ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಬಿಜೆಪಿ ಮತ್ತು ಮೋದಿ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ ಅವರು ವಾಗ್ದಾಳಿ ನಡೆಸಿದ್ದಾರೆ.
ಇಂದು ನಡೆದ CWC ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಖರ್ಗೆ, ಕಳೆದ 12 ವರ್ಷಗಳಲ್ಲಿ ಮೋದಿ ಸರ್ಕಾರವು ವ್ಯವಸ್ಥಿತ ಸಂಚಿನ ಮೂಲಕ ದೇಶದ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಕೊಳ್ಳೆ ಹೊಡೆಯುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಬಾಬಾಸಾಹೇಬರ ಸಾಲುಗಳ ನೆನಪು
1949ರ ಜೂನ್ 15ರಂದು ಸಂವಿಧಾನ ಸಭೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಆಡಿದ್ದ ಮಾತುಗಳನ್ನು ನೆನಪಿಸಿದ ಖರ್ಗೆ, ʼಮತದಾನದ ಹಕ್ಕು ಪ್ರಜಾಪ್ರಭುತ್ವದ ಜೀವಾಳ. ಸ್ಥಳೀಯ ಸರ್ಕಾರದ ಪೂರ್ವಾಗ್ರಹ ಅಥವಾ ಅಧಿಕಾರಿಯೊಬ್ಬನ ಮರ್ಜಿಗೆ ಅರ್ಹ ಮತದಾರನ ಹೆಸರು ಪಟ್ಟಿಯಿಂದ ಕೈಬಿಡಬಾರದು ಎಂದು ಬಾಬಾಸಾಹೇಬರು ಹೇಳಿದ್ದರು. ಆದರೆ ಇಂದು ಬಿಜೆಪಿ ಆಜ್ಞೆಯಂತೆ ಅಧಿಕಾರಿಗಳು ಆಟವಾಡುತ್ತಿದ್ದಾರೆʼ ಎಂದು ಗಂಭೀರವಾಗಿ ಆರೋಪಿಸಿದರು.
ರಕ್ಷಕನೇ ಭಕ್ಷಕನಾದನೇ?
ಸಂವಿಧಾನವು ಯಾರನ್ನು ಮತಗಳ ರಕ್ಷಕನನ್ನಾಗಿ ಮಾಡಿದೆಯೋ, ಅವರೇ ಇಂದು ಮತಗಳ ಲೂಟಿಕೋರರಾಗಿದ್ದಾರೆ. ಸ್ವಂತ ಸಹೋದ್ಯೋಗಿಗಳೇ ನಂಬದ ಇಂತಹ ಮುಖ್ಯ ಚುನಾವಣಾ ಆಯುಕ್ತರ ಮೇಲೆ ಇಡೀ ದೇಶ ಹೇಗೆ ವಿಶ್ವಾಸ ಇಡಲು ಸಾಧ್ಯ ಎಂದು ಖರ್ಗೆ ಪ್ರಶ್ನಿಸಿದರು.
ಆಯೋಗದ ಮುಂದೆ 5 ಬೇಡಿಕೆಗಳನ್ನು ಇಟ್ಟ ಕಾಂಗ್ರೆಸ್
ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ನಿರ್ಧಾರವನ್ನು ಯಾರು ತಗೆದುಕೊಂಡರು? ಇಬ್ಬರು ಚುನಾವಣಾ ಆಯುಕ್ತರನ್ನು ಆಂತರಿಕ ಪೋರ್ಟಲ್ನಿಂದ ಹೊರಗಿಟ್ಟಿದ್ದು ಏಕೆ? ಆಯೋಗದೊಳಗೆ ಏನಾದರೂ ರಹಸ್ಯ ನಡೆಯುತ್ತಿತ್ತೇ? ಎಂದು ಖರ್ಗೆ ಪ್ರಶ್ನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಆಯೋಗದ ಮುಂದೆ 5 ಬೇಡಿಕೆಗಳನ್ನು ಇಟ್ಟಿದೆ.
ಮತದಾರರ ಪಟ್ಟಿಯಲ್ಲಿ ಮಾಡಲಾದ ಎಲ್ಲಾ ಪ್ರಮುಖ ಬದಲಾವಣೆಗಳ ಸಂಪೂರ್ಣ ಡೇಟಾವನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು.
ಪಟ್ಟಿಯಿಂದ ಹೆಸರು ತೆಗೆದುಹಾಕಲಾದ ಪ್ರತಿಯೊಬ್ಬ ಮತದಾರನಿಗೂ ಮಾಹಿತಿ ನೀಡಿ, ಮೇಲ್ಮನವಿ ಸಲ್ಲಿಸಲು ಪೂರ್ಣ ಅವಕಾಶ ನೀಡಬೇಕು.
ಎಲ್ಲಾ ರಾಜಕೀಯ ಪಕ್ಷಗಳಿಗೆ ಮತದಾರರ ಪಟ್ಟಿಯ ಅಗತ್ಯ ದಾಖಲೆಗಳನ್ನು ಸುಲಭ ಮಾದರಿಯಲ್ಲಿ ಮತ್ತು ಸಮಯಕ್ಕೆ ಸರಿಯಾಗಿ ಒದಗಿಸಬೇಕು.
ಗಂಭೀರ ಅಕ್ರಮಗಳು ಕಂಡುಬಂದಲ್ಲಿ ಸ್ವತಂತ್ರ ಹಾಗೂ ಕಾಲಮಿತಿಯ ತನಿಖೆ ನಡೆಸಬೇಕು.
ಯಾವುದೇ ಮಾಹಿತಿ ಮುಚ್ಚಿಡದಂತೆ ಇಡೀ ಚುನಾವಣಾ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳಬೇಕು.
ಇದನ್ನೂ ಓದಿ:
2027ರ ಐದು ರಾಜ್ಯಗಳ ಎಲೆಕ್ಷನ್ಗೆ ಜಂಟಿ ರಣತಂತ್ರ
ಮುಂಬರುವ 2027ರಲ್ಲಿ ದೇಶದ 5 ಪ್ರಮುಖ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿದ್ದು, ಯಾವುದೇ ಸಾಮಾನ್ಯ ನಾಗರಿಕನ ಮತದಾನದ ಹಕ್ಕಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ನಾಳೆ (ಬುಧವಾರ) ಕಾಂಗ್ರೆಸ್ ಸೇರಿದಂತೆ ಎಲ್ಲಾ ವಿರೋಧ ಪಕ್ಷಗಳ ನಾಯಕರು ಜಂಟಿಯಾಗಿ ಸಭೆ ಸೇರಿ, ಈ ಸಾಂಸ್ಥಿಕ ವಿವಾದದ ವಿರುದ್ಧ ರಾಷ್ಟ್ರಮಟ್ಟದ ಮುಂದಿನ ಹೋರಾಟದ ಬ್ಲೂಪ್ರಿಂಟ್ ಸಿದ್ಧಪಡಿಸಲಿದ್ದಾರೆ.



