ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಡಹಬ್ಬ ದಸರಾ ಮಹೋತ್ಸವಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಯುವ ಪೀಳಿಗೆಯ ಪ್ರತಿಭೆಯನ್ನು ಪ್ರದರ್ಶಿಸುವ ಯುವ ದಸರಾ ಕಾರ್ಯಕ್ರಮ ಇಂದಿನಿಂದ ಆರಂಭವಾಗಲಿದ್ದು, ಸ್ಯಾಂಡಲ್ವುಡ್ ತಾರೆಯರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಇಂದು ಸಂಜೆ 4.30ಕ್ಕೆ ಮಾನಸಗಂಗೋತ್ರಿ ಬಯಲುಮಂದಿರದಲ್ಲಿ ಕಾರ್ಯಕ್ರಮ ಆರಂಭವಾಗಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ನಟಿ ಸಪ್ತಮಿ ಗೌಡ ಹಾಗೂ ಗಾಯಕ ವಿಜಯ್ ಪ್ರಕಾಶ್ ಭಾಗಿಯಾಗಲಿದ್ದಾರೆ. ಜೊತೆಗೆ ಹಲವು ಜನಪ್ರತಿನಿಧಿಗಳು, ರಾಜಕಾರಣಿಗಳು ಹಾಗೂ ಗಣ್ಯವ್ಯಕ್ತಿಗಳು ಭಾಗಿಯಾಗಲಿದ್ದಾರೆ.
ಮಾನಸಗಂಗೋತ್ರಿ ಬಯಲು ಮಂದಿರದಲ್ಲಿ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬರೋಬ್ಬರಿ 350ಕ್ಕೂ ಹೆಚ್ಚು ಕಾಲೇಜಿನ 14 ಸಾವಿರ ವಿದ್ಯಾರ್ಥಿಗಳು ನೃತ್ಯ, ಜಾನಪದ ನೃತ್ಯ, ಅಭಿನಯದ ಮೂಲಕ ಜನರನ್ನು ರಂಜಿಸಲಿದ್ದಾರೆ. ರಾಜ್ಯದ ಜಾನಪದ ನೃತ್ಯಗಳು, ಜಿಲ್ಲಾ ಕೇಂದ್ರಿತ ಪ್ರಸಿದ್ದ ನೃತ್ಯ ಪ್ರಕಾರಗಳು, ಕನ್ನಡ ಸಿನಿಮಾ ಆಧಾರಿತ ಆಧುನಿಕ ನೃತ್ಯಗಳು, ಸಾಹಿತ್ಯ, ದೇಶಭಕ್ತಿ, ಮಹಿಳಾ ಸಬಲೀಕರಣ, ಪರಿಸರ – ಅರಣ್ಯ, ಆಡಳಿತ, ಸಾಮಾಜಿಕ ನ್ಯಾಯ, ವಿಜ್ಞಾನ-ತಂತ್ರಜ್ಞಾನ, ಇತಿಹಾಸ-ಪುರಾಣ, ಅಂಗವಿಕಲರ ಯಶೋಗಾಥೆಗಳು, ಶಿಕ್ಷಣ, ಕ್ರೀಡೆ, ಜನಕೇಂದ್ರಿತ, ಆರೋಗ್ಯ ಹೀಗೆ ನಿರ್ದಿಷ್ಟ ಥೀಮ್ ಆಧಾರಿತ ನೃತ್ಯರೂಪಕಗಳನ್ನು ವಿದ್ಯಾರ್ಥಿಗಳು ಪ್ರಸ್ತುತಪಡಿಸಲಿದ್ದಾರೆ.
ಇನ್ನು ಸಂಜೆ ನಾಲ್ಕು ಗಂಟೆಯಿಂದ 10.30ರವರೆಗೆ ವಿದ್ಯಾರ್ಥಿಗಳ ನೃತ್ಯ ಪ್ರದರ್ಶನ ಇರುತ್ತದೆ. ಆಯ್ದ ತಂಡಗಳಲ್ಲಿ ನವರಾತ್ರಿ ಸಂದರ್ಭದಲ್ಲಿ ನಡೆಯುವ ದಸರಾ ವೇದಿಕೆಯಲ್ಲಿಯೂ ಪ್ರದರ್ಶನ ನೀಡಲು ಅವಕಾಶ ನೀಡಲಾಗುತ್ತದೆ. ಮೈಸೂರು, ಮಂಡ್ಯ, ಕೊಡಗು, ಮಂಗಳೂರು, ಶಿವಮೊಗ್ಗ, ಹಾಸನ ಹಾಗೂ ಇನ್ನಿತರ ಜಿಲ್ಲೆಯ ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.



