September 27, 2026
Sunday, September 27, 2026
spot_img

ಉದ್ಯೋಗಿಗಳ PFಗೆ ಹೊಸ ಲೆಕ್ಕಾಚಾರ: ನಿಮ್ಮ ಸಂಬಳ 25 ಸಾವಿರವೇ? ಹಾಗಾದರೆ PFನಲ್ಲಿ ಆಗಲಿದೆ ಈ ಬದಲಾವಣೆ!

ಹೊಸದಿಗಂತ ಡಿಜಿಟಲ್ ಡಿಸ್ಕ್:


ಉದ್ಯೋಗಿಗಳ ಭವಿಷ್ಯ ನಿಧಿ (EPF)ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಹತ್ವದ ಬದಲಾವಣೆ ಮಾಡಿದ್ದು, ಉದ್ಯೋಗಿಗಳ ಕಡ್ಡಾಯ EPF ವ್ಯಾಪ್ತಿಗೆ ಅನ್ವಯಿಸುವ ಮಾಸಿಕ ವೇತನ ಮಿತಿಯನ್ನು 15,000 ರೂ.ನಿಂದ 25,000ಕ್ಕೆ ಹೆಚ್ಚಿಸಲಾಗಿದೆ.


ಸೆ.17ರಿಂದ ಹೊಸ ನಿಯಮ ಜಾರಿಗೆ ಬಂದಿದ್ದು, ಇದರಿಂದ ಹೊಸದಾಗಿ ಹೆಚ್ಚಿನ ಸಂಖ್ಯೆಯ ಉದ್ಯೋಗಿಗಳು EPFO ವ್ಯಾಪ್ತಿಗೆ ಬರಲಿದ್ದಾರೆ. ಹೊಸ ಮಿತಿ ಅನ್ವಯಿಸಿದಾಗ, 25 ಸಾವಿರ ರೂ. ಮಾಸಿಕ ವೇತನ ಹೊಂದಿರುವ ಉದ್ಯೋಗಿಯ PF ಕೊಡುಗೆ ಲೆಕ್ಕದಲ್ಲೂ ಬದಲಾವಣೆ ಆಗಲಿದೆ. ಉದ್ಯೋಗಿಯ ಪಾಲಿನ 12% ಕೊಡುಗೆ 3 ಸಾವಿರ ರೂ. ಆಗಲಿದೆ. ಇದಕ್ಕೆ ಉದ್ಯೋಗದಾತರ EPF ಪಾಲಿನ 3.67% ಸೇರುತ್ತದೆ. ಹೀಗಾಗಿ ತಿಂಗಳಿಗೆ ಒಟ್ಟು 3,917 PF ಖಾತೆಗೆ ಸೇರುವಂತಾಗುತ್ತದೆ. ಈ ಮೊತ್ತ ಈ ಹಿಂದೆ 15,000 ವೇತನ ಮಿತಿಯ ಆಧಾರದ ಮೇಲೆ 1,800ರಷ್ಟಿತ್ತು. ಇದರ ಜೊತೆಗೆ ಉದ್ಯೋಗದಾತರ ಪಾಲಿನ 8.3% ಉದ್ಯೋಗಿಗಳ ಪಿಂಚಣಿ ಯೋಜನೆ (EPS)ಗೆ ಹೋಗಲಿದೆ. ಹಿಂದಿನ ಮಿತಿಯಲ್ಲಿ ಈ ಮೊತ್ತ 1,250 ರೂ. ಆಗಿತ್ತು.

ರೂ. 20,000 ವೇತನ ಇದ್ದರೆ ಲೆಕ್ಕ ಹೇಗಿರುತ್ತದೆ?

ತಿಂಗಳಿಗೆ 20,000 ರೂ. ವೇತನ ಪಡೆಯುವ ಉದ್ಯೋಗಿಗೆ ಕಡ್ಡಾಯ PF ಕೊಡುಗೆ 3,134 ಆಗಲಿದೆ. ಇದರಲ್ಲಿ ಉದ್ಯೋಗಿಯ ಪಾಲು 2,400 ಹಾಗೂ ಉದ್ಯೋಗದಾತರ EPF ಪಾಲು 734 ಆಗಿರುತ್ತದೆ. ಇದರ ಜೊತೆಗೆ ಉದ್ಯೋಗದಾತರ ಪಾಲಿನಿಂದ 1,666 EPSಗೆ ಹೋಗಲಿದೆ ಎಂದು ಸರ್ಕಾರದ FAQ ಆಧರಿಸಿ ವರದಿ ತಿಳಿಸಿದೆ.

ಹೆಚ್ಚುವರಿ ಉದ್ಯೋಗಿಗಳು EPFO ವ್ಯಾಪ್ತಿಗೆ

ವೇತನ ಮಿತಿಯನ್ನು 25,000ಕ್ಕೆ ಹೆಚ್ಚಿಸುವ ನಿರ್ಧಾರದಿಂದ ಹೆಚ್ಚಿನ ಸಂಖ್ಯೆಯ ಉದ್ಯೋಗಿಗಳು ಕಡ್ಡಾಯ EPFO ವ್ಯಾಪ್ತಿಗೆ ಬರಲಿದ್ದಾರೆ. ಕೇಂದ್ರ ಸರ್ಕಾರದ ಪ್ರಕಟಣೆಯ ಪ್ರಕಾರ, ಈ ಬದಲಾವಣೆಯಿಂದ 51 ಲಕ್ಷಕ್ಕೂ ಹೆಚ್ಚು ಹೆಚ್ಚುವರಿ ಉದ್ಯೋಗಿಗಳು ಕಡ್ಡಾಯ EPFO ವ್ಯಾಪ್ತಿಗೆ ಬರುವ ನಿರೀಕ್ಷೆ ಇದೆ. ಕನಿಷ್ಠ ವೇತನಗಳು ಈಗಾಗಲೇ 15,000 ಮಿತಿಯನ್ನು ಮೀರಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಹಿನ್ನೆಲೆಯಲ್ಲಿ ಈ ಬದಲಾವಣೆ ಮಾಡಲಾಗಿದೆ. ಕರ್ನಾಟಕ ಸೇರಿದಂತೆ ದೆಹಲಿ, ಮಹಾರಾಷ್ಟ್ರ, ಹರಿಯಾಣ, ಗುಜರಾತ್, ರಾಜಸ್ಥಾನ ಮತ್ತು ಉತ್ತರಾಖಂಡಗಳಲ್ಲಿ ಕನಿಷ್ಠ ವೇತನದ ಮಟ್ಟವು 15,000ಕ್ಕಿಂತ ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ.

ಹೊಸ ವ್ಯವಸ್ಥೆ ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ ಉದ್ಯೋಗದಾತರು ತಮ್ಮ ವೇತನ ವ್ಯವಸ್ಥೆ ಹಾಗೂ ಗುತ್ತಿಗೆ ಕಾರ್ಮಿಕರಿಗೆ ಸಂಬಂಧಿಸಿದ EPFO ಅನುಸರಣೆಗಳನ್ನು ಪರಿಶೀಲಿಸುವಂತೆ ಸೂಚಿಸಲಾಗಿದೆ. ವೇತನದಾರರ PF ಕಡಿತದ ಬಗ್ಗೆ ಗೊಂದಲ ಬೇಡ ಎಂದಿರುವ EPFO, ಉದ್ಯೋಗದಾತರ ಕಡ್ಡಾಯ ಕೊಡುಗೆಯನ್ನು ಕೇವಲ CTCಯ ಭಾಗವೆಂದು ಹೆಸರಿಸಿ ಉದ್ಯೋಗಿಯ ವೇತನದಿಂದ ಕಡಿತಗೊಳಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

Must Read