ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಶಾಹಿ ಮಸೀದಿಯ ಒಂದು ಭಾಗವನ್ನು ರಸ್ತೆ ಅಗಲೀಕರಣಕ್ಕಾಗಿ ತೆರವುಗೊಳಿಸುವ ವಿಚಾರ ಸೋಮವಾರ ಉದ್ವಿಗ್ನತೆಗೆ ಕಾರಣವಾಗಿದೆ.
ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆದಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ. ಘಟನೆಯಲ್ಲಿ ಕೆಲವು ಪೊಲೀಸ್ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2028ರಲ್ಲಿ‘ಸಿಂಹಸ್ಥ ಕುಂಭಮೇಳ’
2028ರಲ್ಲಿ ನಡೆಯಲಿರುವ ‘ಸಿಂಹಸ್ಥ ಕುಂಭಮೇಳ’ದ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳನ್ನು ಅಗಲೀಕರಣ ಮಾಡುವ ಕಾಮಗಾರಿ ಕೈಗೊಳ್ಳಲಾಗಿತ್ತು, ಛತ್ರಿ ಚೌಕ್ ಸಮೀಪದ ಶಾಹಿ ಮಸೀದಿಯ ಸುಮಾರು 11 ಅಡಿ ಭಾಗವು ಯೋಜಿತ ರಸ್ತೆ ಮಾರ್ಗದ ವ್ಯಾಪ್ತಿಗೆ ಬರುವ ಕಾರಣ ಅದರ ತೆರವಿಗೆ ಮುಂದಾಗಿತ್ತು.
ಅಧಿಕಾರಿಗಳ ಪ್ರಕಾರ, ಸಮುದಾಯದ ಪ್ರತಿನಿಧಿಗಳೊಂದಿಗೆ ನಡೆದ ಮಾತುಕತೆಯ ಬಳಿಕ ಮಸೀದಿ ಸಮಿತಿಯೇ ತೆರವು ಕಾರ್ಯಕ್ಕೆ ಮುಂದಾಗಿತ್ತು ಎನ್ನಲಾಗಿದೆ.
ಆದರೆ ಸೋಮವಾರ ಬೆಳಗ್ಗೆ ಮಸೀದಿ ಬಳಿ ಜನರು ಮತ್ತೆ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ ಬಳಿಕ ಪರಿಸ್ಥಿತಿ ಬಿಗಡಾಯಿಸಿತು. ಕೆಲವರು ಪೊಲೀಸರತ್ತ ಕಲ್ಲು ತೂರಿದ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಜನರನ್ನು ಚದುರಿಸಲು ಅಶ್ರುವಾಯು ಬಳಸಿದರು.
ರಸ್ತೆ ಅಗಲೀಕರಣ ಯೋಜನೆಯಡಿ ಕಂಠಾಲ್ ಚೌರಾಹಾದಿಂದ ಗೋಪಾಲ್ ಮಂದಿರದವರೆಗಿನ ಸುಮಾರು 900 ಮೀಟರ್ ಮಾರ್ಗವನ್ನು 15 ಮೀಟರ್ ಅಗಲಕ್ಕೆ ವಿಸ್ತರಿಸುವ ಉದ್ದೇಶವಿದೆ. ಈ ಯೋಜನೆಯಲ್ಲಿ ಹಲವು ಕಟ್ಟಡಗಳ ಭಾಗಗಳು ತೆರವುಗೊಳ್ಳಲಿವೆ.
ವಿವಾದ ಈಗಾಗಲೇ ಮಧ್ಯಪ್ರದೇಶ ಹೈಕೋರ್ಟ್‌ಗೂ ತಲುಪಿದ್ದು, ಈ ಸಂಬಂಧದ ಕಾನೂನು ಪ್ರಕ್ರಿಯೆಯೂ ಮುಂದುವರಿದಿದೆ.



