September 29, 2026
Tuesday, September 29, 2026
spot_img

ಹುಬ್ಬಳ್ಳಿಯಲ್ಲಿ ಬೃಹತ್ ಪ್ರತಿಭಟನೆ: ಕೇಂದ್ರ ಸರ್ಕಾರ, ಸಚಿವ ಪ್ರಹ್ಲಾದ ಜೋಶಿ ವಿರುದ್ಧ ರೈತರ ಆಕ್ರೋಶ

ಹೊಸದಿಗಂತ ವರದಿ ಹುಬ್ಬಳ್ಳಿ:

ಡಾ. ಸ್ವಾಮಿನಾಥನ್ ಆಯೋಗ ಜಾರಿ, ಪ್ರತಿ ಟನ್ ಕಬ್ಬಿಗೆ ಕನಿಷ್ಠ 5,500 ಬೆಂಬಲ ಬೆಲೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಕೇಂದ್ರ ಸರ್ಕಾರ ಆಗ್ರಹಿಸಿ ರಾಜ್ಯ ರೈತ ಸಂಘ ಹಸಿರು ಸೇನೆ ಸಂಘಟನೆ ಮಂಗಳವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಮಂಗಳವಾರ ನಗರದ ಚನ್ನಮ್ಮ ವೃತ್ತದಲ್ಲಿ ಸಮಾವೇಶಗೊಂಡ ನಾಲ್ಕು ಸಾವಿರಕ್ಕೂ ಹೆಚ್ಚು ರೈತರು ಕೇಂದ್ರ ಸರ್ಕಾರ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಹಾರೂಗೇರಿ ಶಶಿಕಾಂತ ಗುರೂಜಿ, ಕಳೆದ 9 ವರ್ಷದಿಂದ ಎಂಎಸ್ ಪಿ ಕನಿಷ್ಠ ಬೆಲೆ ಜಾಸ್ತಿ ಮಾಡಿಲ್ಲ. ರೈತರು ಹಲವಾರು ಬಾರಿ ಮನವಿ ಸಲ್ಲಿಸಿದರೂ ಸ್ಪಂದಿಸಿಲ್ಲ. ಆದರಿಂದ 31 ಜಿಲ್ಲೆಯ ರೈತರು ಹುಬ್ಬಳ್ಳಿ ಯಲ್ಲಿ ಹೋರಾಟ ಮಾಡುತ್ತಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸ್ಥಳಕ್ಕೆ ಆಗಮಿಸಿ ಬೇಡಿಕೆ ಈಡೇರಿಸುವರೆಗೂ ಹೋರಾಟ ಮುಂದುವರಿಯಲಿದೆ. ಒಂದು ವೇಳೆ ಬರದೆ ಹೋದರೆ ಇನ್ನು ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

5,500 ರೂ. ಬೆಂಬಲ ಬೆಲೆಗೆ ಒತ್ತಾಯ

ರಾಜ್ಯ ರೈತ ಸಂಘ ಹಸಿರು ಸೇನೆ ಸಂಘಟನೆ ರಾಜ್ಯಾಧ್ಯಕ್ಷ ಚನ್ನಪ್ಪ ಪೂಜಾರಿ, ಡಾ. ಸ್ವಾಮಿನಾಥನ್ ಆಯೋಗ ವರದಿ ಜಾರಿಗೆ, ಪ್ರತಿ ಟನ್ ಕಬ್ಬಿಗೆ ಕನಿಷ್ಠ 5,500 ರೂ. ಬೆಂಬಲ ಬೆಲೆ, ಎಥನಾಲ್ ಉತ್ಪಾದನೆಗೆ ಮತ್ತು ವಿಕ್ರಿಗೆ ಪೂರ್ಣ ಪ್ರಮಾಣದ ಅನುಮತಿ ನೀಡಬೇಕು. ವಿಬಿಜಿ ರಾಮ್ ಜಿ ಯೋಜನೆಯಲ್ಲಿ ಎಲ್ಲಾ ಕೃಷಿ ಚಟುವಟಿಕೆಗಳನ್ನು ಅಳವಡಿಸಬೇಕು. ಸಕ್ಕರೆ ಬೆಲೆ ಹೆಚ್ಚುತ್ತಿರುವುದರಿಂದ 2025-26ನೇ ಸಾಲಿನ ಕಬ್ಬು ಪೂರೈಸಿದ ರೈತರಿಗೆ 300 ರೂ. ನೀಡಬೇಕು. ಕರ್ನಾಟಕದ ಮಹಾದಾಯಿ ನೀರಾವರಿ ಯೋಜನೆಯನ್ನು ತ್ವರಿತಗತಿಯಲ್ಲಿ ಎಲ್ಲಾ ಇಲಾಖೆಗಳ ಪರವಾನಿಗೆಯನ್ನು ನೀಡಿ ಕಾಮಗಾರಿ ಆರಂಭಿಸಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ:

ರೈತರು ಬೆಳೆದಂತಹ ಬೆಳೆಗಳಿಗೆ ವೈಜ್ಞಾನಿಕ ಹಾಗೂ ಯೋಗ್ಯ ಬೆಲೆಯನ್ನು ನೀಡುವುದರೊಂದಿಗೆ ಈ ಹಂಗಾಮಿಗೆ ಕಬ್ಬಿನ ಬೆಳೆಗೆ ಪ್ರತಿ ಟನ್‌ಗೆ ಕನಿಷ್ಟ 5,500 ರೂ. ನೀಡುವುದರೊಂದಿಗೆ ಕಾರ್ಖಾನೆಯನ್ನು ಪ್ರಾರಂಭಿಸಬೇಕು. 2019 ರಿಂದ ಸಕ್ಕರೆಯ ಕನಿಷ್ಠ ಬೆಂಬಲ ಬೆಲೆ 31 ರೂ. ಇದ್ದು, ಕಬ್ಬು ಬೆಳೆಯಲು 2019 ರಿಂದ 26ರವರೆಗೆ ಖರ್ಚು 3 ಪಟ್ಟು ಹೆಚ್ಚಾಗಿದ್ದು, ಸಿಎಸಿಪಿ ಖರ್ಚು ವರದಿ ಆಧಾರಿತ ಕನಿಷ್ಠ ಬೆಂಬಲ ಬೆಲೆ 60 ರೂ. ನಿರ್ಧರಿಸಬೇಕು. ಸಕ್ಕರೆಯನ್ನು ಗೃಹಪಯೋಗದ ದರ 50 ರೂ. ಹಾಗೂ ವಾಣಿಜ್ಯ ಉಪಯೋಗದ ದರ 100 ರೂ. ನಿರ್ಧರಿಸಬೇಕು ಎಂದು ಆಗ್ರಹಿಸಿದರು.

Must Read