September 28, 2026
Monday, September 28, 2026
spot_img

ಕೊಹ್ಲಿಗೆ ಸಲಹೆ ಕೊಡುವಷ್ಟು ದೊಡ್ಡವ ನಾನಲ್ಲ! ಕಿಂಗ್ ಆಟಕ್ಕೆ ಮಾರುಹೋದ ಕ್ಯಾಪ್ಟನ್ ಗಿಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಿರುವನಂತಪುರದ ಗ್ರೀನ್‌ಫೀಲ್ಡ್ ಕ್ರೀಡಾಂಗಣದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡ ಆಲ್ ರೌಂಡ್ ಪ್ರದರ್ಶನ ನೀಡುವ ಮೂಲಕ 8 ವಿಕೆಟ್‌ಗಳ ರೋಚಕ ಗೆಲುವು ದಾಖಲಿಸಿದೆ. ನಾಯಕ ಶುಭ್‌ಮನ್ ಗಿಲ್ ಅವರ ಆಕರ್ಷಕ ಶತಕ, ವಿರಾಟ್ ಕೊಹ್ಲಿ ಅವರ ಸ್ಫೋಟಕ ಬ್ಯಾಟಿಂಗ್ ಹಾಗೂ ಕುಲ್ದೀಪ್ ಯಾದವ್ ಅವರ ಮಾಂತ್ರಿಕ ಬೌಲಿಂಗ್ ನೆರವಿನಿಂದ ಭಾರತ ಈ ಸರಣಿಯಲ್ಲಿ ಶುಭಾರಂಭ ಮಾಡಿದೆ.

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡವು ಆರಂಭದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿತು. ಪಂದ್ಯದ ಒಂದು ಹಂತದಲ್ಲಿ ಕೆರಿಬಿಯನ್ ಬ್ಯಾಟರ್‌ಗಳ ಅಬ್ಬರ ನೋಡಿದರೆ ಮೊತ್ತ 340 ರಿಂದ 350 ರನ್ ತಲುಪುವುದು ಖಚಿತ ಎನಿಸಿತ್ತು. ಆದರೆ ಭಾರತದ ಬೌಲರ್‌ಗಳು ಕೊನೆಯ ಹಂತದಲ್ಲಿ ಚೇತರಿಸಿಕೊಂಡು ವಿಂಡೀಸ್ ಪಡೆಯನ್ನು 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 295 ರನ್‌ಗಳಿಗೆ ನಿಯಂತ್ರಿಸಿದರು.

296 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾ, ಆರಂಭದಿಂದಲೇ ಎದುರಾಳಿ ಬೌಲರ್‌ಗಳ ಮೇಲೆ ಸವಾರಿ ಮಾಡಿತು. ನಾಯಕ ಶುಭ್‌ಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿ ಅವರ ಜವಾಬ್ದಾರಿಯುತ ಆಟದ ನೆರವಿನಿಂದ ಭಾರತ ತಂಡ ಕೇವಲ 41.4 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗುರಿ ತಲುಪಿ ಜಯಭೇರಿ ಬಾರಿಸಿತು.

ಕುಲ್ದೀಪ್ ಮ್ಯಾಜಿಕ್: ಗಿಲ್ ಶ್ಲಾಘನೆ

ಪಂದ್ಯದ ನಂತರ ಮಾತನಾಡಿದ ಟೀಮ್ ಇಂಡಿಯಾ ನಾಯಕ ಶುಭ್‌ಮನ್ ಗಿಲ್, ಗೆಲುವಿನ ಕ್ರೆಡಿಟ್ ಅನ್ನು ಬೌಲರ್‌ಗಳಿಗೆ ನೀಡಿದರು. “ವೆಸ್ಟ್ ಇಂಡೀಸ್ ತಂಡದ ಆರಂಭಿಕ ಜೋಡಿ ಮತ್ತು ಟಾಪ್ ಆರ್ಡರ್ ಬ್ಯಾಟಿಂಗ್ ಶೈಲಿ ನೋಡಿದಾಗ ಅವರು 350 ರನ್ ಗಡಿ ದಾಟುವುದು ಖಚಿತ ಎಂದೆನಿಸಿತ್ತು. ಆದರೆ ಆ ನಿರ್ಣಾಯಕ ಹಂತದಲ್ಲಿ ನಮ್ಮ ನೆರವಿಗೆ ಬಂದಿದ್ದು ಕುಲ್ದೀಪ್ ಯಾದವ್. ಮಿಡಲ್ ಓವರ್‌ಗಳಲ್ಲಿ ಕುಲ್ದೀಪ್ ತಂದುಕೊಟ್ಟ ಪ್ರಮುಖ ವಿಕೆಟ್‌ಗಳು ಪಂದ್ಯಕ್ಕೆ ದೊಡ್ಡ ತಿರುವು ನೀಡಿದವು. ಎದುರಾಳಿ ಪಡೆಯನ್ನು 300 ರನ್‌ಗಳ ಒಳಗೆ ಕಟ್ಟಿಹಾಕಲು ಕುಲ್ದೀಪ್ ಅವರ ಬೌಲಿಂಗ್ ಪ್ರಮುಖ ಕಾರಣವಾಯಿತು” ಎಂದು ಗಿಲ್ ಶ್ಲಾಘಿಸಿದರು.

ಕೊಹ್ಲಿ ಅಬ್ಬರಕ್ಕೆ ನಾಯಕ ಫಿದಾ

ಇದೇ ವೇಳೆ ಕ್ರೀಸ್‌ನಲ್ಲಿ ಸಿಕ್ಸರ್‌ಗಳ ಸುರಿಮಳೆ ಗೈದ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಗಿಲ್, “ವಿರಾಟ್ ಭಾಯ್ ಪ್ರಸ್ತುತ ತಮ್ಮ ಕ್ರಿಕೆಟ್ ಅನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಯಾವುದೇ ಮಾನಸಿಕ ಒತ್ತಡವಿಲ್ಲದೆ ಮುಕ್ತವಾಗಿ ಬ್ಯಾಟ್ ಬೀಸುತ್ತಿದ್ದಾರೆ. ಅವರಲ್ಲಿ ಮೊದಲಿನಿಂದಲೂ ಸಿಕ್ಸರ್ ಬಾರಿಸುವ ಅಗಾಧ ಸಾಮರ್ಥ್ಯವಿತ್ತು, ಆದರೆ ಈಗ ಅದನ್ನು ಅವರು ಮತ್ತೊಂದು ಎತ್ತರಕ್ಕೆ ಕೊಂಡೊಯ್ದಿದ್ದಾರೆ” ಎಂದರು.

“ಕೊಹ್ಲಿಯಂತಹ ಶ್ರೇಷ್ಠ ಹಾಗೂ ಅನುಭವಿ ಆಟಗಾರನಿಗೆ ನಾಯಕನಾಗಿ ನಾನು ಯಾವುದೇ ಸಲಹೆ ನೀಡುವ ಅಗತ್ಯವಿಲ್ಲ. ಅವರಿಗೆ ಹೇಗೆ ಆಡಬೇಕು ಅನಿಸುತ್ತದೋ ಹಾಗೆ ಆಡಲು ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು. ಅವರು ಫಾರ್ಮ್‌ನಲ್ಲಿದ್ದರೆ ಏಕಾಂಗಿಯಾಗಿ ಪಂದ್ಯದ ರೂಪುರೇಷೆಯನ್ನೇ ಬದಲಿಸಿ ಗೆಲುವು ತಂದುಕೊಡುತ್ತಾರೆ” ಎಂದು ಕೊಂಡಾಡಿದರು.

ಆಲ್‌ರೌಂಡ್ ಪ್ರದರ್ಶನದ ಮೂಲಕ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿರುವ ಭಾರತ ತಂಡ, ಮುಂಬರುವ ಪಂದ್ಯಗಳಲ್ಲೂ ಇದೇ ಗೆಲುವಿನ ಓಟವನ್ನು ಮುಂದುವರಿಸುವ ಆತ್ಮವಿಶ್ವಾಸದಲ್ಲಿದೆ.

Must Read