September 28, 2026
Monday, September 28, 2026
spot_img

ಬರ ಪರಿಹಾರ ಘೋಷಣೆಗೆ ಮೀನಾಮೇಷ ಎಣಿಸುತ್ತಿದ್ದಾರೆ: ರಾಜ್ಯ ಸರ್ಕಾರದ ವಿರುದ್ಧ ನಿಖಿಲ್ ವಾಗ್ದಾಳಿ

ಹೊಸದಿಗಂತ ವರದಿ ಕನಕಪುರ:

ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಆವರಿಸಿದ್ದು, ಅಂತರ್ಜಲ ಮಟ್ಟ ಸಂಪೂರ್ಣ ಕುಸಿದಿದೆ. ಜಾನುವಾರುಗಳಿಗೆ ಮೇವು ಸಿಗುತ್ತಿಲ್ಲ, ಕುಡಿಯಲು ಕೆರೆ-ಕಟ್ಟೆಗಳಲ್ಲೂ ನೀರಿಲ್ಲದಂತಾಗಿದೆ. ಆದರೂ ರಾಜ್ಯ ಸರ್ಕಾರ ಬರ ಪರಿಹಾರ ಘೋಷಣೆ ಮಾಡಲು ಮೀನಾಮೇಷ ಎಣಿಸುತ್ತಾ, ಕೇಂದ್ರದ ಕಡೆ ಕೈ ತೋರಿಸಿ ಸುಮ್ಮನೆ ಕುಳಿತಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಕನಕಪುರ ಪಟ್ಟಣದ ರೈಸ್ ಮಿಲ್ ಶಿವಾನಂದ ಸರ್ಕಲ್ ನಿಂದ ಆರಂಭವಾದ ಜೆಡಿಎಸ್ ರೈತ ಸ್ವಾಭಿಮಾನ ಪಾದಯಾತ್ರೆಯಲ್ಲಿ ಸಹಸ್ರಾರು ಜನರು ಭಾಗಿಯಾಗಿ ಬೆಂಬಲ ನೀಡಿದರು. ಚೆನ್ನಬಸಪ್ಪ ವೃತ್ತದಲ್ಲಿ ರೈತ ಗೀತೆಯೊಂದಿಗ ಬಹಿರಂಗ ಸಮಾವೇಶಕ್ಕೆ ಚಾಲನೆ ನೀಡಲಾಯಿತು. ನಿಖಿಲ್ ಕುಮಾರಸ್ವಾಮಿ ಸಹಿತ ಹಲವು ಜೆಡಿಎಸ್‌ ನಾಯಕರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದರು.

ಸಮಾವೇಶ ಉದ್ದೇಶಿಸಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ ಕಾಂಗ್ರೆಸ್ ಆಡಳಿತಕ್ಕೆ ಬಂದ ಬಳಿಕ ನಾಡಿನ ರೈತರ ಹೆಸರು ಹೇಳಿ ಸರ್ಕಾರ ರಚನೆ ಮಾಡಿದರೂ, ಮೂರುವರೆ ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅನ್ನ ಹಾಕುವ ರೈತನ ಬದುಕು ಬೀದಿಗೆ ಬಂದಿದೆ. ಸರ್ಕಾರದಲ್ಲಿ ಕುಳಿತಿರುವ ಜನಪ್ರತಿನಿಧಿಗಳು ಜಿಲ್ಲೆಯ ಹೆಸರನ್ನು ಮಾತ್ರ ಬದಲಿಸಿದ್ದಾರೆ ಹೊರತು, ರೈತರ ಸಮಸ್ಯೆ ಆಲಿಸಿಲ್ಲ. ಅವರು ರಿಯಲ್ ಎಸ್ಟೇಟ್ ಮಾಡುವುದರಲ್ಲಿ ಬ್ಯುಸಿ ಇದ್ದಾರೆ, ರೈತರ ಬಗ್ಗೆ ಚಿಂತೆ ಇಲ್ಲ ಎಂದು ಕಿಡಿಕಾರಿದರು.

ಹೃದಯವಂತ ಕುಮಾರಣ್ಣ :

ಬದುಕು, ಭಾವನೆ ಅಂತಾರೆ. ಬಡವರ ಬಗ್ಗೆ ಅರ್ಥ ಮಾಡಿಕೊಳ್ಳಲು ಮಾತೃ ಹೃದಯ ಬೇಕು. ಆ ಹೃದಯ ಇರುವುದು ಕುಮಾರಣ್ಣನಿಗೆ ಮಾತ್ರ. ಅತ್ಯಲ್ಪ ಅವಧಿಯ ಆಡಳಿತ ಮಾಡಿದರೂ ಕುಮಾರಣ್ಣ ನಾಡಿನ ಜನರ, ರೈತರ, ಹೆಣ್ಣು ಮಕ್ಕಳ, ಶೋಷಿತರ ನೋವಿಗೆ ಸ್ಪಂದಿಸಿದ್ದಾರೆ. ನಿಮ್ಮ ಜಿಲ್ಲೆಯವರು ಸಿಎಂ ಆಗಿದ್ದಾರೆ. ದೇವೇಗೌಡರು, ಕುಮಾರಸ್ವಾಮಿ, ನಿಖಿಲ್ ನಾವೆಲ್ಲರೂ ನೀವು ಸಿಎಂ ಆಗಿರುವುದಕ್ಕೆ ಹೊಟ್ಟೆಕಿಚ್ಚು ಪಡುವುದಿಲ್ಲ. ಇಲ್ಲಿ ನಿಮಗೆ ಮತ ಹಾಕಿರುವ ಜನತೆ ಇದ್ದಾರೆ, ಅವರ ಪರವಾಗಿ ಕೆಲಸ ಮಾಡಿ, ನಿಮಗೆ ನಾವೇ ಶಾಲು, ಹಾರ ಹಾಕಿ ಸನ್ಮಾನ ಮಾಡುತ್ತೇವೆ. ಆದರೆ ಕಳೆದ ಹಲವು ದಿನಗಳಿಂದ ಬೈರಮಂಗಲ ಮಹಿಳೆಯರಿಗೆ ಕಣ್ಣೀರು ಹಾಕಿಸಿದ್ದೀರಿ, ಬಹಳ ದಿನ ನೀವು ರಾಜಕಾರಣ ಮಾಡಲು ಸಾಧ್ಯವಿಲ್ಲ ಎಂದು ಗುಡುಗಿದರು.

ದಿವಾಳಿ ಸರ್ಕಾರ :

ರಾಜ್ಯದ 234 ತಾಲ್ಲೂಕುಗಳಲ್ಲಿ 217 ತಾಲ್ಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಿದ್ದೀರಿ. KSNDMC ವರದಿ ಬಂದು ಮೂರು ತಿಂಗಳಾದರೂ ಬರ ಎಂದು ಘೋಷಿಸಲು ಮೀನಾಮೇಷ ಎಣಿಸುತ್ತಿದ್ದೀರಿ. ಉಳುಮೆ, ಬೀಜ, ಗೊಬ್ಬರ, ಕೂಲಿ ಎಂದು ಎಕರೆಗೆ 50 ಸಾವಿರ ಖರ್ಚಾಗುತ್ತಿದೆ. ನೀವು ಕೊಡುತ್ತಿರುವುದು ಕೇವಲ 2500 ರೂಪಾಯಿ ಬರ ಪರಿಹಾರ. ಇದು ಬರೀ ಘೋಷಣೆ ಮಾತ್ರ. ಸಿದ್ದರಾಮಣ್ಣ ಬಜೆಟ್ ಮಾಡಿ ಹೋದ ಬಳಿಕ ಖಜಾನೆಯಲ್ಲಿ ಹಣವೇ ಇಲ್ಲ. ಹೊಸ ಘೋಷಣೆ ಮಾಡಬೇಡಿ ಎಂದು ಆರ್ಥಿಕ ಇಲಾಖೆಯೇ ಹೇಳಿದೆ. ಇದು ದಿವಾಳಿಯಾದ ಸರ್ಕಾರ. ಗ್ಯಾರಂಟಿ ಹೆಸರಲ್ಲಿ ಹಣವನ್ನು ಗುಳುಂ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಎಂ ಅವರ ಸ್ವಕ್ಷೇತ್ರದಲ್ಲೇ ತೀವ್ರ ಬರ ಪರಿಸ್ಥಿತಿ ಇದ್ದು, ಇದುವರೆಗೂ ಬಂದು ರೈತರ ಸಮಸ್ಯೆ ಆಲಿಸಿಲ್ಲ. ಹಾಗಾಗಿ ಸಿಎಂ ಕ್ಷೇತ್ರದಿಂದಲೇ ರೈತ ಸ್ವಾಭಿಮಾನ ಯಾತ್ರೆಯನ್ನು ಆರಂಭಿಸಿದ್ದೇನೆ. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪಾದಯಾತ್ರೆ ಮಾಡಿ ರೈತರ ಸಮಸ್ಯೆ ಆಲಿಸುತ್ತೇನೆ. ಮುಂದಿನ ದಿನಗಳಲ್ಲಿ ನಮ್ಮ ಕುಮಾರಣ್ಣನಿಗೆ ಒಂದು ಅವಕಾಶ ಕೊಡಿ ಎಂದು ಕನಕಪುರದ ಜನತೆಯಲ್ಲಿ ಮನವಿ ಮಾಡುತ್ತೇನೆ ಎಂದರು.

ಇದನ್ನೂ ಓದಿ:

ರೈತ ಸ್ವಾಭಿಮಾನ ಯಾತ್ರೆಯಲ್ಲಿ ಶಾಸಕ ಹೆಚ್.ಟಿ.ಮಂಜು, ವಿಧಾನ ಪರಿಷತ್ ಸದಸ್ಯ ಶರವಣ, ಮಾಜಿ ಶಾಸಕರಾದ ಕೃಷ್ಣಾರೆಡ್ಡಿ, ಮಾಜಿ ಶಾಸಕ ಎ.ಮಂಜುನಾಥ್, ಮಾಜಿ ವಿಧಾನ ಪರಿಷತ್ ಸದಸ್ಯ ರಮೇಶ್ ಗೌಡ, ಜಿಲ್ಲಾಧ್ಯಕ್ಷ ಎಚ್.ಸಿ.ಜಯಮುತ್ತು, ತಾಲ್ಲೂಕು ಅಧ್ಯಕ್ಷರುಗಳಾದ ಸಬ್ಬಕೆರೆ ಶಿವಲಿಂಗಯ್ಯ, ನಾಗರಾಜು (ಚಿಕ್ಕಪ್ಪ), ಗೋವಿಂದಳ್ಳಿ ನಾಗರಾಜು, ಹಾರೋಹಳ್ಳಿ ರಾಮು, ಮುಖಂಡರಾದ ಚಿನ್ನಸ್ವಾಮಿ, ಗೇರಹಳ್ಳಿ ರಾಜೇಶ್, ಪವಿತ್ರಾ, ಸಿದ್ದಮರೀಗೌಡ, ಕಬ್ಬಾಲೇಗೌಡ, ಜಿ.ಟಿ‌.ಕೃಷ್ಣೇಗೌಡ, ವಕೀಲ ರಾಜಶೇಖರ್, ಜಯಕುಮಾರ್, ಕೆಂಪರಾಜು, ದೊರೆಸ್ವಾಮಿ, ಆಡಿಟರ್ ಕುಮಾರ್, ಕಾಂತರಾಜು, ಬಾಲಗೇರಿ ರವಿ, ಸ್ಟುಡಿಯೋ ಚಂದ್ರು, ಸುರೇಶ್, ಸ್ಟುಡಿಯೋ ಸಿದ್ದು ಸೇರಿದಂತೆ ಜಿಲ್ಲೆಯ ಐದು ತಾಲ್ಲೂಕುಗಳಿಂದ ಆಗಮಿಸಿದ್ದ ಸಾವಿರಾರು ರೈತರು, ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

ನಿಖಿಲ್ ಕುಮಾರಸ್ವಾಮಿ ಅವರ ಪ್ರಮುಖ ಬೇಡಿಕೆಗಳು

  1. ಹಿಂದೆ ಬರಗಾಲದ ಸಮಯದಲ್ಲಿ ಕುಮಾರಸ್ವಾಮಿ ಅವರು ಕೇಂದ್ರದತ್ತ ನೋಡದೇ ರೈತರ ಸಾಲಮನ್ನಾ ಮಾಡಿದಂತೆ, ಈಗಲೂ ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು.
  2. ರೈತರಿಗೆ ಕನಿಷ್ಠ 8 ಗಂಟೆ 3 ಫೇಸ್ ವಿದ್ಯುತ್ ಪೂರೈಕೆ ಮಾಡಬೇಕು. ಈಗ ದಿನಕ್ಕೆ 2 ಗಂಟೆ ಮಾತ್ರ ನೀಡಲಾಗುತ್ತಿದೆ.
  3. ಸಿಎಂ ಘೋಷಿಸಿರುವ 2500 ರೂ. ಬರ ಪರಿಹಾರ ಕೇವಲ ಮೂಗಿಗೆ ತುಪ್ಪ ಸವರುವ ಕೆಲಸವಾಗಿದ್ದು, ಕೂಡಲೇ ಕನಿಷ್ಠ 25 ಸಾವಿರ ರೂ. ಬರ ಪರಿಹಾರ ನೀಡಬೇಕು.
  4. 4 ಟ್ರಿಗೊನೊಮೆಟಿರಿ ಮೇವು ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು.

ವೃದ್ಧಾಪ್ಯ ವೇತನವಿಲ್ಲದೆ ವೃದ್ಧೆಯ ಅಳಲು

ನಿಖಿಲ್ ಕುಮಾರಸ್ವಾಮಿ‌ ನೇತೃತ್ವದ ರೈತ ಸ್ವಾಭಿಮಾನ ಯಾತ್ರೆಯ ವೇದಿಕೆಯಲ್ಲಿ ವೃದ್ಧೆಯೊಬ್ಬರು ವೃದ್ಧಾಪ್ಯ ವೇತನ ಬಾರದ ಬಗ್ಗೆ ತಮ್ಮ ಅಳಲು ತೋಡಿಕೊಂಡರು.

ನಿಖಿಲ್ ಕುಮಾರಸ್ವಾಮಿ ಅವರ ಎದುರೇ ಕಣ್ಣೀರು ಹಾಕಿ ಮಗಾ, 3 ತಿಂಗಳಿಂದ ಪಿಂಚಣಿ ಬಂದಿಲ್ಲ. ಬದುಕೋದು ಕಷ್ಟ ಆಗಿದೆ ಎಂದು ದುಃಖ ತೋಡಿಕೊಂಡದ್ದು ಮನಕಲಕುವಂತಿತ್ತು. ಸಿಎಂ ಕ್ಷೇತ್ರದಲ್ಲೇ ವೃದ್ಧಾಪ್ಯ ಪಿಂಚಣಿ ಬರುತ್ತಿಲ್ಲ ಎಂಬುದು ಸರ್ಕಾರದ ಆರ್ಥಿಕ ಪರಿಸ್ಥಿತಿ ದಿವಾಳಿತನಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಜೆಡಿಎಸ್‌ನ ನಾಯಕರು ಆಕ್ರೋಶ ವ್ಯಕ್ತಪಡಿಸಿದರು.

ತಕ್ಷಣ ಸ್ಪಂದಿಸಿದ ನಿಖಿಲ್ ಕುಮಾರಸ್ವಾಮಿ, ವೃದ್ಧೆಗೆ ಧೈರ್ಯ ತುಂಬಿ ಅಜ್ಜಿ ಚಿಂತೆ ಮಾಡಬೇಡಿ, ನಾನು ಇದ್ದೇನೆ, ಅಧಿಕಾರಿಗಳ ಜೊತೆ ಮಾತನಾಡಿ ನಿಮ್ಮ ಪಿಂಚಣಿ ಕೊಡಿಸುತ್ತೇನೆ ಎಂದು ಭರವಸೆ ನೀಡಿದರು.

Must Read