ್ಕರಣೆ ಪ್ರಕ್ರಿಯೆಯ ಕುರಿತು ದೇಶದಲ್ಲಿ ಅನಗತ್ಯ ಗೊಂದಲ ಸೃಷ್ಟಿಸಲಾಗುತ್ತಿದೆ ಎಂದ ಯೋಗಿ, ಕಾಂಗ್ರೆಸ್ ಆಡಳಿತಾವಧಿಯಲ್ಲೇ 1952, 1957, 1961, 1965-66 ಮತ್ತು 2003 ರಲ್ಲಿ ಇಂತಹ ಹಲವು ವಿಶೇಷ ತೀವ್ರ ಪರಿಷ್ಕರಣೆಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ಇದರ ಜೊತೆಗೆ, 1975 ರ ಜೂನ್ 25 ರಂದು ದೇಶದ ಸಂವಿಧಾನದ ಗಂಟಲು ಹಿಸುಕಿ ತುರ್ತು ಪರಿಸ್ಥಿತಿ ಹೇರಿದ ಹಾಗೂ ರಾಜ್ಯಗಳಲ್ಲಿ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರ್ಕಾರಗಳನ್ನು ಕಾನೂನುಬಾಹಿರವಾಗಿ ಉರುಳಿಸಿದ ಇತಿಹಾಸ ಕಾಂಗ್ರೆಸ್ಸಿಗಿದೆ ಎಂದು ವಾಗ್ದಾಳಿ ನಡೆಸಿದರು.
ಸೇನೆಯ ಶೌರ್ಯ ಪ್ರಶ್ನಿಸುವವರ ದೇಶಭಕ್ತಿ ಎಂಥದ್ದು?
ವಿರೋಧ ಪಕ್ಷಗಳ ದೇಶಭಕ್ತಿಯನ್ನು ಪ್ರಶ್ನಿಸಿದ ಸಿಎಂ ಯೋಗಿ, ಬಾಲಾಕೋಟ್ ವೈಮಾನಿಕ ದಾಳಿ ಮತ್ತು ‘ಆಪರೇಷನ್ ಸಿಂಧೂರ್’ ನಂತಹ ಪ್ರಮುಖ ಮಿಲಿಟರಿ ಕಾರ್ಯಾಚರಣೆಗಳ ಸಂದರ್ಭದಲ್ಲಿ ಭಾರತೀಯ ಸೇನೆಯ ಶೌರ್ಯವನ್ನೇ ಪ್ರಶ್ನಿಸಿದ ಇತಿಹಾಸ ಇವರದ್ದಾಗಿದೆ. ವಿದೇಶಿ ನೆಲದಲ್ಲಿ ನಿಂತು ದೇಶದ ನ್ಯಾಯಾಂಗ ವ್ಯವಸ್ಥೆಯನ್ನು ಹಾಗೂ ಈ ಹಿಂದೆ ಸಿಎಜಿ ವರದಿಗಳನ್ನು ಸಂಶಯದಿಂದ ನೋಡಿದ ರಾಹುಲ್ ಗಾಂಧಿ ಅವರ ನಡೆಗಳನ್ನು ತೀವ್ರವಾಗಿ ಖಂಡಿಸಿದರು.
ಇದನ್ನೂ ಓದಿ:
ಚುನಾವಣಾ ಆಯೋಗವು ಈಗಾಗಲೇ ಸ್ಪಷ್ಟನೆ ನೀಡಿದ್ದು, ಮತದಾರರ ಪಟ್ಟಿಯಿಂದ ಹೊರಗುಳಿದಿರುವ ಪ್ರತಿಯೊಬ್ಬ ಅರ್ಹ ನಾಗರಿಕನಿಗೂ ಹೆಸರು ಸೇರಿಸಲು ಫಾರ್ಮ್-6 ಸಲ್ಲಿಸಲು ಸಂಪೂರ್ಣ ಅವಕಾಶ ಕಲ್ಪಿಸಲಾಗಿದೆ. ಸುಪ್ರೀಂ ಕೋರ್ಟ್ ಕೂಡ ಆಯೋಗದ ಕ್ರಮವನ್ನು ಎತ್ತಿಹಿಡಿದಿರುವುದರಿಂದ, ವಿನಾಕಾರಣ ಗಲಭೆ ಹಾಗೂ ಅಪಪ್ರಚಾರದಲ್ಲಿ ತೊಡಗಿರುವ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಜಂಟಿಯಾಗಿ ದೇಶದ ಸಾರ್ವಜನಿಕರ ಹಾಗೂ ಸಾಂವಿಧಾನಿಕ ಸಂಸ್ಥೆಗಳ ಕ್ಷಮೆಯಾಚಿಸಬೇಕು ಎಂದು ಯೋಗಿ ಆದಿತ್ಯನಾಥ್ ಆಗ್ರಹಿಸಿದರು.



