September 28, 2026
Monday, September 28, 2026
spot_img

ಬೆಂಗಳೂರಿನ ಯೋಜನೆಗಳಿಗೆ ಕೇಂದ್ರದ ಗ್ರೀನ್ ಸಿಗ್ನಲ್ ಬೇಕು: ರಾಜನಾಥ್, ಪಾಟೀಲ್‌ಗೆ ಡಿಕೆಶಿ ಮನವಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ಪ್ರಮುಖ ಮೂಲಸೌಕರ್ಯ ಯೋಜನೆಗಳಿಗೆ ಅಗತ್ಯವಿರುವ ರಕ್ಷಣಾ ಭೂಮಿ ಹಾಗೂ ನೀರಾವರಿ ಯೋಜನೆಗಳ ಅನುಮೋದನಾ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ನವದೆಹಲಿಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರನ್ನು ಪ್ರತ್ಯೇಕವಾಗಿ ಭೇಟಿಯಾದ ಅವರು ಹಲವು ಬಾಕಿ ವಿಚಾರಗಳನ್ನು ಪ್ರಸ್ತಾಪಿಸಿದರು.

ಏಳು ಪ್ರಸ್ತಾವನೆಗಳ ಚರ್ಚೆ

ರಕ್ಷಣಾ ಸಚಿವರೊಂದಿಗಿನ ಸಭೆಯಲ್ಲಿ ಬೆಂಗಳೂರಿನ ಮೂಲಸೌಕರ್ಯಕ್ಕೆ ಸಂಬಂಧಿಸಿದ ಏಳು ಪ್ರಸ್ತಾವನೆಗಳ ಬಗ್ಗೆ ಚರ್ಚೆ ನಡೆಯಿತು. ಇಬ್ಲೂರು ಫೈರಿಂಗ್ ರೇಂಜ್ ಸಮೀಪದ ಸುಮಾರು 730 ಎಕರೆ ರಕ್ಷಣಾ ಭೂಮಿಯನ್ನು ಸಾರ್ವಜನಿಕ ಉದ್ಯಾನವಾಗಿ ಅಭಿವೃದ್ಧಿಪಡಿಸುವ ಪ್ರಸ್ತಾವವೂ ಇದರಲ್ಲಿ ಸೇರಿದೆ. ವಾಣಿಜ್ಯ ಚಟುವಟಿಕೆಗಳಿಗೆ ಬಳಸದೆ, ನಗರದ ಹಸಿರು ಪ್ರದೇಶವಾಗಿ ಉಳಿಸುವ ಉದ್ದೇಶವನ್ನು ರಾಜ್ಯ ಸರ್ಕಾರ ತಿಳಿಸಿದೆ.

ಇದರ ಜೊತೆಗೆ ಲೋವರ್ ಅಗರಂ ರಸ್ತೆ–ಈಜಿಪುರ ಜಂಕ್ಷನ್–ಸರ್ಜಾಪುರ ರಸ್ತೆಯನ್ನು ಸಂಪರ್ಕಿಸುವ ರಸ್ತೆ, ಬಳ್ಳಾರಿ ರಸ್ತೆ–ಸರೋವರ ಲೇಔಟ್ ಸಂಪರ್ಕ ರಸ್ತೆ, ಮೇಖ್ರಿ ವೃತ್ತದ ರಸ್ತೆ ವಿಸ್ತರಣೆಗೆ ರಕ್ಷಣಾ ಭೂಮಿ ಮತ್ತು ಅನುಮತಿಗಳನ್ನು ಶೀಘ್ರ ನೀಡುವಂತೆ ಮನವಿ ಮಾಡಲಾಗಿದೆ.

ಬೆಂಗಳೂರಿನ ಅರ್ಬನ್ ವೆಹಿಕ್ಯುಲರ್ ಟ್ವಿನ್ ಟನಲ್ ಯೋಜನೆಗೂ ಹೆಬ್ಬಾಳ ಸಮೀಪ ಸುಮಾರು 2.039 ಎಕರೆ ರಕ್ಷಣಾ ಭೂಮಿ ಅಗತ್ಯವಿದ್ದು, ಅನುಮತಿ ಪ್ರಕ್ರಿಯೆ ವೇಗಗೊಳಿಸುವಂತೆ ಕೋರಲಾಗಿದೆ. ಪರವಾನಗಿ ಶುಲ್ಕವನ್ನು ಕಡಿಮೆ ಮಾಡುವಂತೆಯೂ ರಾಜ್ಯ ಮನವಿ ಮಾಡಿದೆ.

ಇದನ್ನೂ ಓದಿ:

ಇದೇ ವೇಳೆ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರೊಂದಿಗೆ ನಡೆದ ಚರ್ಚೆಯಲ್ಲಿ 16,745 ಕೋಟಿ ವೆಚ್ಚದ ಮೆಕೆದಾಟು ಸಮತೋಲನ ಜಲಾಶಯ ಮತ್ತು ಕುಡಿಯುವ ನೀರಿನ ಯೋಜನೆ ಪ್ರಮುಖವಾಗಿ ಪ್ರಸ್ತಾಪವಾಯಿತು. ಯೋಜನೆಯ ಡಿಪಿಆರ್ ಮತ್ತು ಅನುಸರಣೆ ವರದಿಯನ್ನು ಆಗಸ್ಟ್ 13ರಂದು ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಲಾಗಿದ್ದು, ಅದರ ಪರಿಶೀಲನೆಯನ್ನು ಪೂರ್ಣಗೊಳಿಸುವಂತೆ ಶಿವಕುಮಾರ್ ಮನವಿ ಮಾಡಿದ್ದಾರೆ.

ಮತ್ತೊಂದೆಡೆ, ಕೃಷ್ಣಾ ಜಲ ವಿವಾದ ನ್ಯಾಯಮಂಡಳಿ-2ರ ತೀರ್ಪಿನ ಪ್ರಕಟಣೆ, ಮೇಲ್ಭದ್ರಾ ಯೋಜನೆಗೆ ಕೇಂದ್ರ ನೆರವು, ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಸೇರಿದಂತೆ ಹಲವು ನೀರಾವರಿ ಪ್ರಸ್ತಾವನೆಗಳಿಗೂ ತ್ವರಿತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.

Must Read