ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಮೀಡಿಯನ್ ಸಮಯ್ ರೈನಾ ನಡೆಸಿಕೊಡುವ ಅತ್ಯಂತ ಜನಪ್ರಿಯ ಯೂಟ್ಯೂಬ್ ಶೋ ‘ಇಂಡಿಯಾಸ್ ಗಾಟ್ ಲೇಟೆಂಟ್’ ಮತ್ತೆ ಭಾರೀ ವಿವಾದಕ್ಕೆ ಸಿಲುಕಿದೆ. ಶೋ ಉದ್ದಕ್ಕೂ ನಡೆಯುವ ಹಾಸ್ಯ ಮತ್ತು ಸ್ಟಂಟ್ಗಳು ಸ್ವಯಂಪ್ರೇರಿತ ಎಂದು ನಂಬಿದ್ದ ಪ್ರೇಕ್ಷಕರಿಗೆ ಈಗ ದೊಡ್ಡ ಶಾಕ್ ಎದುರಾಗಿದೆ. ಶೋ ಮಧ್ಯದಲ್ಲೇ ಎದ್ದು ಹೋದ ಯುವತಿಯೊಬ್ಬಳು ಇದೀಗ ಇಡೀ ಶೋನ ಅಸಲಿ ರಹಸ್ಯ ಮತ್ತು ಸ್ಕ್ರಿಪ್ಟ್ ಅನ್ನು ಜಗತ್ತಿನ ಮುಂದೆ ತೆರೆದಿಟ್ಟಿದ್ದಾಳೆ.
ನಡೆದಿದ್ದೇನು?
ಇತ್ತೀಚಿನ ಸಂಚಿಕೆಯೊಂದರಲ್ಲಿ, ಪ್ರಸಿದ್ಧ ಮೈಂಡ್ ರೀಡರ್ ಸುಹಾನಿ ಶಾ ಅವರು ಸ್ಪರ್ಧಿಯೊಬ್ಬರ ಮನಸ್ಸಿನಲ್ಲಿದ್ದ ಹೆಸರನ್ನು ಊಹಿಸುವ ಸಾಹಸ ಪ್ರದರ್ಶನ ಮಾಡುತ್ತಿದ್ದರು. ಈ ವೇಳೆ ಸಭಾಂಗಣದಲ್ಲಿದ್ದ ಯುವತಿಯೊಬ್ಬಳು ಇದ್ದಕ್ಕಿದ್ದಂತೆ ಎದ್ದು ಹೊರನಡೆದಿದ್ದಳು. ಇದನ್ನು ಕಂಡ ಸಮಯ್ ರೈನಾ ಆಕೆಯನ್ನು ವೇದಿಕೆ ಮೇಲೆಯೇ ತಮಾಷೆ ಮಾಡಿ ನಕ್ಕಿದ್ದರು. ಆದರೆ ಆ ಯುವತಿ ಹೊರನಡೆದಿದ್ದರ ಹಿಂದಿನ ಅಸಲಿ ಕಾರಣವೇ ಬೇರೆಯಾಗಿತ್ತು.
ಪ್ರಿ-ಪ್ಲಾನ್ಡ್ ರಹಸ್ಯ
ಆ ಯುವತಿ ಕಾರ್ಯಕ್ರಮ ನಡೆಯುವಾಗ ಕಾಲ್ ಅಲ್ಲಿ ಮಾತನಾಡುತ್ತಾ ಹೊರಗೆ ಬಂದಾಗ, ಪರದೆಯ ಹಿಂಭಾಗದಲ್ಲಿ ವಿಚಿತ್ರ ದೃಶ್ಯವೊಂದನ್ನು ಕಂಡಿದ್ದಳು. ಅಲ್ಲಿ ಒಬ್ಬ ವ್ಯಕ್ತಿ ‘ಅನುಭವ್’ ಎಂದು ಬರೆದಿದ್ದ ಟೀ-ಷರ್ಟ್ ಧರಿಸಿ, ಕೈಯಲ್ಲಿ ಲ್ಯಾಪ್ಟಾಪ್ ಹಿಡಿದು ನಿಂತಿದ್ದನು. ಆ ಸಮಯದಲ್ಲಿ ಆಕೆಗೆ ಇದರ ವಿಚಾರ ಅರ್ಥವಾಗಿರಲಿಲ್ಲ. ಆದರೆ, ಸಂಚಿಕೆ ಪ್ರಸಾರವಾದಾಗ ಆಕೆಗೆ ಅಸಲಿ ಸತ್ಯ ತಿಳಿದಿದೆ.
ವೇದಿಕೆ ಮೇಲಿದ್ದ ಸ್ಪರ್ಧಿಗೆ ಯಾವ ಹೆಸರು ಹೇಳಬೇಕೆಂದು ಮೊದಲೇ ತರಬೇತಿ ನೀಡಲಾಗಿತ್ತು. ಒಂದು ವೇಳೆ ಸ್ಪರ್ಧಿ ಆ ಹೆಸರನ್ನು ಮರೆತರೆ, ಪರದೆ ಹಿಂದೆ ನಿಂತಿದ್ದ ವ್ಯಕ್ತಿಯ ಟೀ-ಷರ್ಟ್ ಮೇಲಿನ ಹೆಸರನ್ನು ನೋಡಿ ನೆನಪಿಸಿಕೊಳ್ಳಲು ಈ ಪ್ಲಾನ್ ಮಾಡಲಾಗಿತ್ತು. ಅಂದರೆ ಸುಹಾನಿ ಶಾ ಮಾಡಿದ ಮೈಂಡ್ ರೀಡಿಂಗ್ ಸಂಪೂರ್ಣವಾಗಿ ಮುಂಚಿತವಾಗಿಯೇ ಯೋಜಿಸಿದ ಡ್ರಾಮಾ ಎಂಬುದು ಸ್ಪಷ್ಟವಾಗಿದೆ.
20,000 ರೂಪಾಯಿ ಸ್ಕ್ಯಾಮ್
ಈ ಸ್ಕ್ರಿಪ್ಟೆಡ್ ವಿಚಾರ ತಿಳಿಯುತ್ತಿದ್ದಂತೆ ಆ ಯುವತಿ ತನ್ನ ಸ್ನೇಹಿತರ ಬಳಿ ವಿಷಯ ಹಂಚಿಕೊಂಡಿದ್ದಾಳೆ. ಇದನ್ನೇ ಬಂಡವಾಳ ಮಾಡಿಕೊಂಡ ಆಕೆಯ ಸ್ನೇಹಿತನೊಬ್ಬ, ರಹಸ್ಯವನ್ನು ಬಹಿರಂಗಪಡಿಸುವುದಾಗಿ ಬೆದರಿಸಿ ‘ಲೇಟೆಂಟ್’ ತಂಡದಿಂದ ಬರೊಬ್ಬರಿ 20,000 ರೂಪಾಯಿ ಹಣ ಪಡೆದು ವಂಚಿಸಿದ್ದಾನೆ ಎನ್ನಲಾಗಿದೆ.
ಯಾವುದೇ ರಿಯಾಲಿಟಿ ಶೋ ಅಥವಾ ಕಾಮಿಡಿ ಶೋಗಳಲ್ಲಿ ನೈಜತೆಗೆ ಆದ್ಯತೆ ಇರಬೇಕು ಎಂದು ಬಯಸುವ ಪ್ರೇಕ್ಷಕರಿಗೆ ಈ ಘಟನೆ ತೀವ್ರ ನಿರಾಸೆ ಮೂಡಿಸಿದೆ. ಪ್ರೇಕ್ಷಕರನ್ನು ದಾರಿ ತಪ್ಪಿಸುವ ಇಂತಹ ಶೋಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಈಗ ಚರ್ಚೆ ಹಾಗೂ ಟ್ರೋಲ್ಗಳು ವ್ಯಕ್ತವಾಗುತ್ತಿವೆ.



